ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸಹಕರಿಸಿ

| Published : May 07 2025, 12:46 AM IST

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಸಹಕರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಹೆಜ್ಜೆ ಇಡಲಾಗುತ್ತಿದ್ದು, ಈ ಸಮಸ್ಯೆಯ ಪ್ರಾಯೋಗಿಕ ಪರಿಹಾರಕ್ಕೆ ಅಧಿಕಾರಿಗಳು ಹಾಗೂ ರೈತರು ಸಹಕರಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.

ಶಿವಮೊಗ್ಗ: ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಹೆಜ್ಜೆ ಇಡಲಾಗುತ್ತಿದ್ದು, ಈ ಸಮಸ್ಯೆಯ ಪ್ರಾಯೋಗಿಕ ಪರಿಹಾರಕ್ಕೆ ಅಧಿಕಾರಿಗಳು ಹಾಗೂ ರೈತರು ಸಹಕರಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಶರಾವತಿ ಮುಳಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಅಧಿಕಾರಿಗಳು ಮತ್ತು ಸಂತ್ರಸ್ತರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.

ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ಅರಣ್ಯ ಮತ್ತು ಕಂದಾಯ ಇಲಾಖೆಗಳು ಸೇರಿ 9129 ಎಕರೆಯನ್ನು ಸರ್ವೇಗೆ ಗುರುತಿಸಲಾಗಿದ್ದು ಸರ್ವೇ ಕಾರ್ಯ ಪ್ರಗತಿಯಲ್ಲಿದೆ. ಈ ವಿಷಯದಲ್ಲಿ ರೈತರಲ್ಲಿ ಹಾಗೂ ಅಧಿಕಾರಿಗಳಲ್ಲಿ ಅನೇಕ ಗೊಂದಲಗಳಿವೆ. ಗುರುತಿಸಿರುವುದಕ್ಕಿಂತ ಹೆಚ್ಚಿನ ಭೂಮಿಯಲ್ಲಿ ರೈತರು ಅನುಭೋಗದಲ್ಲಿದ್ದು, ಈ ಬಗ್ಗೆಯೂ ಗಮನ ಹರಿಸಬೇಕಿದೆ ಎಂದರು.ಸುಪ್ರೀಂ ಕೋರ್ಟ್, ರಾಜ್ಯ ಮತ್ತು ಕೇಂದ್ರದ ಕಾರ್ಯದರ್ಶಿಗಳು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಅವಕಾಶ ನೀಡಿದ್ದು, ಜಿಲ್ಲಾಧಿಕಾರಿಗಳು, ಸಿಸಿಎಫ್ ಮತ್ತು ಸಿಎಸ್‌ರವರು ಇದನ್ನು ಗಂಭೀರವಾಗಿ ಪರಿಗಣಿಸಿ ಈ ಸದವಕಾಶವನ್ನು ಬಳಸಿಕೊಳ್ಳಬೇಕು ಎಂದರು.ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸುಪ್ರೀಂ ಕೋರ್ಟ್ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಲು ಸೂಚಿಸಿದೆ. ಈ ನಿಟ್ಟಿನಲ್ಲಿ ಫಾರೆಸ್ಟ್ ಸೆಟ್ಲಮೆಂಟ್ ಆಫೀಸರ್‌ನ್ನು ನೇಮಿಸಿ ನಿಜವಾದ ಮುಳಗಡೆ ಸಂತ್ರಸ್ತರನ್ನು ಗುರುತಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.ಸಂತ್ರಸ್ತರಾದ ತಿಮ್ಮಪ್ಪ ಮಾತನಾಡಿ, ಈ ಹಿಂದೆ ಕಳುಹಿಸಲಾಗಿದ್ದ ಸುಮಾರು 6000 ಎಕರೆ ಬ್ಲಾಕ್ ವಿವರ ಸಂಪೂರ್ಣ ತಪ್ಪಾಗಿತ್ತು. ಅದನ್ನೇ ಮುಂದುವರೆಸಿಕೊಂಡು ಹೋದರೆ ಸಮಸ್ಯೆಗೆ ಪರಿಹಾರ ಒದಗುವುದು ಕಷ್ಟ. ಆದ್ದರಿಂದ ಹೊಸದಾಗಿ ಸರ್ವೇ ಮಾಡಿ ಬ್ಲಾಕ್ ಸಿದ್ಧಪಡಿಸಿದರೆ ಒಳಿತು. ಸರ್ವೇ ನಂತರ ಗೊಂದಲ ಹೆಚ್ಚಾಗಿದ್ದು ಸರ್ವೇ ನಂ.ಗಳೂ ಬದಲಾಗಿ ಕಂದಾಯ ಭೂಮಿಯನ್ನು ಅರಣ್ಯ ಭೂಮಿ ಎಂದು ತೋರಿಸಲಾಗುತ್ತಿದೆ ಎಂದರು.ತೀ.ನಾ.ಶ್ರೀನಿವಾಸ್ ಮಾತನಾಡಿ, ಇದೊಂದು ಗಂಭೀರ ವಿಚಾರ. ರಾಜ್ಯ ಮತ್ತು ಕೇಂದ್ರದ ಕಾರ್ಯದರ್ಶಿಗಳು ಸೌಹಾರ್ಧಯುತವಾಗಿ ಚರ್ಚಿಸಿ ಬಗೆಹರಿಸಲು ಸುಪ್ರೀಂ ಕೋರ್ಟ್ ನೀಡಿರುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಈ ಸಮಸ್ಯೆಗೆ ಪರಿಹಾರ ನೀಡಬೇಕು. ಹಕ್ಕು ಪತ್ರ ಇರುವವರಿಗಾದರೂ ನ್ಯಾಯ ಒದಗಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರ ಸುಮಾರು 9129 ಎಕರೆ ವಿಸ್ತೀರ್ಣ ಗುರುತಿಸಲಾಗಿದೆ. 4879 ಎಕರೆ ಅಳತೆಯಾಗಿದ್ದು 4249 ಎಕರೆ ಬಾಕಿ ಇದೆ. 97 ಸ್ಥಳ ಮತ್ತು 400 ಬ್ಲಾಕ್ ಗುರುತಿಸಲಾಗಿದೆ. ರಾಜ್ಯ ಸರ್ಕಾರದ ಆದೇಶದಂತೆ ಸರ್ವೇ ಕಾರ್ಯ ನಡೆಯುತ್ತಿದೆ. ಆದರೆ ಸುಮಾರು 25 ಸಾವಿರ ಎಕರೆ ಭೂಮಿಯಲ್ಲಿ ಉಳುಮೆ ಮಾಡಲಾಗುತ್ತಿದ್ದು, ಸದ್ಯಕ್ಕೆ 9129 ಎಕರೆ ಮಾತ್ರ ಗುರುತಿಸಲಾಗಿದೆ. ಹೆಚ್ಚುವರಿಯಾಗಿರುವ ಜಮೀನಿನ ಕುರಿತು ಮನವಿ ನೀಡಿದಲ್ಲಿ ಈ ಕುರಿತು ಕಾನೂನಾತ್ಮಕವಾಗಿ ಸಹಾಯ ಮಾಡಲು ಸಹಕರಿಸಲಾಗುವುದು ಎಂದು ತಿಳಿಸಿದರು.

