ಸಾರಾಂಶ
ಕನ್ನಡಪ್ರಭ ವಾರ್ತೆ ಹೆಬ್ರಿ
ಹೆಬ್ರಿ ತಾಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವು ತಾಲೂಕು ಆಡಳಿತ ಸೌಧದ ವಠಾರದಲ್ಲಿ ಶುಕ್ರವಾರ ನಡೆಯಿತು.ಶಾಲಾ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ರಾಷ್ಟ್ರಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಪ್ರಸಾದ್ ಎಸ್.ಎ. ಮಾತನಾಡಿ, ಕರ್ನಾಟಕ ರಾಜ್ಯವು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದು ಮತ್ತು ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಕಾರ್ಕಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ ಮತ್ತು ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಸೀತಾನದಿ ವಿಠ್ಠಲ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕು ಕಚೇರಿ ಸಿಬ್ಬಂದಿ ಹಾಜರಿದ್ದರು.ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಸಭಾ ಕಾರ್ಯಕ್ರಮವನ್ನು ಹೆಬ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಬಂಗೇರ ಉದ್ಘಾಟಿಸಿ ಮಾತನಾಡಿದರು. ಹೆಬ್ರಿ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಉಮೇಶ್, ಸೀತಾನದಿ ವಿಠ್ಠಲ ಶೆಟ್ಟಿ, ರವಿಚಂದ್ರ ಕಾರಂತ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆ.ಜಿ. ಮಾತನಾಡಿದರು. ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆಯನ್ನು ಹೆಬ್ರಿ ತಹಸೀಲ್ದಾರ್ ಪ್ರಸಾದ್ ಎಸ್.ಎ. ವಹಿಸಿದ್ದರು. ಕನ್ನಡ ರಾಜ್ಯೋತ್ಸವದ ಬಗ್ಗೆ ಮಾತನಾಡಿ ಈ ದಿನ ನಾವೆಲ್ಲರೂ ಅತ್ಯಂತ ಸಡಗರ, ಸಂಭ್ರಮದಿಂದ ಎಲ್ಲ ಜಾತಿ, ಮತ, ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವನ್ನು ಆಚರಿಸುತ್ತೇವೆ. ಕನ್ನಡ ನುಡಿ, ಸಂಸ್ಕೃತಿಯನ್ನು ಉಳಿಸಲು ಸದಾ ಕಟ್ಟಿಬದ್ಧರಾಗೋಣ ಎಂದರು.ಎಸ್.ಆರ್. ಕಾಲೇಜು ಹೆಬ್ರಿ, ಪ.ಪೂ. ಕಾಲೇಜು ಹೆಬ್ರಿ, ಸರಕಾರಿ ಪ್ರೌಢಶಾಲೆ ಶಿವಪುರ, ಕೆ.ಪಿ.ಎಸ್. ಮುನಿಯಾಲುು ಕಾಲೇಜು, ಎಂ.ಎನ್.ಡಿ.ಎಸ್.ಎಂ. ಮುದ್ರಾಡಿ ಮೊದಲಾದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಚಾಣಕ್ಯ ಸಂಸ್ಥೆಯಿಂದ ಗೀತಾ ಗಾಯನ, ಪಿಯುಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಹರಿದಾಸ ಬಿ.ಸಿ. ರಾವ್ ಶಿವಪುರ ಅವರನ್ನು ಸನ್ಮಾನಿಸಲಾಯಿತು. ಉಪ ಪ್ರಾಂಶುಪಾಲ ದಿವಾಕರ ಮರಕಲ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಶಿವಪುರ ನಿರೂಪಿಸಿದರು. ಶಿಕ್ಷಕ ಪ್ರವೀಣ್ ಶೆಟ್ಟಿ ವಂದಿಸಿದರು.