ಮಕ್ಕಳ ಬಾಲ್ಯ ಸಂತೋಷವಾಗಿರಲು ಸಹಕರಿಸಿ: ಮಂಜುನಾಥ ಆಸ್ಪತ್ರೆಯ ಡಾ. ಅಮೋಘ್‌ಗೌಡ

| Published : Mar 31 2024, 02:05 AM IST

ಮಕ್ಕಳ ಬಾಲ್ಯ ಸಂತೋಷವಾಗಿರಲು ಸಹಕರಿಸಿ: ಮಂಜುನಾಥ ಆಸ್ಪತ್ರೆಯ ಡಾ. ಅಮೋಘ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಯುಕೆಜಿ ತರಗತಿಯನ್ನು ಮುಗಿಸಿದ ಪುಟಾಣಿ ಮಕ್ಕಳಿಗೆ ಪದವಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಎಸ್‌ಆರ್‌ಎಸ್‌ ಪ್ರಜ್ಞಾ ಶಾಲೆಯಲ್ಲಿ ಪದವಿ ಪ್ರದಾನ ಸಮಾರಂಭ

ಕನ್ನಡಪ್ರಭ ವಾರ್ತೆ ಹಾಸನ

ಎಳೆಯ ವಯಸ್ಸಿನಲ್ಲಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಅವರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಮಕ್ಕಳು ತಮ್ಮ ಬಾಲ್ಯವನ್ನು ಸಂತೋಷಭರಿತವಾಗಿ ಪೋಷಕರೊಂದಿಗೆ ಕಳೆಯಲು ಸಹಾಯಕವಾಗುತ್ತದೆ ಎಂದು ಮಂಜುನಾಥ ಆಸ್ಪತ್ರೆಯ ಡಾ. ಅಮೋಘ್‌ಗೌಡ ತಿಳಿಸಿದರು.

ನಗರದ ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಯುಕೆಜಿ ತರಗತಿಯನ್ನು ಮುಗಿಸಿದ ಪುಟಾಣಿ ಮಕ್ಕಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪೂರ್ವ ಪ್ರಾಥಮಿಕ ಶಾಲಾ ಹಂತದ ಪುಟಾಣಿ ಮಕ್ಕಳು ಅನುಕರಣೆಯ ಮೂಲಕ ಕಲಿಯುವಂತಹದ್ದು ಹೆಚ್ಚಾಗಿರುವುದರಿಂದ ತಂದೆ, ತಾಯಿ ಮನೆಯಲ್ಲಿ ಮಕ್ಕಳ ಎದುರು ಎಚ್ಚರಿಕೆಯಿಂದಿದ್ದು ಸೌಹಾರ್ದಯುತವಾದ ವಾತಾವರಣವಿರುವಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಪಾಠದ ಜೊತೆಗೆ ಆಟೋಟಗಳಲ್ಲಿ ಹೆಚ್ಚಾಗಿ ತೊಡಗಿಸಿ ಅವರ ಮನೋದೈಹಿಕ ಬೆಳವಣಿಗೆಗೆ ಸಹಾಯವಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳಿಗೆ ಜಂಕ್ ಫುಡ್‌ಗಳು ಕೊಡಿಸುವುದನ್ನು ನಿಲ್ಲಿಸಿ ಉತ್ತಮ ಪೋಷಕಾಂಶವುಳ್ಳ ಆಹಾರವನ್ನು ನೀಡಬೇಕು. ಆ ನಿಟ್ಟಿನಲ್ಲಿ ಪೋಷಕರು ಕ್ರಮ ವಹಿಸಬೇಕಾಗಿದೆ. ಇಂದಿನ ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವುದು ಪೋಷಕರು ಹಾಗೂ ಶಿಕ್ಷಕರ ಜವಾಬ್ದಾರಿಯಾಗಿದೆ. ಇಂದು ಪದವಿ ಪಡೆದ ಎಲ್ಲಾ ಪುಟಾಣಿ ಮಕ್ಕಳು ಮುಂದೆ ಸಮಾಜದಲ್ಲಿ ಸತ್ಪ್ರಜೆಗಳಾಗಿ ಸಾಧನೆಯ ಶಿಖರವನ್ನೇರಿ, ಕೀರ್ತಿವಂತರಾಗಲಿ ಎಂದು ಆಶಿಸಿದರು.

ಸಂಸ್ಥೆಯ ಅಧ್ಯಕ್ಷ ಆರ್. ರಾಜಗೋಪಾಲ ಶೆಟ್ಟಿ ಮಾತನಾಡಿ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿ ಪ್ರಾಥಮಿಕ ಶಿಕ್ಷಣಕ್ಕೆ ಹೆಜ್ಜೆ ಇಡುತ್ತಿರುವ ಈ ಮಕ್ಕಳು ಮೂರು ವರ್ಷಗಳ ಅವಧಿಯಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ವೃಧ್ಧಿಸಿಕೊಳ್ಳುವಂತಹ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಮನನ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಇವುಗಳ ಬಗ್ಗೆ ದೀರ್ಘ ಅಧ್ಯಯನ ಮಾಡಲು ಪೂರ್ವ ಪ್ರಾಥಮಿಕ ಹಂತದ ಕಲಿಕೆ ಬುನಾದಿಯಾಗಲಿದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಉದಾತ್ತ ಗುಣಗಳು, ಸನ್ನಡತೆ, ಉತ್ತಮ ಮೌಲ್ಯಗಳು ಹಾಗೂ ಗುರು-ಹಿರಿಯರ ಬಗ್ಗೆ ಗೌರವಗಳನ್ನು ಎಳೆಯ ವಯಸ್ಸಿನಿಂದಲೇ ಕಲಿಸಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಟರಾಜ್.ಎಂ., ಸಂಸ್ಥೆಯ ಟ್ರಸ್ಟಿ ಆಶಾ ನಟರಾಜ್, ಪುಟಾಣಿ ಪದವೀಧರರು, ಶಿಕ್ಷಕರು ಹಾಗೂ ಪೋಷಕರು ಇದ್ದರು.

ಸಮಾರಂಭದಲ್ಲಿ ಪದವಿ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳು.