ದಲಿತ ಸಂಘಟನೆಗಳ ಒಕ್ಕೂಟದಿಂದ ಹೆಗಡೆ ಪ್ರತಿಕೃತಿ ದಹಿಸಿ ಆಕ್ರೋಶ

| Published : Mar 13 2024, 02:05 AM IST

ಸಾರಾಂಶ

ಸಂಸದ ಅನಂತಕುಮಾರ ಹೆಗಡೆ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಮತ್ತು ದೇಶದ್ರೋಹದ ಅಡಿಯಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೀದರ್

ದೇಶದಲ್ಲಿ 400 ಲೋಕಸಭೆ ಸ್ಥಾನ ಗೆದ್ದರೆ ಭಾರತದ ಸಂವಿಧಾನ ಬದಲಾಯಿಸುತ್ತೇವೆ ಎಂದು ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ನೀಡಿದ್ದಾರೆಂದು ಖಂಡಿಸಿ, ಮಂಗಳವಾರ ಬೀದರ್‌ನಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಪ್ರತಿಕೃತಿ ದಹನ ಮಾಡಿದರು.

ನಗರದ ಡಾ. ಅಂಬೇಡ್ಕರ್‌ ವೃತ್ತದಿಂದ ಮಹಾವೀರ ವೃತ್ತ, ಶಿವಾಜಿ ವೃತ್ತದ ಮೂಲಕ ಪ್ರತಿಭಟನಾ ರ್ಯಾಲಿ ನಡೆಸಿದ ಸಂವಿಧಾನ ಸಂರಕ್ಷಣಾ ಸಮಿತಿ ಮಹಾ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೇಲ್ದಾರ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಬಾಬು ಪಾಸ್ವಾನ, ದಲಿತ ಸೇನೆಯ ಜಿಲ್ಲಾಧ್ಯಕ್ಷ ಶ್ರೀಪತರಾವ ದೀನೆ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಶಿವಕುಮಾರ ನೀಲಿಕಟ್ಟಿ, ಮಾರುತಿ ಕಂಟಿ, ಪ್ರದೀಪ ನಾಟೇಕರ, ಅವಿನಾಶ ದೀನೆ, ಅಂಬಾದಾಸ ಗಾಯಕವಾಡ ಮತ್ತಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಸಂಸದ ಹೆಗಡೆ ಅವರ ಪ್ರತಿಕೃತಿ ದಹಿಸಿ ಬೊಬ್ಬೆ ಹೊಡೆದು ಆಕ್ರೋಶ ವ್ಯಕ್ತಪಡಿಸಿ, ಈ ಹಿಂದೆಯೂ ಸಹ ಸಂವಿಧಾನ ಬದಲಾಯಿಸಲಿಕ್ಕೆ ನಾವು ಬಂದಿದ್ದೇವೆ ಅಂತ ಹೇಳಿದರು. ಕೂಡ ಬಿಜೆಪಿ ಹಾಗೂ ಅವರ ಸಂಘ ಪರಿವಾರದವರು ಯಾವುದೇ ಕ್ರಮ ಜರುಗಿಸಿಲ್ಲ. ಡಾ. ಅಂಬೇಡ್ಕರ್‌ ಹಾಗೂ ಭಾರತದ ಸಂವಿಧಾನದ ಮೇಲೆ ನಿಜವಾದ ಗೌರವ ಮತ್ತು ನಿಷ್ಠೆ ಇದ್ದರೆ ತಕ್ಷಣ ಸಂಸದ ಅನಂತಕುಮಾರ ಹೆಗಡೆ ಅವರನ್ನು ಪಕ್ಷದಿಂದ ಉಚ್ಛಾಟಿಸಿ ಮತ್ತು ದೇಶದ್ರೋಹದ ಅಡಿಯಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.