ಚಂದ್ರಮ್ಮ ಅವಿರೋಧ ಆಯ್ಕೆಗೆ ಸಹಕರಿಸಿ: ಮಂಜುನಾಥ್‌ ಸಲಹೆ

| Published : May 20 2025, 01:14 AM IST

ಸಾರಾಂಶ

ಮಾಗಡಿ: ಶಾಸಕ ಬಾಲಕೃಷ್ಣ ದಿವಂಗತ ಕೆಂಪೇಗೌಡರ ಕುಟುಂಬಕ್ಕೆ ನ್ಯಾಯ ಕೊಡಿಸುವುದಾದರೆ ಚಂದ್ರಮ್ಮ ಕೆಂಪೇಗೌಡ ಅವರನ್ನು ಬಮೂಲ್ ನಿರ್ದೇಶಕ ಸ್ಥಾನದಲ್ಲಿ ಅವಿರೋಧ ಆಯ್ಕೆ ಮಾಡುವಂತೆ ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.

ಮಾಗಡಿ: ಶಾಸಕ ಬಾಲಕೃಷ್ಣ ದಿವಂಗತ ಕೆಂಪೇಗೌಡರ ಕುಟುಂಬಕ್ಕೆ ನ್ಯಾಯ ಕೊಡಿಸುವುದಾದರೆ ಚಂದ್ರಮ್ಮ ಕೆಂಪೇಗೌಡ ಅವರನ್ನು ಬಮೂಲ್ ನಿರ್ದೇಶಕ ಸ್ಥಾನದಲ್ಲಿ ಅವಿರೋಧ ಆಯ್ಕೆ ಮಾಡುವಂತೆ ಮಾಜಿ ಶಾಸಕ ಎ.ಮಂಜುನಾಥ್ ಸವಾಲು ಹಾಕಿದರು.

ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕ ಚುನಾವಣೆ ಎನ್‌ಡಿಎ ಮೈತ್ರಿಕೂಟ ಅಭ್ಯರ್ಥಿ ಚಂದ್ರಮ್ಮ ಕೆಂಪೇಗೌಡರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದಿ.ಕೆಂಪೇಗೌಡರು ತಾಲೂಕಿನಲ್ಲಿ ಸಾಕಷ್ಟು ಜನಗಳಿಗೆ ಸಹಾಯ ಮಾಡಿದ್ದು, ಕ್ಷೇತ್ರದಲ್ಲಿ ಶಾಸಕರಾಗಿ ಸೇವೆ ಮಾಡುವ ಅವಕಾಶವನ್ನೂ ಬಿಟ್ಟುಕೊಟ್ಟಿದ್ದಾರೆ. ಇಂತಹ ಕುಟುಂಬಕ್ಕೆ ಶಾಸಕ ಬಾಲಕೃಷ್ಣ ಸಹಾಯ ಮಾಡಬೇಕೆಂಬ ನಿಟ್ಟಿನಲ್ಲಿ ಈ ಬಾರಿ ಬಮೂಲ್ ನಿರ್ದೇಶಕ ಚುನಾವಣೆಯಲ್ಲಿ ಸಹೋದರ ಅಶೋಕ್‌ರನ್ನು ಚುನಾವಣೆಯಿಂದ ನಾಮಪತ್ರ ಹಿಂಪಡೆದು ಕೆಂಪೇಗೌಡರ ಧರ್ಮಪತ್ನಿ ಚಂದ್ರಮ್ಮನವರನ್ನು ಅವಿರೋಧ ಆಯ್ಕೆ ಮಾಡಲು ಸಹಕರಿಸುತ್ತಾರೆಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಎ.ಮಂಜುನಾಥ್ ತಿಳಿಸಿದರು.

ಎಲ್ಲಾ ಸ್ಥಾನಗಳೂ ಅವರ ಕುಟುಂಬಕ್ಕೆ ಬೇಕಾ?:

