ಜಯಂತಿಗಳ ಅರ್ಥಪೂರ್ಣ ಆಚರಣೆಗೆ ಸಿದ್ಧತೆ

| Published : Mar 31 2024, 02:04 AM IST / Updated: Mar 31 2024, 02:05 AM IST

ಸಾರಾಂಶ

ಬೆಳಗಾವಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸಮಾಜದ ಎಲ್ಲ ವರ್ಗದವರು ಒಗ್ಗೂಡಿ ಏ.14 ರಂದು ಪ್ರತಿವರ್ಷದಂತೆ ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮಾರ್ಗಸೂಚಿ ಅನ್ವಯ ಜಯಂತಿ ಆಚರಿಸಬೇಕಿದೆ ಎಂದು ತಿಳಿಸಿದರು.

ಜಯಂತಿ ಕಾರ್ಯಕ್ರಮಕ್ಕೆ ಅವಶ್ಯವಿರುವ ಪೆಂಡಾಲ್, ಕಟೌಟ್, ಆಸನ, ಸ್ಟೇಜ್ ವ್ಯವಸ್ಥೆ, ಉದ್ಯಾನವನ ಸ್ವಚ್ಛತೆ, ಅಂಬೇಡ್ಕರ್‌ ರಸ್ತೆಗೆ ಲೈಟಿಂಗ್ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಬ್ಯಾನರ್ ಅಳವಡಿಕೆ ಸೇರಿದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಉಪನ್ಯಾಸ ಕಾರ್ಯಕ್ರಮಕ್ಕೆ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ ಅವರ ಜೀವನ ಚರಿತ್ರೆ, ಆದರ್ಶದ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ ಉಪನ್ಯಾಸಕರನ್ನು ಆಹ್ವಾನಿಸಬೇಕು. ಉಪನ್ಯಾಸದಲ್ಲಿ ಯಾವುದೇ ರೀತಿಯ ರಾಜಕೀಯ ಪ್ರೇರಿತ ಭಾಷಣ ಮಾಡಬಾರದು ಎಂದು ತಿಳಿಸಿದರು.

ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿ, ಶಾಲಾ, ಕಾಲೇಜು ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಜಯಂತಿ ಆಚರಣೆ ಮಾಡಬೇಕು. ಶಿಕ್ಷಣ ಇಲಾಖೆಯ ವತಿಯಿಂದ ಚಿಕ್ಕೋಡಿ ಶೈಕ್ಷಣಿಕ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ರೂಪಕ ವಾಹನಗಳ ಮೆರವಣಿಗೆಯು ಧರ್ಮವೀರ ಸಂಭಾಜಿ ವೃತ್ತದಿಂದ, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ , ಕಾಕತಿವೇಸ್, ಚನ್ನಮ್ಮ ವೃತ್ತದ ಮಾರ್ಗವಾಗಿ ಅಂಬೇಡ್ಕರ್‌ ಉದ್ಯಾನವನ ತಲುಪಲಿದೆ. ಮೆರವಣಿಗೆಯಲ್ಲಿ ಭಾಗಿಯಾದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನಗರದ ಪ್ರಮುಖ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ, ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಬೇಕು ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ಸ್ಥಳೀಯ ಉತ್ತಮ ಕಲಾ ತಂಡಗಳನ್ನು ಒದಗಿಸುವುದರ ಜತೆಗೆ ಡಾ.ಅಂಬೇಡ್ಕರ್ ಜೀವನಸಾಧನೆ ಹಾಗೂ ಸಂವಿಧಾನ ಕುರಿತ ಪುಸ್ತಕಗಳ ಪ್ರದರ್ಶನ-ಮಾರಾಟ ಮಳಿಗೆ ಸ್ಥಾಪಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಶಿಸ್ತುಬದ್ಧ ಜಯಂತಿ ಆಚರಣೆ ಮಾಡುವುದರ ಮೂಲಕ ಜನರಿಗೆ ಜಯಂತಿಗಳು ಸ್ಫೂರ್ತಿದಾಯಕವಾಗಬೇಕು. ಕೆಲವೆಡೆ ಡಿಜೆ ಗಳಲ್ಲಿ ಅಪಾಯಕಾರಿ ಲೇಸರ್‌ಗಳನ್ನು ಬಳಕೆ ಮಾಡುತ್ತಿರುವುದು ಕಂಡುಬರುತ್ತಿದೆ. ಇದರಿಂದ ಕಣ್ಣಿನ ಮೇಲೆ ಪರಿಣಾಮ ಬೀರಿ ಆಸ್ಪತ್ರಗೆ ದಾಖಲಾಗಿರುವ ಘಟನೆಗಳು ಕಂಡು ಬಂದಿವೆ. ಆದ್ದರಿಂದ ಅಂತಹ ಅಪಾಯಕಾರಿ ಲೇಸರ್ ಬಳಕೆ ಮಾಡಬಾರದು ಎಂದರು.

ಮಾದರಿ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಜನಪ್ರತಿನಿಧಿಗಳ ಭಾವಚಿತ್ರ ಬಳಕೆ‌ ಹಾಗೂ ರಾಜಕೀಯ ಭಾಷಣಗಳಿಗೆ ಅವಕಾಶವಿರುವುದಿಲ್ಲ. ವಿವಿಧ ಇಲಾಖೆಗಳ ರೂಪಕ ವಾಹನಗಳಲ್ಲಿ ಸರಕಾರಿ ಯೋಜನೆಗಳ ಪ್ರಚಾರ ಮಾಡುವಂತಿಲ್ಲ. ಆದ್ದರಿಂದ ಡಾ.ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಮಾತ್ರ ಸೀಮಿತವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುವುದು ಎಂದು ತಿಳಿಸಿದರು.

ನಗರದ ಸಾಮ್ರಾಟ್ ಅಶೋಕ ವೃತ್ತವನ್ನು ಸ್ವಚ್ಛಗೊಳಿಸಿ ಸೌಂದರ್ಯೀಕರಣಕ್ಕೆ ಕ್ರಮ‌ಕೈಗೊಳ್ಳಬೇಕು ಎಂದು ಮುಖಂಡರಾದ ಮಹಾದೇವ ತಳವಾರ ಮನವಿ ಮಾಡಿಕೊಂಡರು.

ನಗರದಲ್ಲಿ ಅಂಬೇಡ್ಕರ್ ಅವರ ಹೆಸರಿನ ರಸ್ತೆಯನ್ನು ಸಿವಿಲ್ ಆಸ್ಪತ್ರೆ ರಸ್ತೆ ಎಂದು ಕೆಲವು ಫಲಕಗಳಲ್ಲಿ ನಮೂದಿಸಲಾಗಿದೆ ಅವುಗಳನ್ನು ಕೂಡಲೇ ತೆರವುಗೊಳಿಸಿ ಅಂಬೇಡ್ಕರ್ ರಸ್ತೆ ಎಂದು ಸರಿಪಡಿಸುವ ಕೆಲಸವಾಗಬೇಕಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಮುಖಂಡರು ಒತ್ತಾಯಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಪ್ರತಿ ವರ್ಷದಂತೆ ಅಂಬೇಡ್ಕರ್ ಜಯಂತಿ ಆಚರಣೆಗೆ ಅವಕಾಶ ಕಲ್ಪಿಸುವುದರ ಜತೆಗೆ ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜ.26 ರಂದು ಆರಂಭಗೊಂಡ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಬೆಳಗಾವಿ ವಿಭಾಗಮಟ್ಟದಲ್ಲಿ ಬೆಳಗಾವಿ ಜಿಲ್ಲೆಗೆ ದ್ವಿತೀಯ ಬಹುಮಾನ ದೊರೆತಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರಕಟಿಸಿದರು.

ಇದರೊಂದಿಗೆ ಜಿಲ್ಲೆಗೆ ₹1 ಲಕ್ಷ ಬಹುಮಾನ‌ ಕೂಡ‌‌ ಬಂದಿರುತ್ತದೆ. ಇದಕ್ಕೆ ಶ್ರಮಿಸಿದ ಎಲ್ಲ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಈ ಸಭೆಯಲ್ಲಿ ಜಿಪಂ ಸಿಇಒ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪೂರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನವೀನ ಶಿಂತ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಯಲ್ಲಪ್ಪ ಹುದಲಿ, ಕರೆಪ್ಪ ಗುಡೆನ್ನವರ ಸೇರಿದಂತೆ ಮತ್ತಿತರು ಸಭೆಯಲ್ಲಿ ಉಪಸ್ಥಿತರಿದ್ದರು.