ಕಿತ್ತೂರು ಪಟ್ಟಣ ಸುಂದರಗೊಳಿಸಲು ಸಹಕರಿಸಿ

| Published : Jun 28 2024, 12:54 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣವನ್ನು ಸುಂದರವಾಗಿಸಲು ಅಧಿಕಾರಿಗಳ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣವನ್ನು ಸುಂದರವಾಗಿಸಲು ಅಧಿಕಾರಿಗಳ ಜೊತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.

ಪಟ್ಟಣ ಪಂಚಾಯಿತಿಯ ಸಭಾಭವನದಲ್ಲಿ ಗುರುವಾರ ಪಟ್ಟಣದ ರಸ್ತೆ ಅಗಲೀಕರಣದ ಕುರಿತು ನಡೆದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣ ಬೆಳೆದಂತೆ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತಿದೆ, ಅಲ್ಲದೆ ಪಟ್ಟಣಕ್ಕೆ ಇತಿಹಾಸವಿದ್ದು, ಕೋಟೆಯನ್ನು ವೀಕ್ಷಿಸಲು ಪ್ರವಾಸಿಗರು ಬರುತ್ತಾರೆ. ಈ ನಿಟ್ಟಿನಲ್ಲಿ ಪಟ್ಟಣವನ್ನು ಸುಂದರಗೊಳಿಸುವ ಶಕ್ತಿ ನಮ್ಮ ಕೈಯಲ್ಲಿದೆ. ಪಟ್ಟಣದ ಜನರು ಸಹಕಾರ ನೀಡಿದ್ದಲ್ಲಿ ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.ಈಗಾಗಲೇ ಪಟ್ಟಣದ ರಸ್ತೆ ಅಗಲೀಕರಣ, ಚರಂಡಿ , ರಸ್ತೆ ವಿಭಜಕ ಸೇರಿದಂತೆ ಬೀದಿ ದೀಪಗಳ ಅಳವಡಿಕೆಯ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ. ಮೊದಲು ನೀರಿನ ಪೈಪ್‌ಲೈನ್ ನಂತರ ಚರಂಡಿ ಕಾಮಗಾರಿ ಕೈಗೊಂಡು, ಬಳಿಕ ನೂತನ ರಸ್ತೆ ನಿರ್ಮಾಣದ ಬಗ್ಗೆ ಚರ್ಚೆ ನಡೆಸಲಾಗಿದೆ. ಪಟ್ಟಣದ ಜನರು ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸುವಂತೆ ಕೋರಿದರು.

ಪಟ್ಟಣದ ಪ್ರಮುಖರಾದ ಸಂದೀಪ ದೇಶಪಾಂಡೆ, ದಿನೇಶ ವಳಸಂಗ, ಯಲ್ಲಪ್ಪ ಒಕ್ಕುಂದ, ಅಪ್ಪಣ್ಣ ಪಾಗಾದ ಸೇರಿದಂತೆ ಗುರುವಾರ ಪೇಟೆಯ ನಿವಾಸಿಗಳು ತೊಂದರೆಗಳ ಕುರಿತು ದೂರು ನೀಡಿದರು.ಈ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಯಿತು, ಅಭಿವೃದ್ಧಿ ಕುರಿತು ಒಪ್ಪಿಗೆ ನೀಡಲಾಯಿತು. ಮತ್ತು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಭಿವೃದ್ಧಿ ಕಾರ್ಯಕೈಗೊಳ್ಳಲಾಗುವುದು ಎಂದು ಶಾಸಕ ಬಾಬಾಸಾಹೇಬ ಪಾಟೀಲ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಪಿಎಸೈ ಪ್ರವೀಣ ಗಂಗೋಳ, ಲೋಕೋಪಯೋಗಿ ಅಭಿಯಂತರ ಮಿರಜಕರ, ಮುಖ್ಯಾಧಿಕಾರಿ ಎಂ.ವಿ.ಹಿರೇಮಠ ಸೇರಿದಂತೆ ಪಟ್ಟಣದ ನಿವಾಸಿಗಳು ಇದ್ದರು.