ಸಾರಾಂಶ
ಮಧುಗಿರಿ: ಪಟ್ಟಣದ ಚೇತನ ಆಂಗ್ಲ ಶಾಲೆಯಲ್ಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮೌಲ್ಯಮಾಪನ ಕೇಂದ್ರದಲ್ಲಿ ಹೆಜ್ಜೇನುಗಳು ಏಕಾಏಕಿ ದಾಳಿ ಮಾಡಿದ ಹಿನ್ನೆಲೆಯಲ್ಲಿ 5 ಮಂದಿ ಶಿಕ್ಷಕರಿಗೆ ಗಾಯಗಳಾಗಿರುವ ಘಟನೆ ಗುರುವಾರ ನಡೆದಿದೆ. ಪಾವಗಡ ತಾಲೂಕಿನ ಶಿಕ್ಷಕರಾದ ಮಂಜುನಾಥ್, ಮಾರುತೀಶ್, ರಾಜ್‌ಗೋಪಾಲ್, ತುಮಕೂರಿನ ರೋಜಾ ಮತ್ತು ತೇಜಸ್ವಿನಿಯವರಿಗೆ ಗಾಯಗಳಾಗಿವೆ. ಮಧ್ಯಾಹ್ನ ಊಟದ ವೇಳೆ ಇದ್ದಕ್ಕಿದ್ದಂತೆ ಮೌಲ್ಯಮಾಪನ ಕೇಂದ್ರದ ಮೂರನೇ ಮಹಡಿಯಲ್ಲಿ ಕಟ್ಟಿರುವ ಗೂಡಿನಿಂದ ಜೇನುಗಳು ಎದ್ದು ಮೌಲ್ಯಮಾಪನದಲ್ಲಿದ್ದ ಶಿಕ್ಷಕರ ಮೇಲೆ ದಾಳಿ ಮಾಡಿವೆ.
ಕೆಲವು ಶಿಕ್ಷಕರು ಜೇನು ದಾಳಿಯಿಂದ ತಪ್ಪಿಸಿಕೊಳ್ಳಲು ಮೌಲ್ಯಮಾಪನ ಕೊಠಡಿ ಒಳಗೆ ಬಾಗಿಲು ಹಾಕಿಕೊಂಡಿದ್ದಾರೆ. ಗಾಯಾಳುಗಳನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಡಿಡಿಪಿಐ ಮಂಜುನಾಥ್, ಶಿಕ್ಷಣ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಬೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.ಶಾಲೆಯಲ್ಲಿ ಕಟ್ಟಿದ್ದ ಜೇನುಗೂಡು ತೆರವು ಮಾಡುವಂತೆ ಏ.8ರಂದು ಚೇತನ ಆಂಗ್ಲ ಶಾಲೆಯ ಮುಖ್ಯ ಶಿಕ್ಷಕರಿಗೆ ಹಾಗೂ ಅರಣ್ಯ ಇಲಾಖೆಗೆ ಡಿಡಿಪಿಐ ಮನವಿ ಸಲ್ಲಿಸಿದ್ದರೂ ಇಲ್ಲಿವರೆಗೂ ತೆರವು ಮಾಡಿಲ್ಲ ಹಾಗಾಗಿ ಈ ಘಟನೆ ನಡೆಯಲು ಕಾರಣ ಏನ್ನಲಾಗಿದೆ. ಇನ್ನೊಂದೆಡೆ ಕೆಲವು ಶಿಕ್ಷಕರು ಶೌಚಾಲಯದಲ್ಲಿ ಧೂಮಪಾನ ಮಾಡಿದ್ದರಿಂದ ಹೊಗೆಯಿಂದಾಗಿ ಜೇನು ನೊಣಗಳು ಎದ್ದು ಬಂದಿವೆ ಎಂದು ಶಿಕ್ಷಕರುಗಳು ಮಾತನಾಡಿಕೊಳ್ಳುತ್ತಿದ್ದರು.