ಶಾಸಕ ಬಾಲಕೃಷ್ಣ ಕುಟುಂಬಕ್ಕೇ ಎಲ್ಲಾ ಸ್ಥಾನಗಳು ಬೇಕಾ? ಶಾಸಕರ ಸಹೋದರ ಎಚ್.ಎನ್.ಅಶೋಕ್ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ಒಕ್ಕಲಿಗ ಸಂಘದ ನಿರ್ದೇಶಕರಾಗಿ, ಜಿಪಂ ಮಾಜಿ ಅಧ್ಯಕ್ಷರಾಗಿ, ಡೈರಿ ಅಧ್ಯಕ್ಷರಾಗಿ, ಈಗ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ. ಇವರ ಕುಟುಂಬಕ್ಕೇ ಎಲ್ಲಾ ಅಧಿಕಾರವೂ ಬೇಕಾ? ಬಿಡಿಸಿಸಿ ಬ್ಯಾಂಕ್ ಹಗರಣದಲ್ಲಿ ಅಶೋಕ್‌ ಹೈಕೋರ್ಟಲ್ಲಿ ತಡೆಯಾಜ್ಞೆ ತಂದು ನಿರ್ದೇಶಕ ಸ್ಥಾನ ಉಳಿಸಿಕೊಂಡಿದ್ದಾರೆ. ಸಹಕಾರ ರತ್ನ ಎಂದು ಹೇಳಿಕೊಂಡು ತಿರುಗುತ್ತಿರುವವರಿಗೆ ಕೆಲವೇ ವರ್ಷದಲ್ಲಿ ಇವರ ಸಹಕಾರ ರಂಗ ನೆಲಸಮವಾಗಲಿದೆ ಎಂದರು.

ಈಗ ಮತದಾರರಿಗೆ ಹಣದ ಆಸೆ ತೋರಿಸಿ ಶನಿಮಹಾತ್ಮ ಭಾವಚಿತ್ರ ಇಟ್ಟು ಆಣೆ ಮಾಡುವಂತೆ ಕಾಂಗ್ರೆಸ್‌ ಹೇಳುತ್ತಾರೆ ತಾವು ಆಣೆ ಮಾಡಿ ಸ್ವಾಭಿಮಾನಕ್ಕಾಗಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಚಂದ್ರಮ್ಮ ಕೆಂಪೇಗೌಡರಿಗೆ ಮತ ಹಾಕಿ ನಿರ್ದೇಶಕರನ್ನಾಗಿ ಮಾಡಿ ಆ ಕುಟುಂಬಕ್ಕೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಎ.ಮಂಜುನಾಥ್ ತಿಳಿಸಿದರು.

ಬಿಜೆಪಿ ಯುವ ಮುಖಂಡ ಪ್ರಸಾದ್ ಗೌಡ ಮಾತನಾಡಿ, ಅಭ್ಯರ್ಥಿ ಚಂದ್ರಮ್ಮ ಕೆಂಪೇಗೌಡರ ಕುಟುಂಬ ತಾಲೂಕಿನಲ್ಲಿ ಒಳ್ಳೆ ಹೆಸರು ಗಳಿಸಿದ್ದು ಧರ್ಮಕ್ಕೆ ಈ ಚುನಾವಣೆಯಲ್ಲಿ ಜಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಬಿಜೆಪಿ ಸಂಪೂರ್ಣ ಸಹಕಾರ ನೀಡಲಿದ್ದು ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಮತ ಹಾಕಿ ಜಯಶೀಲರಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಆರು ತಿಂಗಳ ಮುಂಚಿತವಾಗಿಯೇ ಅಭ್ಯರ್ಥಿ ಘೋಷಣೆ ಮಾಡಿದರೆ ಚುನಾವಣೆ ಎದುರಿಸಲು ಸುಲಭವಾಗುತ್ತಿತ್ತು. ಈಗ ಕೊನೆ ಸಮಯದಲ್ಲಿ ಅಭ್ಯರ್ಥಿ ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಏಳಿಗೆಹಳ್ಳಿ ತಮ್ಮಣ್ಣಗೌಡ, ಜುಟ್ಟನಹಳ್ಳಿ ಜಯರಾಂ, ಕೆಂಪೇಗೌಡ ಬೋರ್ ವೆಲ್ ನರಸಿಂಹಯ್ಯ, ಗ್ರಾಪಂ ಸದಸ್ಯ ಗುಡೇಮಾರನಹಳ್ಳಿ ನಾಗರಾಜು, ಶಿವರಾಂ, ರಂಗಸ್ವಾಮಿ, ವೀರಭದ್ರಯ್ಯ, ಪಂಚೆ ರಾಮಣ್ಣ ಕೆಂಪಸಾಗರ ಮಂಜುನಾಥ್ ಇತರರು ಭಾಗವಹಿಸಿದ್ದರು.