ಸಾರಾಂಶ
ಸಾಗರ: ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಯ ಅಧಿಕಾರ ದೊರಕಿದಾಗ ಸಾಮಾನ್ಯ ಜನರಿಗೆ ಸಹಾಯ ಮಾಡಬೇಕು. ಯಾವುದೇ ಅಧಿಕಾರ ಶಾಶ್ವತವಲ್ಲ. ದೊರಕಿದ ಅಧಿಕಾರವನ್ನು ಇರುವ ಮಿತಿಯಲ್ಲಿ ನೊಂದವರ ನೆರವಿಗೆ ಬಳಸಿಕೊಳ್ಳಬೇಕು ಎಂದು ಬೆಂಗಳೂರಿನ ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ಬಸವರಾಜ.ಕೆ.ಎಸ್ ಹೇಳಿದರು.
ಪಟ್ಟಣದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಎಲ್.ಬಿ.ಎಂಡ್ ಎಸ್.ಬಿ.ಎಸ್. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಕಠಿಣ ಪರಿಶ್ರಮ, ನಿರಂತರ ಓದು ಹಾಗೂ ಗಂಭೀರ ಪ್ರಯತ್ನದಿಂದ ಸಾಧನೆಯ ಗುರಿ ತಲುಪಲು ಸಾಧ್ಯ. ಯಾವಾಗಲೂ ನಮ್ಮ ಗುರಿ ದೊಡ್ಡದಾಗಿರಬೇಕು ಎಂದರು.ಕೆಪಿಎಸ್ಸಿ ಯಂಥ ಪರೀಕ್ಷೆಗಳನ್ನು ಪಾಸು ಮಾಡಿ ಆಯ್ಕೆಯಾಗುವ ಸಂದರ್ಭದಲ್ಲಿ ನಮ್ಮ ಪ್ರಯತ್ನ ಗಂಭೀರವಾಗಿರಬೇಕು. ರಾಜಕೀಯ ಪ್ರಭಾವವೋ, ಹಣದ ಬಲವೋ ಇದೆ ಎಂದು ಓದುವ ಪ್ರಯತ್ನದಿಂದ ಹಿಂದೆ ಸರಿಯಬಾರದು. ಲಿಖಿತ ಪರೀಕ್ಷೆಗಳನ್ನು ಚೆನ್ನಾಗಿ ಮಾಡಿದರೆ ಪ್ರಭಾವ ಅಥವಾ ಹಣದ ಅವಶ್ಯಕತೆ ಇರುವುದಿಲ್ಲ. ಎಸ್ಎಸ್‌ಎಲ್‌ಸಿ, ಪಿಯುಸಿ ತರಗತಿಗಳಲ್ಲಿ ಕಡಿಮೆ ಅಂಕ ಬಂದರೆ ಭವಿಷ್ಯವೇ ಇಲ್ಲ ಎಂಬ ಮನಸ್ಥಿತಿ ಬೆಳೆಸಿಕೊಳ್ಳಬಾರದು. ಇದು ಒಂದು ಹಂತ ಮಾತ್ರ. ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಹೆಚ್ಚಿನ ಅವಕಾಶವಿದೆ. ಹೆಚ್ಚು ಹೆಚ್ಚು ಓದುವ ಮೂಲಕ ಹೆಚ್ಚಿನ ಜ್ಞಾನ ಪಡೆದುಕೊಳ್ಳಬೇಕು ಎಂದವರು ಸಲಹೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಈ ಕಾಲೇಜು ರಾಜ್ಯದಲ್ಲೇ ಹೆಸರು ಮಾಡಿದ ವಿದ್ಯಾಸಂಸ್ಥೆ. ಕವಿ ಗೋಪಾಲಕೃಷ್ಣ ಅಡಿಗರು, ಚಂದ್ರಶೇಖರ ಕಂಬಾರರು, ಜಿ.ಕೆ.ಗೋವಿಂದರಾವ್ ಮುಂತಾದವರು ಈ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ೬೦ ವರ್ಷಗಳಲ್ಲಿ ೬೦ ಸಾವಿರ ಪದವೀಧರರು ಬದುಕು ಕಟ್ಟಿಕೊಂಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಕಾಲೇಜಿಗೆ ೪೫ ಲಕ್ಷ ರು. ಆರ್ಥಿಕ ನೆರವು ನೀಡಿದ ಬೆಂಗಳೂರಿನ ಲಿಂಡೆ ಇಂಡಿಯಾ ಪ್ರೈಂ.ಲಿ. ಕಂಪನಿಯ ಮ್ಯಾನೇಜರ್ ಮನೀಷ್ ಬಿ.ಹೆಬ್ಸೆ ಮತ್ತು ಈ ಬಾರಿಯ ಯುಪಿಎಸ್ಸಿಯಲ್ಲಿ ರ್‍ಯಾಂಕ್ ವಿಜೇತ ವಿಕಾಸ್ ವಿ. ಹಾಗೂ ಬೆಂಗಳೂರಿನ ಅಪರ ಆಯುಕ್ತ ಬಸವರಾಜ.ಕೆ.ಎಸ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ವಿಷಯಗಳ ದತ್ತಿ ಬಹುಮಾನ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಕಾಲೇಜಿನ ಪ್ರಾಂಶುಪಾಲರಾದ ಡಾ.ಲಕ್ಷ್ಮೀಶ್ ಎ.ಎಸ್., ಎಂ.ಡಿ.ಎಫ್. ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎಂ.ಶಿವಕುಮಾರ್, ಖಜಾಂಚಿ ವೆಂಕಟೇಶ.ಕೆ, ಜಂಟಿ ಕಾರ್ಯದರ್ಶಿಗಳಾದ ಸತ್ಯನಾರಾಯಣ ಎಂ.ಆರ್., ಪ್ರಕಾಶ್.ಬಿ.ಎಸ್., ವಿದ್ಯಾರ್ಥಿ ವೇದಿಕೆ ಸಂಚಾಲಕ ಡಾ.ನಿರಂಜನಮೂರ್ತಿ.ಟಿ, ಕ್ರೀಡಾ ವಿಭಾಗದ ನಿರ್ದೇಶಕ ಭರತ್‌ರಾಜ್ ಉಪಸ್ಥಿತರಿದ್ದರು.