ಸಿಸಿಎಫ್ ಹನುಮಂತಪ್ಪ ಮಾತನಾಡಿ, ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸಂಬಂಧಿಸಿದಂತೆ ಪ್ರಸ್ತುತ 27 ಜಿಓ ಲಭ್ಯವಿದೆ. 9129 ಎಕರೆಯನ್ನು ಗುರುತಿಸಲಾಗಿದೆ. ಸರ್ಕಾರ ಭೂ ಅನುಭೋಗದಾರರ ಮತ್ತು ಡಿಜಿಪಿಎಸ್ ದಾಖಲಾತಿ ನೀಡುವಂತೆ ಕೇಳಿದ್ದು ಪ್ರಸ್ತುತ ಈ ದಾಖಲಾತಿ ಸಿದ್ದವಿರುವ ವಿವರವನ್ನು ಸಲ್ಲಿಸಬಹುದು ಎಂದರು.ಶಾಸಕರಾದ ಶಾರದಾ ಪರ‍್ಯಾನಾಯ್ಕ, ಆರಗ ಜ್ಞಾನೇಂದ್ರ, ಮಾಜಿ ಶಾಸಕ ಅಶೋಕ್ ನಾಯ್ಕ್, ದಿಶಾ ಸಮಿತಿ ಸದಸ್ಯರು, ಡಿಸಿಎಫ್, ಎಸಿ, ತಹಶೀಲ್ದಾರರು, ಡಿಡಿಎಲ್‌ಆರ್, ಇತರೆ ಅಧಿಕಾರಿಗಳು, ಸಂತ್ರಸ್ತರು ಹಾಜರಿದ್ದರು.