ಹೆಲ್ಮೆಟ್ ಇಲ್ಲದೇ ಬರುವಂತಹ ಬೈಕ್ ಗಳಿಗೆ ಯಾವುದೇ ಕಾರಣಕ್ಕೂ ಪೆಟ್ರೋಲ್ ಹಾಕಬಾರದು. ಪೆಟ್ರೋಲ್ ಬಂಕ್ ಮಾಲೀಕರೂ ಸಹ ಪೊಲೀಸರೊಂದಿಗೆ ಕೈ ಜೋಡಿಸಿದರೆ ಈ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಬಹುದು ಎಂದರು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಡಿ.12 ರಿಂದ ಜಿಲ್ಲೆಯಾದ್ಯಂತ ಬೈಕ್ ಸವಾರರು ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದು ಕಡ್ಡಾಯವಾಗಿದ್ದು, ನಿಯಮ ತಪ್ಪಿದರೆ ದಂಡ ವಿಧಿಸಲಾಗುತ್ತದೆ. ತಮ್ಮ ಪ್ರಾಣ ಉಳಿಸುವ ನಿಟ್ಟಿನಲ್ಲಿ ಈ ನಿಯಮ ತಂದಿದ್ದು, ಸವಾರರು ಸಂಚಾರಿ ನಿಯಮ ಪಾಲನೆ ಮಾಡಬೇಕು ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಣೇಶ್ ಮನವಿ ಮಾಡಿದರು.

ಗುಡಿಬಂಡೆ ಪಟ್ಟಣದಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಬೈಕ್ ಸವಾರರಿಗೆ ಹೆಲ್ಮೆಟ್ ಬಳಕೆ ಕಡ್ಡಾಯ ಎಂಬ ಕಾನೂನು ಜಾರಿಯಾಗಿದೆ. ನಾವೂ ಸಹ ಈಗಾಗಲೇ ಸಾಕಷ್ಟು ಬಾರಿ ಜಾಗೃತಿ ಮೂಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೆಲ್ಮೆಟ್ ಕಡ್ಡಾಯ ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿ ಮಾಡಲು ಹಾಗೂ ವಾಹನ ಸವಾರರ ಪ್ರಾಣ ಉಳಿಸಲು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಡಿ.12 ರಿಂದ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಿದ್ದಾರೆ. ಅದರಂತೆ ಎಲ್ಲರೂ ಕಡ್ಡಾಯವಾಗಿ ಬೈಕ್ ಚಲಾಯಿಸುವಾಗ ಹೆಲ್ಮೆಟ್ ಧರಿಸಬೇಕು. ಒಂದು ವೇಳೆ ಹೆಲ್ಮೆಟ್ ಇಲ್ಲದೇ ಸಂಚರಿಸಿದರೆ ಕಾನೂನಿನಂತೆ ಹಂತ ಹಂತವಾಗಿ ದಂಡವನ್ನು ವಿಧಿಸಲಾಗುತ್ತದೆ, ಜೊತೆಗೆ ಕಾನೂನಿನಂತೆ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

ಇನ್ನೂ ಗುಡಿಬಂಡೆ ವ್ಯಾಪ್ತಿಯ ಪೆಟ್ರೋಲ್ ಬಂಕ್ ಗಳಿಗೆ ತೆರಳಿ ಅಲ್ಲೂ ಹೆಲ್ಮೆಟ್ ಕಡ್ಡಾಯ ನಿಯಮದ ಕುರಿತು ಜಾಗೃತಿ ಮೂಡಿಸಲಾಯಿತು.

ಹೆಲ್ಮೆಟ್ ಇಲ್ಲದೇ ಬರುವಂತಹ ಬೈಕ್ ಗಳಿಗೆ ಯಾವುದೇ ಕಾರಣಕ್ಕೂ ಪೆಟ್ರೋಲ್ ಹಾಕಬಾರದು. ಪೆಟ್ರೋಲ್ ಬಂಕ್ ಮಾಲೀಕರೂ ಸಹ ಪೊಲೀಸರೊಂದಿಗೆ ಕೈ ಜೋಡಿಸಿದರೆ ಈ ನಿಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿ ಮಾಡಬಹುದು ಎಂದರು.

ಇದೇ ಸಮಯದಲ್ಲಿ ಸಾರ್ವಜನಿಕರಿಗೆ ಸಂಚಾರಿ ನಿಯಮ ಹಾಗೂ ಅಪರಾಧಗಳ ಕುರಿತು ಮಾಹಿತಿ ನೀಡಲಾಯಿತು. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನಲ್ಲಿ ಏನಾದರೂ ಅಪರಾಧಿಕ ಚಟುವಟಿಕೆಗಳು ನಡೆದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರೂ ಪೊಲೀಸರೊಂದಿಗೆ ಸಹಕಾರ ನೀಡಿದಾಗ ಅಪರಾಧವನ್ನು ತಡೆಗಟ್ಟಬಹುದು ಎಂದು ಹೇಳಿದ ಅವರು, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಅಪಹರಣ, ಪೋಕ್ಸೋ ಕಾಯ್ದೆ, ಸೈಬರ್ ಕ್ರೈಂ, ವರದಕ್ಷಿಣೆ ನಿಷೇಧ ಕಾಯ್ದೆ, ಮಾದಕ ವಸ್ತುಗಳ ಬಳಕೆ ನಿಷೇಧದ ಕುರಿತು ಅರಿವು ಮೂಡಿಸಲಾಯಿತು.

ಪಪಂ ಸದಸ್ಯ ಬಷೀರ್, ಪೊಲೀಸ್ ಪೇದೆಗಳಾದ ದೇವರಾಜು, ಪದ್ಮಮ್ಮ ಸೇರಿದಂತೆ ಹಲವರು ಇದ್ದರು.

-------