ಸಾರಾಂಶ
ಶಿವಮೊಗ್ಗ : ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳು ಪಕ್ಷವನ್ನು ಗೆಲ್ಲಿಸಿದೆ. ಅದೇ ರೀತಿ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಮತ್ತೆ ಐದು ಗ್ಯಾರಂಟಿಗಳನ್ನು ಇಡೀ ದೇಶದ ಜನತೆಗೆ ನೀಡುತ್ತಿದ್ದು, ಇದರಿಂದ ಕಾಂಗ್ರೆಸ್ ದೇಶದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಭವಿಷ್ಯ ನುಡಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಪಕ್ಷದ ಗ್ಯಾರಂಟಿ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದೇಶದ ಜನತೆಗೆ ಐದು ಗ್ಯಾರಂಟಿ ಕೊಟ್ಟಿದೆ. ಪ್ರತಿ ವರ್ಷ ಮಹಿಳೆಯರಿಗೆ 1 ಲಕ್ಷ ರು. ಎಲ್ಲರಿಗೂ ಕ್ಯಾಷ್‌ಲೆಸ್ ಆರೋಗ್ಯ ವಿಮೆ, ರೈತರ ಬೆಳೆಗೆ ಗರಿಷ್ಠ ಬೆಲೆ, ನಿರುದ್ಯೋಗಿ ಗಳಿಗೆ ಉದ್ಯೋಗ ಸೌಲಭ್ಯಕ್ಕೆ ಹಣ ಹೀಗೆ ವಿವಿಧ ಗ್ಯಾರಂಟಿಗಳನ್ನು ದೇಶದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರುತ್ತಿದ್ದಂತೆ ಜಾರಿ ಮಾಡಲಿದೆ. ಈ ಎಲ್ಲಾ ಗ್ಯಾರಂಟಿ ಸಿಗಲು ಮೊದಲು ಪಕ್ಷವನ್ನು ಗೆಲ್ಲಿಸಬೇಕು. ಅದಕ್ಕಾಗಿ ನಿಮ್ಮ ಬೂತ್‌ನಲ್ಲಿ ಗೆಲುವು ಸಾಧಿಸಿ. ನಮ್ಮ ಬೂತ್ ನಮ್ಮ ಜವಾಬ್ದಾರಿ ಎಂದು ಕರೆ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ತಿಂಗಳಿಗೆ 2 ಸಾವಿರರೂ ನೀಡುವ ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಬಸ್ ಪ್ರಯಾಣದ ಶಕ್ತಿಯೋಜನೆ, 200 ಯೂನಿಟ್‌ವರೆ ಗೂ ಉಚಿತ ವಿದ್ಯುತ್ ನೀಡುವ ಯೋಜನೆ, ನಿರುದ್ಯೋಗಿಗಳಿಗೆ 3 ಸಾವಿರ ರು. ವಿದ್ಯಾನಿಧಿ ಯೋಜನೆ ಹಾಗೂ ಹೆಚ್ಚುವರಿ 10 ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಹೆಚ್ಚುವರಿ ಅಕ್ಕಿ ಕೊಡಲು ಕೇಂದ್ರವನ್ನು ಕೇಳಿದಾಗ ಅದಕ್ಕೆ ಅಡ್ಡಗಾಲು ಹಾಕಿದವರು ಯಡಿಯೂರಪ್ಪ, ರಾಜ್ಯಕ್ಕೆ ಅಕ್ಕಿ ಕೊಡದಂತೆ ನೋಡಿಕೊಂಡರು. ಆದರೂ ನಾವು ಬಿಡಲಿಲ್ಲ. ಅಕ್ಕಿ ಬದಲು ಫಲಾನುಭವಿಗಳಿಗೆ ಹಣ ನೀಡುತ್ತಿದ್ದೇವೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶಿವಮೊಗ್ಗದಲ್ಲಿ ಗೀತಾ ಅವರದ್ದೇ ಮೊದಲ ಗೆಲುವಾಗಬೇಕು, ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯನ್ನು ಸೋಲಿಸಿ ಬಿಜೆಪಿಗೆ ಇಲ್ಲಿಂದಲೇ ಮೊದಲ ಶಾಕ್ ನೀಡಬೇಕು ಎಂದು ಕರೆ ನೀಡಿದರು.ಸಮಾರಂಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಸಚಿವ ಮಧು ಬಂಗಾರಪ್ಪ, ಗೋಪಾಲ ಕೃಷ್ಣ ಬೇಳೂರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಸೂಡ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ರಾಜ್ಯ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ಎನ್. ರಮೇಶ್, ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಎಚ್.ಸಿ.ಯೋಗೇಶ್, ಪಲ್ಲವಿ, ಶ್ರೀನಿವಾಸ್ ಕರಿಯಣ್ಣ, ಎಸ್.ಕೆ. ಮರಿಯಪ್ಪ, ಶರತ್ ಮರಿಯಪ್ಪ ಮತ್ತಿತರರಿದ್ದರು. ಮೋದಿ ಬಾಯಲ್ಲೂ‘ಗ್ಯಾರಂಟಿ’ಉದ್ಘೋಷ!
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಹೆದರಿರುವ ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿ ಎಕ್ಸ್‌ಪೈರಿಯಾಗಿದೆ. ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಿಸಿದಾಗ ಕಾಂಗ್ರೆಸ್ ಅಧಿಕಾರಕ್ಕೆ ಬರೊಲ್ಲ, ಇದು ನಕಲಿ ಗ್ಯಾರಂಟಿ ಎಂದು ಮೋದಿ ಸೇರಿದಂತೆ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆ ಕುರಿತು ತಮಾಷೆ ಮಾಡಿದ್ದರು. ಆದರೆ ಕಾಂಗ್ರೆಸ್ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಗೆದ್ದು ಅಧಿಕಾರ ಹಿಡಿದಿದೆ. ಈ ಗೆಲುವಿ ನಿಂದ ಹೆದರಿದ ಮೋದಿ ತಮ್ಮ ಪ್ರತಿ ಭಾಷಣದಲ್ಲೂ ಈಗ ಗ್ಯಾರಂಟಿ ಪದ ಬಳಸುತ್ತಿದ್ದಾರೆ. ಎಲ್ಲದಕ್ಕೂ ತಾವು ಗ್ಯಾರಂಟಿ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.