ಸಾರಾಂಶ
ಕನ್ನಡಪ್ರಭ ವಾರ್ತೆ ಸಿಂಧನೂರು
ಕಳೆದ ಬಾರಿಯ ಸಣ್ಣ-ಪುಟ್ಟ ತಪ್ಪುಗಳನ್ನು ತಿದ್ದಿಕೊಂಡು ಇನ್ನಷ್ಟು ವಿಜೃಂಭಣೆಯಿಂದ ಈ ಬಾರಿಯ ದಸರಾ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.ಸ್ಥಳೀಯ ನಗರಸಭೆ ಸಭಾಂಗಣದಲ್ಲಿ ಗುರುವಾರ ಸಂಜೆ ಸಂಘ-ಸಂಸ್ಥೆಗಳ ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಹೋದ ವರ್ಷದಂತೆ ಈ ಬಾರಿಯೂ ಸಂಘ-ಸಂಸ್ಥೆಗಳು ಪಕ್ಷ ಬೇಧ ಮರೆತು ಸಹಕರಿಸಬೇಕು ಎಂದು ಮನವಿ ಮಾಡಿದರು.
ಹಿಂದಿನ ವರ್ಷದ ನಗರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಈ ಬಾರಿ ಗ್ರಾಮೀಣ ಪ್ರದೇಶದ ಸಂಸ್ಕೃತಿ, ಕ್ರೀಡೆ, ಜನಪದ ಗಾಯನ ಮತ್ತಿತರ ಗ್ರಾಮೀಣ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಂಘ-ಸಂಸ್ಥೆಗಳು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.ದಸರಾ ಉತ್ಸವದ ಸಮಯದಲ್ಲಿ ತಾಯಿ-ಮಕ್ಕಳ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಕೌಶಲ್ಯ ಅಭಿವೃದ್ಧಿ ಸಂಸ್ಥೆ, ಪದವಿ ಕಾಲೇಜಿನ ಕಟ್ಟಡ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಭೂಮಿ ಪೂಜೆ ಹಾಗೂ ಉದ್ಘಾಟನೆ ಮಾಡುವ ಉದ್ದೇಶದಿಂದ ಸಂಬಂಧಿಸಿದ ಸಚಿವರನ್ನು ಸಂಪರ್ಕಿಸಿರುವುದಾಗಿ ತಿಳಿಸಿದರು.
ಅಂಬಾದೇವಿ, ಮಹಾತ್ಮಗಾಂಧಿ ಸ್ತಬ್ಧ ಚಿತ್ರದ ಜೊತೆಗೆ ಎಲ್ಲಾ ಸಮಾಜದ ಮುಖಂಡರು ಆ.2 ರಂದು ಅದ್ಧೂರಿಯಿಂದ ನಡೆಯುವ ಅಂಬಾರಿ ಮೆರವಣಿಗೆಗೆ ಮೆರಗು ತರಲು ಆಯಾ ಸಮಾಜದ ಸಾಂಸ್ಕೃತಿಕ ನಾಯಕರ ಸ್ತಬ್ಧ ಚಿತ್ರಗಳನ್ನು ತರುವಂತೆ ಶಾಸಕರು ಮನವಿ ಮಾಡಿದರು.ಸಭೆಯಲ್ಲಿ ಪ್ರಾರಂಭದಲ್ಲಿ ಎಸ್.ದೇವೇಂದ್ರಗೌಡ ಮಾತನಾಡಿದರು.ತಹಶೀಲ್ದಾರ್ ಅರುಣಕುಮಾರ ದೇಸಾಯಿ, ಇಒ ಚಂದ್ರಶೇಖರ, ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಪೌರಾಯುಕ್ತ ಪಾಂಡುರಂಗ ಇಟಗಿ, ಬಸವರಾಜ ಹಿರೇಗೌಡರ, ರಂಗನಗೌಡ, ಡಾ.ಬಿ.ಎನ್.ಪಾಟೀಲ್, ವೀರೇಶ ಈಲ್ಲೂರು, ಲಕ್ಷ್ಮೀ ಪತ್ತಾರ, ಪಂಪಯ್ಯಸ್ವಾಮಿ ಸಾಲಿಮಠ, ಶಾಂತಕುಮಾರ ಜಾಗೀರದಾರ, ದವಲಸಾಬ ದೊಡ್ಡಮನಿ, ಉಮೇಶ, ಗಂಗಣ್ಣ, ಬೀರಪ್ಪ ಶಂಭೋಜಿ ಉಪಸ್ಥಿತರಿದ್ದರು.