ಗುಡಿಸಲು ಮುಕ್ತ ತಾಲೂಕನ್ನಾಗಿಸಲು ಸಹಕರಿಸಿ

| Published : Feb 19 2025, 12:45 AM IST

ಸಾರಾಂಶ

ತಾಲೂಕಿನಲ್ಲಿ ಹಲವಾರು ಕುಟುಂಬಗಳು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಕೆಲವರು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಈ ಬಗ್ಗೆ ಅಧಿಕಾರಿಗಳು ಕೂಡಲೇ ಸರ್ವೇ ಮಾಡಿ ವಿವಿಧ ವಸತಿ ಯೋಜನೆಗಳಲ್ಲಿ ಮನೆ ಇಲ್ಲದವರಿಗೆ ಮನೆಗಳ ನಿರ್ಮಿಸಿಕೊಟ್ಟು ಗುಡಿಸಲು ಮುಕ್ತ ತಾಲೂಕನ್ನಾಗಿಸಬೇಕು.

ಕನ್ನಡಪ್ರಭ ವಾರ್ತೆ ಮುಳಬಾಗಿಲುತಾಲೂಕಿನ ಕೆಲ ಅಧಿಕಾರಿಗಳು ಶಾಸಕರಿಗೆ ಪರ್ಸೆಂಟೇಜ್ ಕೊಡಬೇಕೆಂದು ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹ ಪರಿಸ್ಥಿತಿ ನನಗೆ ಬಂದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಶಾಸಕ ಸಮೃದ್ಧಿ ಮಂಜುನಾಥ್ ಹೇಳಿದರು.ನಗರದ ಆರ್‌ಎಂಸಿ ಯಾರ್ಡ್‌ನ ಕೋಮುಲ್ ಶಿಬಿರ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಾನು ಯಾವುದೇ ಅಧಿಕಾರಿಯಿಂದ ಒಂದು ರುಪಾಯಿ ಲಂಚ ಅಥವಾ ಪರ್ಸೆಂಟೇಜ್ ಪಡೆದಿಲ್ಲ. ನಾನು ಆ ಜಾತಿಗೆ ಸೇರಿದವನಲ್ಲ. ಯಾವುದೇ ಅಧಿಕಾರಿ ನನ್ನ ಹೆಸರಿಗೆ ಕಳಂಕ ತರುವ ಕೆಲಸ ಮಾಡಬಾರದೆಂದು ಎಚ್ಚರಿಸಿದರು.ಗುಡಿಸಲು ಮುಕ್ತ ತಾಲೂಕಾಗಿಸಿ

ತಾಲೂಕಿನಲ್ಲಿ ಹಲವಾರು ಕುಟುಂಬಗಳು ಗುಡಿಸಲುಗಳಲ್ಲಿ ವಾಸ ಮಾಡುತ್ತಿದ್ದಾರೆ. ಕೆಲವರು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ ಈ ಬಗ್ಗೆ ಅಧಿಕಾರಿಗಳು ಕೂಡಲೇ ಸರ್ವೇ ಮಾಡಿ ವಿವಿಧ ವಸತಿ ಯೋಜನೆಗಳಲ್ಲಿ ಮನೆ ಇಲ್ಲದವರಿಗೆ ಮನೆಗಳ ನಿರ್ಮಿಸಿಕೊಟ್ಟು ಗುಡಿಸಲು ಮುಕ್ತ ತಾಲೂಕನ್ನಾಗಿ ಮಾಡಬೇಕೆಂದು ಸೂಚಿಸಿದರು.ಕೇಂದ್ರ ಸರ್ಕಾರದಿಂದ ಜಲಜೀವನ್ ಮಿಷನ್ ಸೇರಿದಂತೆ ಇತರೆ ಯೋಜನೆಗಳಿಂದ ತಾಲೂಕಿಗೆ ಅನುದಾನ ಬರುತ್ತಿದೆ. ಪ್ರಧಾನಿ ಮೋದಿ ಅವರಿಂದ ನನಗೆ ಮಾನ ಉಳಿಯುತ್ತಿದೆ ಎಂದ ಶಾಸಕರು ರಾಜ್ಯ ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಪುಡಿಕಾಸು ಸಹ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಭೂ ಒತ್ತುವರಿ ತೆರವುಗೊಳಿಸಿ

ಬೆಂಗಳೂರಿನಿಂದ ಬಂದಿರುವ ಕೆಲವರು ಪುಂಡರು ಸರ್ಕಾರಿ ಜಮೀನುಗಳನ್ನು ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಬಡವರ ಜಮೀನುಗಳನ್ನು ಕಬಳಿಸುತ್ತಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಭೂಮಾಫಿಯಾ ಬೆಂಬಲಿಸುತ್ತಿದ್ದಾರೆ. ಯಾರೇ ಪ್ರಭಾವಿಗಳು ಸರ್ಕಾರಿ ಜಮೀನು ಕೆರೆಗಳನ್ನು ಒತ್ತುವರಿ ಮಾಡಿದರೂ ಅಧಿಕಾರಿಗಳು ಮುಲಾಜಿಲ್ಲದೆ ತೆರವು ಮಾಡಿಸುವಂತೆ ತಾಕೀತು ಮಾಡಿದರು.ಬೋರ್‌ವೆಲ್‌ ಅಕ್ರಮ ಬಿಲ್‌

ಜಲಜೀವನ್ ಯೋಜನೆಯಡಿ ೫೦೦ ಅಡಿ ಬೋರ್‌ವೆಲ್ ಕೊರೆಸಿ ೧೫೦೦ ಅಡಿ ಕೊಡಿಸಿರುವುದಾಗಿ ಬಿಲ್ಲುಗಳಿಗೆ ನಮ್ಮಲ್ಲಿ ಸಹಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಪಿಡಿಒಗಳು ಶಾಸಕರಿಗೆ ತಮ್ಮ ಅಳಲನ್ನು ತೋಡಿಕೊಂಡರು ಶಾಸಕರು ಪ್ರತಿಕ್ರಿಯಿಸಿ ಕೂಡಲೇ ಬೋರ್‌ವೆಲ್ ಗುತ್ತಿಗೆದಾರರ ಸಭೆಯನ್ನು ಕರೆದು ಚರ್ಚೆ ಮಾಡಿ ಈ ರೀತಿ ಆಗದಂತೆ ಎಚ್ಚರಿಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ವಿ.ಗೀತಾ, ತಾಪಂ ಇಒ ಡಾ.ಕೆ.ಸರ್ವೇಶ್, ಪೌರಾಯುಕ್ತ ವಿ.ಶ್ರೀಧರ್, ಪೊಲೀಸ್ ಇನ್‌ ಸ್ಪೆಕ್ಟರ್ ರಾಜಣ್ಣ, ಬಿಇಒ ಕೆ.ಎನ್.ರಾಮಚಂದ್ರಪ್ಪ, ನರೇಗಾ ಎಡಿ ರವಿಚಂದ್ರ ಮತ್ತಿತರರು ಇದ್ದರು.

.