ಸಾರಾಂಶ
ವಿಜಯಪುರ: ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್‌ಗೌಡ ಹೇಳಿದರು.
ವಿಜಯಪುರ: ನಮ್ಮ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್‌ಗೌಡ ಹೇಳಿದರು.
ಪಟ್ಟಣದ ಗಾಂಧಿಚೌಕದಲ್ಲಿ ರಾಧಾಕೃಷ್ಣ ಕಲಾತಂಡದ ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು ನಿರ್ದೇಶನದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಿನಿಮಾ, ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳ ಬಳಕೆ ಪ್ರಭಾವದಿಂದಾಗಿ ಪೌರಾಣಿಕ ನಾಟಕಗಳ ಮಹತ್ವ ಗೊತ್ತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ಇಂತಹ ನಾಟಕಗಳನ್ನು ಆಯೋಜಿಸುವುದರ ಮೂಲಕ ಹಳೆಯ ಪರಂಪರೆ, ಸನಾತನ ಧರ್ಮ ಉಳಿಸುವಂತಹ ಕಾರ್ಯಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.ಪುರಸಭಾ ಸದಸ್ಯ ಎಂ.ಸತೀಶ್ ಕುಮಾರ್ ಮಾತನಾಡಿ, ಬಣ್ಣ ಹಚ್ಚಿಕೊಂಡು, ರಂಗವೇದಿಕೆಯಲ್ಲಿ ಗಾಂಭೀರ್ಯವಾಗಿ ಪೌರಾಣಿಕ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿ, ಜನರಿಗೆ ಇತಿಹಾಸ ತಿಳಿಸುವಂತಹ ರಂಗಕಲಾವಿದರ ಪರದೆಯ ಹಿಂದಿನ ಬದುಕು ತುಂಬಾ ಶೋಚನೀಯವಾಗಿದೆ. ಆರ್ಥಿಕವಾಗಿ ತುಂಬಾ ದುರ್ಬಲರಾಗಿದ್ದಾರೆ. ಸರ್ಕಾರಗಳು ಸಹಾ ಅವರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಇಡೀ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟ ಎಷ್ಟೋ ಕಲಾವಿದರು, ಜನರ ಮುಖದಲ್ಲಿ ನಗು ತರಿಸಿ, ತಮ್ಮ ಬದುಕನ್ನು ಕತ್ತಲಾಗಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಇಂತಹ ಕಲಾವಿದರನ್ನು ಗುರುತಿಸಿ, ಮಾಸಿಕ ಕನಿಷ್ಠ ೨೦ ಸಾವಿರ ಗೌರವಧನ ಕೊಟ್ಟರೆ, ಅವರ ಜೀವನ ಸುಧಾರಣೆಯಾಗಲಿದೆ ಎಂದರು.
ಪುರಸಭಾಧ್ಯಕ್ಷೆ ಎಸ್.ಭವ್ಯಾಮಹೇಶ್, ದೇವನಹಳ್ಳಿ ತಾಲೂಕು ಕನ್ನಡ ಕಲಾವಿದರ ಸಂಘದ ಅಧ್ಯಕ್ಷ ಸಿ.ಮೋಹನ್ ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಆರ್.ಕೆ.ನಂಜೇಗೌಡ, ಬಲಮುರಿ ಶ್ರೀನಿವಾಸ್, ಸೀನಿಯರ್ ಛೇಂಬರ್ ಅಧ್ಯಕ್ಷ ಅನಿಸ್ ಉರ್ ರೆಹಮಾನ್, ರಾಷ್ಟ್ರೀಯ ನಿರ್ದೇಶಕ ವಕೀಲ ಜಯರಾಂ, ರಾಮಕೃಷ್ಣ ಹೆಗಡೆ, ರಾಮುಭಗವಾನ್, ವೆಂಕಟೇಶ್ ಪ್ರಭು, ಜೆ.ಎಸ್.ರಾಮಚಂದ್ರಪ್ಪ, ಪುರಸಭೆ ಸದಸ್ಯ ಸಿ.ಎಂ.ರಾಮು, ಮಾ.ಸುರೇಶ್ ಬಾಬು, ಶಾಮಣ್ಣ, ಎ.ಬಿ.ಪರಮೇಶಯ್ಯ, ತಮ್ಮಯ್ಯ, ಕೃಷ್ಣಪ್ಪ, ವೆಂಕಟೇಶಪ್ಪ ಮುಂತಾದವರು ಹಾಜರಿದ್ದರು.(ಫೋಟೋ ಕ್ಯಾಫ್ಷನ್)
ವಿಜಯಪುರದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್‌ಗೌಡ, ಪುರಸಭಾಧ್ಯಕ್ಷೆ ಭವ್ಯಾಮಹೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಚಾಲನೆ ನೀಡಿದರು.