ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್, ನೊಮಿ ನೆಟ್ವರ್ಕ್ ಗಳ ಸಹಯೋಗದಲ್ಲಿ ಹಾಗೂ ತೆಂಕನಿಡಿಯೂರು ಗ್ರಾಪಂ ಮತ್ತು ಪ್ರಗತಿ ಸಂಜೀವಿನಿ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾದ 6 ದಿನಗಳ ಮಸಾಲ ಪುಡಿ ತಯಾರಿಯ ತರಬೇತಿಗೆ ಗ್ರಾಪಂ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಯಾನಂದ ಬೆನ್ನೂರು ಮಾತನಾಡಿ, ಮಹಿಳೆಯರು ಈ ತರಬೇತಿಯನ್ನು ಉಪಯೋಗಪಡೆಕೊಂಡು ಸ್ವಂತ ಉದ್ಯಮ ಆರಂಭಿಸಬೇಕು. ಅದಕ್ಕೆ ಬೇಕಾದ ಸಹಕಾರವನ್ನು ಪಂಚಾಯಿತಿ ವತಿಯಿಂದ ನೀಡಲು ಸಿದ್ಧವಿದ್ದೇವೆ ಎಂದು ಹೇಳಿದರು. ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಮಾತನಾಡಿ, ಮಹಿಳೆಯರು ತರಬೇತಿಯಲ್ಲಿ ಕಲಿತ ಕೌಶಲ್ಯಗಳನ್ನು ಕೇವಲ ತರಬೇತಿಗೆ ಸೀಮಿತಗೊಳಿಸದೇ, ಸ್ವಂತ ಉದ್ಯಮ ಆರಂಭಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು.ಎನ್‌ಆರ್‌ಎಲ್‌ಎಂ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕಿ ಸವಿತಾ ಮಾತನಾಡಿ, ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ, ಉಡುಪಿ ಸಂಜೀವಿನಿ ಮಾರ್ಟ್ನಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಒದಗಿಸಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಮೋಹಿನಿ, ಸಂಜೀವಿನಿ ಒಕ್ಕೂಟದ ಕಾರ್ಯದರ್ಶಿ ಅನಿತಾ ಉಪಸ್ಥಿತರಿದ್ದರು. ತರಬೇತಿಯಲ್ಲಿ 25 ಶಿಬಿರಾರ್ಥಿಗಳು ಭಾಗವಹಿಸಿದರು. ರಾಧಾ ಮತ್ತು ಕೃಷಿಸಖಿ ಸಂಜನಾ ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು