ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಲ್ಕಿ ತಾಲೂಕು ಘಟಕದ ಆಶ್ರಯದಲ್ಲಿ ಮೂಲ್ಕಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ 27ರಂದು ಕಾರ್ನಾಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ.ಜನಪದ ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಬೆಳಗ್ಗೆ ೯.೩೦ಕೆ ನಡೆಯಲಿದೆ. ೮.೧೫ಕ್ಕೆ ಕಾರ್ನಾಡು ಗಾಂಧಿ ಮೈದಾನದಿಂದ ಕಾಲೇಜು ಸಭಾಂಗಣದ ವರೆಗೆ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು, ಕಾರ್ನಾಡು ಶ್ರೀ ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್. ಅರವಿಂದ ಪೂಂಜ ಚಾಲನೆ ನೀಡಲಿದ್ದಾರೆ. ಬಳಿಕ ರಾಷ್ಟ್ರ ಧ್ವಜ, ಪರಿಷತ್ ಧ್ವಜ, ಕನ್ನಡ ಧ್ವಜಾರೋಹಣ ನಡೆಯಲಿದೆ.
ಬೆಳಗ್ಗೆ 9.30ಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪುಸ್ತಕ ಪ್ರದರ್ನನಗಳನ್ನು, ಮೂಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ವಸ್ತು ಪ್ರದರ್ಶನವನ್ನು, ಉದ್ಘಾಟಿಸಲಿದ್ದಾರೆ. ದ.ಕ. ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಆಶಯ ನುಡಿಗಳನ್ನಾಡಲಿದ್ದಾರೆ.ಶ್ರೀ ಕ್ಷೇತ್ರ ಬಪ್ಪನಾಡು ದುರ್ಗಾಪರಮೇಶ್ವರಿ ದೇವಳದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ಕಸಾಪ ಬೆಂಗಳೂರಿನ ಕೇಂದ್ರಿಯ ಮಾರ್ಗದರ್ಶಕ ಸಮಿತಿ ಸದಸ್ಯ ಡಾ.ಮುರಳಿ ಮೋಹನ ಚೂಂತಾರು, ದ.ಕ. ಜಿಲ್ಲಾ ಕಸಾಪದ ಸದಸ್ಯ ಮೋಹನ್ ದಾಸ್ ಸುರತ್ಕಲ್, ಮಂಗಳೂರು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಸರ್ವೋತ್ತಮ ಅಂಚನ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ ಸಮಾರೋಪ: ಸಂಜೆ ನಡೆಯುವ ಸಮಾರೋಪದಲ್ಲಿ ಸಂಸದ ನಳಿನ್ ಕುಮಾರ್ ಅಭ್ಯಾಗತರಾಗಿ ಭಾಗವಹಿಸಲಿದ್ದು, ಹಿರಿಯ ವಿದ್ವಾಂಸ ಡಾ.ಕೆ.ಜಿ.ವಸಂತ ಮಾಧವ ಸಮಾಪನ ಮಾತುಗಳನ್ನಾಡುವರು. ಕಟೀಲು ಕ್ಷೇತ್ರದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಸಾಪ ಕೇಂದ್ರಿಯ ಸಮಿತಿ ಸದಸ್ಯ ಡಾ. ಮಾಧವ ಎಂ.ಕೆ., ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಕರಾವಳಿ ಲೇಖಕಿಯರ ವಾಚಕಿಯರ ಸಂಘ ಅಧ್ಯಕ್ಷೆ ಜ್ಯೋತಿ ಚೇಳಾಯರು, ಉದ್ಯಮಿ ಯದುನಾರಾಯಣ ಶೆಟ್ಟಿ, ಮೂಲ್ಕಿ ವೆಂಕಟರಮಣ ದೇವಳದ ಮೊಕ್ತೇಸರ ಅತುಲ್ ಕುಡ್ವ, ಎಂ.ಆರ್.ಪಿ.ಎಲ್.ನ ಕಾರ್ಪೋರೇಟ್ ಜನರಲ್ ಮ್ಯಾನೇಜರ್ ಡಾ. ರುಡಾಲ್ಫ್ ನೊರೊನ್ಹ, ಹೊಸ ಅಂಗಣ ಮಾಸ ಪತ್ರಿಕೆಯ ಸಂಪಾದಕ ಡಾ.ಹರಿಶ್ಚಂದ್ರ ಸಾಲ್ಯಾನ್ ಮತ್ತಿತರರು ಭಾಗವಹಿಸಲಿದ್ದಾರೆ.ಉದಯ ಕುಮಾರ ಹಬ್ಬು ಅವರ ಕೃತಿಗಳ ಬಿಡುಗಡೆ, ವಿವಿಧ ಸಾಹಿತ್ಯ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸ್ವದೇಶಿ, ಪರಿಸರ ಪೂರಕ ವಸ್ತುಗಳು, ಪುಸ್ತಕಗಳ ಪ್ರದರ್ಶನ ಮಾರಾಟ ಸಮ್ಮೇಳನಕ್ಕೆ ಮೆರುಗು ನೀಡಲಿದೆ. ಸಮ್ಮೇಳನ ಸಮಿತಿಯ ಅಧ್ಯಕ್ಷ ಸುನಿಲ್ ಆಳ್ವ, ಕಾರ್ಯದರ್ಶಿ ದೇವಪ್ರಸಾದ ಪುನರೂರು, ಸಂಚಾಲಕ ಡಾ. ವಾಸುದೇವ ಬೆಳ್ಳೆ ಉಪಸ್ಥಿತರಿರುವರು ಎಂದು ಮೂಲ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಿಥುನ್ ಕೊಡೆತ್ತೂರು ತಿಳಿಸಿದ್ದಾರೆ.