ಹೆಬ್ರಿ: ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಅಂತಿಮ ವರ್ಷದ ಬಿ.ಕಾಂ ಮತ್ತು ಬಿ.ಎ ವಿದ್ಯಾರ್ಥಿಗಳಿಗಾಗಿ ಉದ್ಯೋಗ ನೇಮಕಾತಿ ಅಭಿಯಾನವನ್ನು ಉನ್ನತಿ ಸಂಸ್ಥೆ ಹಾಗೂ ಟಾಟಾ ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ಆಯೋಜಿಸಲಾಯಿತು. ಉನ್ನತಿ ಸಂಸ್ಥೆಯ ಮೂಲಕ ಸಾಫ್ಟ್ ಸ್ಕಿಲ್ಸ್ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಈ ಅಭಿಯಾನವು ವೃತ್ತಿಜೀವನದ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿತು.

ಟಾಟಾ ಎಲೆಕ್ಟ್ರಾನಿಕ್ಸ್‌ನ ಎಚ್‌ಆರ್ ಅಧಿಕಾರಿ ಯಶವಂತ್ ಅವರು ವಿದ್ಯಾರ್ಥಿಗಳಿಗೆ ಉದ್ಯೋಗದ ಸ್ವರೂಪ, ಕಂಪನಿಯ ಕಾರ್ಯವೈಖರಿ ಹಾಗೂ ಉದ್ಯೋಗಿಗಳಿಗೆ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿದರು. ತದನಂತರ, ಎಚ್‌ಆರ್ ಅಧಿಕಾರಿಗಳಾದ ಯಶವಂತ್ ಮತ್ತು ವಿಕಾಸ್ ಅವರು ಸಂದರ್ಶನ ಪ್ರಕ್ರಿಯೆ ನಡೆಸಿದರು.ಉನ್ನತಿ ಸಾಫ್ಟ್ ಸ್ಕಿಲ್ಸ್ ತರಬೇತುದಾರ ಗುರುಪ್ರಸಾದ್ ಭಟ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಈ ಉದ್ಯೋಗಾವಕಾಶ ಸದುಪಯೋಗಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸಿದರು. ಕಾಲೇಜಿನ ಪ್ರಾಂಶುಪಾಲ ವಿದ್ಯಾಧರ ಹೆಗಡೆ ಎಸ್ ಅವರು ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನಕ್ಕೆ ಶುಭ ಹಾರೈಸಿದರು.

ಐಕ್ಯೂಎಸಿ ಸಂಯೋಜಕ ಡಾ. ಗಣೇಶ್ ಎಸ್, ಪ್ಲೇಸ್ಮೆಂಟ್ ಸೆಲ್ ಸಂಯೋಜಕಿ ಡಾ. ಮೇವಿ ಮಿರಾಂಡಾ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಸುಷ್ಮಾ ರಾವ್ ಕೆ ಉಪಸ್ಥಿತರಿದ್ದರು.

ಸಂದರ್ಶನ ಪ್ರಕ್ರಿಯೆಯಲ್ಲಿ ಒಟ್ಟು 39 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಅವರಿಗೆ ಟಾಟಾ ಎಲೆಕ್ಟ್ರಾನಿಕ್ಸ್ ಕಂಪನಿಯ ಎಚ್‌ಆರ್ ವಿಕಾಸ್ ಅವರು ನೇಮಕಾತಿ ಪತ್ರ ವಿತರಿಸಿದರು.