ಸಾರಾಂಶ
ಧರ್ಮಸ್ಥಳ ಯೋಜನೆ ಸರ್ವರಿಗೂ ಬದುಕಿನ ದಾರಿ ತೋರಿದೆ: ನೀರೆ ಕೃಷ್ಣ ಶೆಟ್ಟಿ
ಕನ್ನಡಪ್ರಭ ವಾರ್ತೆ ಹೆಬ್ರಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದ ರಾಜ್ಯಮಟ್ಟದ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮಕ್ಕೆ ಹೆಬ್ರಿಯಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಜಾಗೃತಿ ವೇದಿಕೆಯ ಹೆಬ್ರಿ ತಾಲೂಕು ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಧರ್ಮಸ್ಥಳ ಸರ್ವರಿಗೂ ಬದುಕಿನ ದಾರಿ ತೋರಿದೆ. ಯೋಜನೆಯ ಕಾರ್ಯಗಳು ಗ್ರಾಮೀಣ ಜನರ ಬದುಕಿಗೆ ಆಶಾದೀಪವಾಗಿದೆ ಎಂದು ಹೇಳಿದರು.ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಮಾತನಾಡಿ, ಧರ್ಮಸ್ಥಳ ಯೋಜನೆ ಸರ್ಕಾರದ ಮಾದರಿಯಂತೆ ಕಾರ್ಯನಿರ್ವಹಿಸುತ್ತಿದ್ದು, ಲಕ್ಷ ವೃಕ್ಷ ಗಿಡಗಳ ನಾಟಿ ಪರಿಸರದ ಸಮತೋಲನಕ್ಕಾಗಿ ಅತೀ ಮಹತ್ವದ ಹೆಜ್ಜೆ ಎಂದರು.ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್.ಎಸ್. ಮಾತನಾಡಿ, ಯೋಜನೆಯು ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಸ್ಥೆಯಾಗಿದ್ದು, ಬಡವರ ಬದುಕಿಗೆ ಬೆಳಕು ತರುವ ಧ್ಯೇಯದಿಂದ ಕಾರ್ಯನಿರ್ವಹಿಸುತ್ತಿದೆ. ಇದುವರೆಗೆ 7.20 ಕೋಟಿ ಹಣ್ಣು ಗಿಡಗಳನ್ನು ನೆಡಲಾಗಿದೆ. ಇದು ವನ್ಯಜೀವಿಗಳಿಗೆ ಆಹಾರದ ಮೂಲವಾಗುತ್ತಿದೆ ಎಂದರು.ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನದಲ್ಲಿ ನಾಟಿ ಕಾರ್ಯ ಆರಂಭಗೊಂಡು, ನಂತರ ಅನಂತ ಪದ್ಮನಾಭ ಸನ್ನಿಧಿ ಸಭಾಭವನದಲ್ಲಿ ಪ್ರಶಸ್ತಿ ವಿತರಣೆ, ಗೌರವ ಕಾರ್ಯಕ್ರಮಗಳು ನಡೆಯಿತು.ಬೆಳ್ತಂಗಡಿ ಮುಂಡಾಜೆಯ ಸಚಿನ್ ಭಿಡೆ ಅವರಿಗೆ ಅರಣ್ಯ ಮಿತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೊತೆಗೆ ನೆಟ್ಟ ಗಿಡಗಳ ಮಾಹಿತಿ ಸಂಗ್ರಹಿಸಲು ಜಿಯೋ ಟ್ಯಾಗ್ ಆಪ್ ಬಿಡುಗಡೆ ಮಾಡಲಾಯಿತು.ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಅರಣ್ಯ ಇಲಾಖೆಯ ಗೌರವವನ್ನೂ ನೀಡಲಾಯಿತು. ಹೆಬ್ರಿಯ ಭಾಸ್ಕರ ಜೋಯಿಸ್ ಅವರನ್ನು ಗೌರವಿಸಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ. ಗಣಪತಿ ಅವರು ಗಿಡಗಳ ಸಸಿ ವಿತರಣೆ ಮಾಡಿದರು.ಕಾರ್ಯಕ್ರಮದಲ್ಲಿ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಹೆಬ್ರಿ ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ರೇವತಿ, ಜನಜಾಗೃತಿ ವೇದಿಕೆಯ ಜಿಲ್ಲಾ ಸಂಘಟನಾ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಶ್ರೀ ಕ್ಷೇತ್ರ ಟ್ರಸ್ಟಿ ಸಂಪತ್ ಸಾಮ್ರಾಜ್ಯ, ಹಣಕಾಸು ಅಧಿಕಾರಿ ಶಾಂತಾರಾಮ ಪೈ, ಯೋಜನೆ ನಿರ್ದೇಶಕರು ಆನಂದ ಸುವರ್ಣ, ವಿವೇಕ ಪಾಯಸ್, ಮನೋಜ್ ಮಿನೇಜಸ್, ಹೆಬ್ರಿ ವಲಯ ಅರಣ್ಯಾಧಿಕಾರಿ ಮಂಜುಳಾ ಸಿದ್ಧಪ್ಪ, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಸ್ವಾಗತಿಸಿದರು. ಯೋಜನಾಧಿಕಾರಿ ಗಣೇಶ ಆಚಾರ್ಯ ನಿರೂಪಿಸಿದರು. ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ ವಂದಿಸಿದರು.