ಮಧ್ಯವರ್ತಿಗಳ ಹಾವಳಿ ತಡೆಗೆ ಸಹಕರಿಸಿ: ನಾಗಮ್ಮ ಕಟ್ಟೀಮನಿ

| Published : Sep 04 2025, 01:00 AM IST

ಸಾರಾಂಶ

ತಹಸೀಲ್ ಕಚೇರಿಗೆ ಬರುವವರು ಮಧ್ಯವರ್ತಿಗಳ ಮೇಲೆ ಅವಲಂಬಿತರಾಗಿರುವ ವಾತಾವರಣ ಕಂಡು ಬರುತ್ತಿದೆ. ಹೀಗಾಗಿ ಮೂಲ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಹಾವಳಿ ತಡೆಯಲು ನಮ್ಮ ಜೊತೆ ತಾವೂ ಸಹಕರಿಸಿ ಎಂದು ತಹಸೀಲ್ದಾರ್‌ ನಾಗಮ್ಮ ಕಟ್ಟೀಮನಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ತಹಸೀಲ್ ಕಚೇರಿಗೆ ಬರುವವರು ಮಧ್ಯವರ್ತಿಗಳ ಮೇಲೆ ಅವಲಂಬಿತರಾಗಿರುವ ವಾತಾವರಣ ಕಂಡು ಬರುತ್ತಿದೆ. ಹೀಗಾಗಿ ಮೂಲ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಹಾವಳಿ ತಡೆಯಲು ನಮ್ಮ ಜೊತೆ ತಾವೂ ಸಹಕರಿಸಿ ಎಂದು ತಹಸೀಲ್ದಾರ್‌ ನಾಗಮ್ಮ ಕಟ್ಟೀಮನಿ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ,ಯಾವುದೇ ಕಡತಗಳ ವಿಳಂಬ, ಸಿಬ್ಬಂದಿ ಅಸಹಕಾರದಂತಹ ದೂರುಗಳು ನನ್ನ ಗಮನಕ್ಕೆ ತನ್ನಿ. ಫಲಾನುಭವಿಗಳೂ ಕೂಡ ಮಧ್ಯವರ್ತಿಗಳ ಮೇಲೆ ಅವಲಂಬಿತರಾಗಬಾರದು. ನೇರವಾಗಿ ನಮಗೆ ಸಂಪರ್ಕಿಸಬೇಕೆಂಬ ಮಾಹಿತಿ ತಾಲೂಕಿನಾದ್ಯಂತ ತಿಳಿಸಬೇಕಾಗಿದೆ. ಆಡಳಿತ ವ್ಯವಸ್ಥೆಗೆ ಪತ್ರಕರ್ತರ ಸಲಹೆ-ಸೂಚನೆಗಳೂ ಕೂಡ ಅತ್ಯಂತ ಸಹಕಾರಿ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಜೊತೆಗೆ ಪತ್ರಿಕಾರಂಗದ ಸಹಕಾರವಿದ್ದಾಗ ಮಾತ್ರ ಪರಿಣಾಮಕಾರಿಯಾಗಿ ಸೇವೆ ಒದಗಿಸಲು ಸಾಧ್ಯ.

ಗ್ರೇಡ್-2 ತಹಸೀಲ್ದಾರ ಹುದ್ದೆ ಖಾಲಿ ಇರುವದರಿಂದ ಆದಾಯ, ಜಾತಿ, ಮಾಸಾಶನದಂತ ಕಡತಗಳ ವಿಲೇವಾರಿ ಸ್ಥಗಿತಗೊಂಡಿದೆ. ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ನಾನೂ ಗಮನಿಸಿರುವೆ. ಸೇವೆಗೆ ಹಾಜರಾದ ಕೂಡಲೇ ಜಿಲ್ಲಾಧಿಕಾರಿಗಳ ಗಮಮನಕ್ಕೆ ತಂದಿರುವೆ. 2-3ದಿನಗಳ ಒಳಗೆ ಗ್ರೇಡ್-2 ಹುದ್ದೆ ಭರ್ತಿಯಾಗಲಿದೆ. ಈಗಾಗಲೇ ತಹಸೀಲ್ ಕಚೇರಿಯ ಸಿಬ್ಬಂದಿಗಳ ಸಭೆ ನಡೆಸಿ, ಪಾರದರ್ಶಕ ಹಾಗೂ ಕ್ರೀಯಾಶೀಲದಿಂದ ಸೇವೆ ಸಲ್ಲಿಸಲು ಸೂಚಿಸ ಲಾಗಿದೆ. ಸೆ.4ರಂದು ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದು, ವಿವಿಧ ವಿಷಯಗಳ ಕುರಿತು ಚರ್ಚಿಸಲಾಗುವುದು. ಪಟ್ಟಣದಲ್ಲಿ ಬಿಡಾಡಿ ದನ ಮತ್ತು ನಾಯಿಗಳ ಕಾಟವಿದೆ ಎಂದು ತಿಳಿದಿದೆ. ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಲ್ಪಿಸಲಾಗುವದು.

ನಿರಂತರ ಮಳೆ ಬಂದ ಪರಿಣಾಮ ಬೆಳೆ ಹಾನಿಯಾಗಿರುವ ಕುರಿತು ದೂರುಗಳು ಬಂದಿವೆ.ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ನೀಡಿ ಜಂಟಿ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವದು.

ಸರ್ವೆ ಇಲಾಖೆಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿದೆ.ರೈತರಿಗೆ ಸರಿಯಾದ ಸಮಯಕ್ಕೆ ಅಧಿಕಾರಿಗಳು,ಸರ್ವೆ ಮಾಡುವವರು ಸ್ಪಂದಿಸುತ್ತಿಲ್ಲ ಎಂಬ ದೂರುಗಳಿದ್ದು,ಕೂಡಲೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವದು ಎಂದು ತಹಸೀಲ್ದಾರ ನಾಗಮ್ಮ ಕಟ್ಟೀಮನಿ ತಿಳಿಸಿದರು, ಈ ಸಂದರ್ಭದಲ್ಲಿ ಶಿರಸ್ತೇದಾರರಾದ ಭೀಮರಾಯ ನಾಯಕ ಗೋವಿಂದಪಲ್ಲಿ,ಗೋವಿಂದ, ಸಿಬ್ಬಂದಿಗಳಾದ ಅಭಿಷೇಕ,ಪ್ರವೀಣ ಇದ್ದರು.