ಸಾರಾಂಶ
ರಾಮನಗರ: ಬಯಲು ಸೀಮೆ ಜಿಲ್ಲೆಗಳಿಗೆ ಅನುಕೂಲವಾಗಲಿರುವ ಮೇಕೆದಾಟು ಯೋಜನೆ ಜಾರಿ ಸೇರಿದಂತೆ ರೈತರ ಹಲವಾರು ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕನಕಪುರ ತಾಲೂಕು ಅಧ್ಯಕ್ಷ ಬಿ.ಸತೀಶ್ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ವಿಶ್ವ ರೈತ ದಿನಾಚರಣೆ ಪ್ರಯುಕ್ತ ರೈತ ನಾಯಕ ನಂಜುಂಡಸ್ವಾಮಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಮೇಕೆದಾಟು ಯೋಜನೆ ಡಿಪಿಆರ್ ಸಿದ್ಧ ಪಡಿಸಲಾಗಿದ್ದು, ಕಳೆದ ಬಜೆಟ್ ನಲ್ಲಿ ಸಾವಿರ ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಕೂಡಲೇ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದರು.ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ನಡೆಸಿತ್ತು. ಇದೀಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ ಯೋಜನೆಗೆ ಬೇಕಾದಷ್ಟು ಪೂರ್ಣ ಹಣವನ್ನು ತೆಗೆದಿರಿಸಿ ತ್ವರಿತವಾಗಿ ಜಲಾಶಯಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಯೋಜನೆಗೆ ಚಾಲನೆ ನೀಡಬೇಕು. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದುಕೊಳ್ಳಲಿ ಎಂದು ಹೇಳಿದರು.
ಸಾತನೂರು ತಾಲೂಕು ಮಾಡಲು 1984ರಿಂದ 3 ಸಮಿತಿಗಲ ರಚನೆ ಮಾಡಿದ್ದು, ಆ ಸಮಿತಿಯಲ್ಲಿ ರಾಮನಗರ ಜಿಲ್ಲೆಯ ಅತಿ ದೊಡ್ಡ ತಾಲೂಕಾದ ಕನಕಪುರ ತಾಲೂಕಿನ ಸಾತನೂರು ಹೋಬಳಿಯನ್ನು ಹೊಸ ತಾಲೂಕು ಮಾಡಬೇಕೆಂದು ಆಗಿನ ಸಮಿತಿಗಳೇ ವರದಿ ನೀಡಿವೆ. ಆದರೂ ತಾಲೂಕು ರಚನೆ ಮಾಡದೇ ಎಲ್ಲ ಸರ್ಕಾರಗಳು ಮೀನಮೇಷ ಮಾಡುತ್ತಿವೆ.ಸಾತನೂರು ವಿಧಾನಸಭಾ ಕ್ಷೇತ್ರ ಆಗಿದ್ದಾಗ 6 ಬಾರಿ ಪ್ರತಿನಿಧಿಸಿದ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಗಳಾಗಿದ್ದು, ಅವರ ಮೇಲೆ ಸಾತನೂರಿನ ಋಣ ಇದೆ.
ತ್ವರಿತವಾಗಿ ಸಾತನೂರು ಹೋಬಳಿಯನ್ನು ಹೊಸ ತಾಲೂಕಾಗಿ ಘೋಷಣೆ ಮಾಡುವತ್ತ ಗಮನ ಹರಿಸಬೇಕು. ಇಲ್ಲವಾದರೆ ಬಿಎಂಆರ್ ಡಿಎ ಉಪನಗರವನ್ನಾದರೂ ಮಾಡಬೇಕೆಂದು ಒತ್ತಾಯಿಸಿದರು.ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಮಾತ್ರವಲ್ಲದೆ ರೈತರ ಪ್ರಾಣ ಹಾನಿಯಾಗುತ್ತಿದೆ. ವನ್ಯಜೀವಿಗಳ ಉಪಟಳದಿಂದ ಬೆಳೆ ಬೆಳೆಯಲು ಆಗುತ್ತಿಲ್ಲ. ಬೆಳೆ ನಷ್ಟಕ್ಕೆ ನೀಡುತ್ತಿರುವ ಪರಿಹಾರ ಬಿತ್ತನೆಗೂ ಸಾಲುತ್ತಿಲ್ಲ. ವನ್ಯಜೀವಿಗಳ ಹಾವಳಿ ತಡೆಗಟ್ಟುವುದರ ಜೊತೆಗೆ ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಸತೀಶ್ ಆಗ್ರಹಿಸಿದರು.
ಒಂದು ಕೇಜಿ ರೇಷ್ಮೆ ಬೆಳೆಯಲು 400 ರುಪಾಯಿ ವೆಚ್ಚ ತಗಲುತ್ತಿದೆ. ಆದರೆ, ಮಾರುಕಟ್ಟೆಯಲ್ಲಿ 300 ರಿಂದ 350 ರುಪಾಯಿ ದರ ಮಾತ್ರ ಸಿಗುತ್ತಿದೆ. ಸಿಬಿ ರೇಷ್ಮೆ ಗೂಡಿಗೆ 600 ಹಾಗೂ ಮಿಶ್ರ ತಳಿ ರೇಷ್ಮೆ ತಳಿಗೆ 1 ಸಾವಿರ ರುಪಾಯಿ ಬೆಂಬಲ ನಿಗದಿ ಪಡಿಸಬೇಕು. ಪ್ರತಿ ಲೀಟರ್ ಹಾಲಿಗೆ 50 ರುಪಾಯಿ ಬೆಂಬಲ ಬೆಲೆ ಕೊಡಬೇಕೆಂದು ಒತ್ತಾಯ ಮಾಡಿದರು.ಸರ್ಕಾರ ಬಿಡುಗಡೆ ಮಾಡಿದ ಆದೇಶದಂತೆ ಸರ್ಕಾರಿ ನಕಾಶೆ ರಸ್ತೆಗಳನ್ನು ಸರ್ಕಾರವೇ ಸ್ವಯಂ ಪ್ರೇರಿತವಾಗಿ ಅಧಿಕಾರಿಗಳಿಂದ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ರಸ್ತೆ ಮಾಡಿಸಿಕೊಡಬೇಕೆಂದು ಸತೀಶ್ ಆಗ್ರಹಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ದೇವರಾಜು, ಮುಖಂಡರಾದ ಅನುಕುಮಾರ್ , ತಮ್ಮಗೌಡ, ಕೃಷ್ಣಪ್ಪ ಬೇಕುಪ್ಪೆ, ಶಾಂತಮ್ಮ, ವಸಂತಮ್ಮ, ಶಿವಗೂಳಿಗೌಡ, ಮುತ್ತಪ್ಪ, ರಮೇಶ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.23ಕೆಆರ್ ಎಂಎನ್ 1.ಜೆಪಿಜಿ
ರಾಮನಗರದಲ್ಲಿ ವಿಶ್ವ ರೈತ ದಿನಾಚರಣೆ ಪ್ರಯುಕ್ತ ರೈತ ನಾಯಕ ನಂಜುಂಡಸ್ವಾಮಿ ಭಾವಚಿತ್ರಕ್ಕೆ ರೈತ ಮುಖಂಡರು ಪುಷ್ಪನಮನ ಸಲ್ಲಿಸಿದರು.