ಮಹಿಳೆಯರ ಆರ್ಥಿಕ ಪ್ರಗತಿಗೆ ನೆರವಾಗಿ: ಕಾಂದೂ

| Published : Jun 04 2024, 12:31 AM IST

ಸಾರಾಂಶ

ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಅವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿರುವ ಸಂಕ್ರಿಕಟ್ಟೆ ಅಮೃತ ಸರೋವರಕ್ಕೆ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿದರು.

ಕಾರವಾರ: ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯ ಅಡಿಯಲ್ಲಿ ಬರುವ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಆರ್ಥಿಕವಾಗಿ ಸಬಲರಾಗಲು ಪೂರಕವಾಗುವ ಚಟುವಟಿಕೆ ಅಥವಾ ಪ್ರವಾಸೋದ್ಯಮಕ್ಕೆ ಹೊಂದಿಕೊಂಡಿರುವ ಚಟುವಟಿಕೆಗೆ ಅಣಿಯಾಗಿಸುವ ಮೂಲಕ ಮಹಿಳೆಯರ ಆರ್ಥಿಕ ಪ್ರಗತಿಗೆ ನೆರವಾಗಿ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ಹೇಳಿದರು.

ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಪಂ ವ್ಯಾಪ್ತಿಯಲ್ಲಿ ಮನರೇಗಾ ಮತ್ತು ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯ ಒಗ್ಗೂಡಿಸುವಿಕೆಯಲ್ಲಿ ನಿರ್ಮಿಸಲಾಗುತ್ತಿರುವ ಒಕ್ಕೂಟದ ವರ್ಕ್ ಶೆಡ್ ಕಾಮಗಾರಿ ಸ್ಥಳ ಪರಿಶೀಲಿಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಕಟ್ಟಡವು ಮಿರ್ಜಾನ್ ಅಂತಹ ಪ್ರವಾಸಿ ತಾಣದಲ್ಲಿದ್ದು, ಹೆದ್ದಾರಿ ಪಕ್ಕದಲ್ಲಿಯೇ ಇರುವುದರಿಂದ ಮಹಿಳೆಯರಿಗೆ ಉದ್ಯಮ ಆಯ್ದುಕೊಳ್ಳಲು ವಿಪುಲ ಅವಕಾಶಗಳನ್ನು ಕಲ್ಪಿಸುತ್ತದೆ. ಆದ್ದರಿಂದ ಮಹಿಳೆಯರಿಗೆ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ನೀಡಿ, ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ಮಿಸಿರುವ ಸಂಕ್ರಿಕಟ್ಟೆ ಅಮೃತ ಸರೋವರಕ್ಕೆ ಭೇಟಿ ನೀಡಿ, ಕಾಮಗಾರಿ ವೀಕ್ಷಿಸಿ, ಉತ್ತಮ ರೀತಿಯಲ್ಲಿ ಕೆಲಸವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರಸ್ತುತ ಸರೋವರಕ್ಕೆ ಉದ್ಯಾನ ನಿರ್ಮಿಸಿ, ಸಾರ್ವಜನಿಕರಿಗೆ ಬೆಳಗಿನ ವಾಯುವಿಹಾರ ಮತ್ತು ಪ್ರವಾಸಿ ತಾಣವಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.

ದಿವಗಿ ಗ್ರಾಪಂ ವ್ಯಾಪ್ತಿಯಲ್ಲಿನ ಜೆಜೆಎಂ ಕಾಮಗಾರಿ ಸ್ಥಳ, ಅಂಗನವಾಡಿ ಕೇಂದ್ರ, ಡಿಜಿಟಲ್ ಗ್ರಂಥಾಲಯ, ಹೆಗಡೆ ಗ್ರಾಪಂ ವ್ಯಾಪ್ತಿಯಲ್ಲಿನ ಕೂಸಿನ ಮನೆ, ಮಾಹಿತಿ ಕೇಂದ್ರ, ಕಾಗಾಲ ಗ್ರಾಪಂ ವ್ಯಾಪ್ತಿಯಲ್ಲಿನ ನರೇಗಾ ಅಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿವೀಕ್ಷಿಸಿ ಅಧಿಕಾರಿಗಳಿಗೆ ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.

ಕಾಗಾಲ ಗ್ರಾಪಂ ವ್ಯಾಪ್ತಿಯಲ್ಲಿ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಆರ್ಯಶ್ರೀ ಸಂಜೀವಿನಿ ಉತ್ಪಾದಕ ಗುಂಪಿನ ಸದಸ್ಯೆ ರಾಜೇಶ್ವರಿ ಹಿಣಿ ಅವರು ಅಘನಾಶಿನಿ ಹಿನ್ನೀರಿನಲ್ಲಿ ಪಂಜರು ಮೀನು ಕೃಷಿ ಮೂಲಕ ಕುರುಡೆ ಮೀನು ಉತ್ಪಾದನಾ ಚಟುವಟಿಕೆ ಮತ್ತು ದಿವಗಿ ಗ್ರಾಪಂ ವ್ಯಾಪ್ತಿಯಲ್ಲಿ ಶ್ರೀ ಶಾಂತಿಕಾ ಸ್ವಸಹಾಯ ಸಂಘದ ಸದಸ್ಯೆ ಸುಮಂಗಲಾ ನಾಯ್ಕ, ಲೀಲಾ ನಾಯ್ಕ ಮತ್ತು ಇತರ ಸದಸ್ಯರು ಸೇರಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಯಡಿ ಪೆಪ್ಸಿ ಮತ್ತು ಲಸ್ಸಿ ತಯಾರಿಕಾ ಘಟಕಕ್ಕೆ ಭೇಟಿ ನೀಡಿ, ಹೆಚ್ಚಿನ ಮಾಹಿತಿ ಪಡೆದು, ಪ್ರೇರೇಪಣೆ ನೀಡಿದರು.

ಕುಮಟಾ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಭಟ್, ಸಹಾಯಕ ನಿರ್ದೇಶಕ ವಿನಾಯಕ ನಾಯ್ಕ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.