ಅಪರಾಧ ತಡೆಗಟ್ಟಲು ಪೊಲೀಸರಿಗೆ ಸಹಕಾರ ನೀಡಿ: ಬಿ.ಜಿ ಮಹೇಶ್

| Published : Dec 29 2024, 01:16 AM IST

ಸಾರಾಂಶ

ರಸ್ತೆ ಸುರಕ್ಷತೆ ನಿಯಮಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡುವ ಮೂಲಕ ಅಪಘಾತ ತಡೆಯಬೇಕು. 18 ವರ್ಷ ಒಳಪಟ್ಟ ಮಕ್ಕಳು ವಾಹನಗಳನ್ನು ಚಾಲನೆ ಮಾಡಬಾರದು. ಯಾವುದೇ ಅಪರಾಧ ಪ್ರಕರಣಗಳು ಕಂಡು ಬಂದಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿದರೇ ತಕ್ಷಣದಲ್ಲಿಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ನಿವಾರಿಸುತ್ತಾರೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾನೂನು ಅರಿವು ಪಡೆಯುವ ಮೂಲಕ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಬೇಕು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಜಿ ಮಹೇಶ್ ತಿಳಿಸಿದರು.

ತಾಲೂಕಿನ ದುಗ್ಗನಹಳ್ಳಿ ಸೇರಿದಂತೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಟ್ಟಣದ ಶಾಂತಿ ಕಾಲೇಜು ಹಾಗೂ ವಿದ್ಯಾ ವಿಕಾಸ್ ಪ್ರೌಢಶಾಲೆಯಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆಯಲ್ಲಿ ಮಾತನಾಡಿ, ಕಾನೂನಿನ ಅರಿವು ಪ್ರತಿಯೊಬ್ಬರಿಗೆ ಇದ್ದರೇ ಕೆಲವೊಂದು ಅಪರಾಧ ಪ್ರಕರಣ ತಡೆಯಬಹುದಾಗಿದೆ ಎಂದರು.

ರಸ್ತೆ ಸುರಕ್ಷತೆ ನಿಯಮಗಳನ್ನು ವಿದ್ಯಾರ್ಥಿಗಳು ಪಾಲನೆ ಮಾಡುವ ಮೂಲಕ ಅಪಘಾತ ತಡೆಯಬೇಕು. 18 ವರ್ಷ ಒಳಪಟ್ಟ ಮಕ್ಕಳು ವಾಹನಗಳನ್ನು ಚಾಲನೆ ಮಾಡಬಾರದು. ಯಾವುದೇ ಅಪರಾಧ ಪ್ರಕರಣಗಳು ಕಂಡು ಬಂದಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ತುರ್ತು ಸಂದರ್ಭದಲ್ಲಿ 112ಗೆ ಕರೆ ಮಾಡಿದರೇ ತಕ್ಷಣದಲ್ಲಿಯೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ನಿವಾರಿಸುತ್ತಾರೆ ತಿಳಿವಳಿಕೆ ನೀಡಿದರು.

ಶಾಲಾ-ಕಾಲೇಜು ಮಕ್ಕಳಲ್ಲಿ ಹೆಚ್ಚಿನ ಅರಿವು ಮೂಡಿಸಲು ಅಪರಾಧ ತಡೆ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ಅಪರಿಚಿತ ವ್ಯಕ್ತಿಗಳ ಬಗ್ಗೆ ಗಮನ ಹರಿಸಬೇಕು. ಬಲವಂತವಾಗಿ ಮಾತನಾಡಲು ಯತ್ನಿಸಿದರೆ ಕೂಡಲೇ ನಿಮ್ಮ ಶಿಕ್ಷಕರಿಗೆ ತಿಳಿಸಬೇಕು. ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳನ್ನು ಯಾರಾದರೂ ನೀಡುವುದು ಕಂಡುಬಂದರೂ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಬಾಲ್ಯ ವಿವಾಹಗಳನ್ನು ತಡೆಯಲು ವಿದ್ಯಾರ್ಥಿಗಳು ಸಹಕರಿಸಬೇಕು, ಪೋಷಕರಿಗೆ ಬಾಲ್ಯ ವಿವಾಹದ ಬಗ್ಗೆ ತಿಳಿವಳಿಕೆ ನೀಡಬೇಕು, ಹೆಲ್ಮೆಟ್ ಇಲ್ಲದೇ ವಾಹನವನ್ನು ಚಲಾಯಿಸಬಾರದೆಂಬ ತಿಳಿವಳಿಕೆಯನ್ನು ಸಮಾಜಕ್ಕೆ ನೀಡಬೇಕೆಂದು ಕರೆ ನೀಡಿದರು.

ಈ ವೇಳೆ ಪ್ರಾಂಶುಪಾಲರಾದ ಅನಿತಾ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.