ಕನ್ನಡಪ್ರಭ ವಾರ್ತೆ ವಿಜಯಪುರಮಾಜಿ ಶಾಸಕ ಲಿಂಗೈಕ್ಯ ಆರ್‌.ಆರ್‌.ಕಲ್ಲೂರ ಹಾಗೂ ಲಿಂಗೈಕ್ಯ ಮೀನಾಕ್ಷಿ ಆರ್‌ ಕಲ್ಲೂರ ಅವರ 5ನೇ ಪುಣ್ಯಸ್ಮರಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ ಕಾರ್ಯಕ್ರಮವು ನಗರದ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಗುರುವಾರ ಜರುಗಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ಮಾಜಿ ಶಾಸಕ ಲಿಂಗೈಕ್ಯ ಆರ್‌.ಆರ್‌.ಕಲ್ಲೂರ ಹಾಗೂ ಲಿಂಗೈಕ್ಯ ಮೀನಾಕ್ಷಿ ಆರ್‌ ಕಲ್ಲೂರ ಅವರ 5ನೇ ಪುಣ್ಯಸ್ಮರಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ ಕಾರ್ಯಕ್ರಮವು ನಗರದ ಕಿತ್ತೂರ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಗುರುವಾರ ಜರುಗಿತು.

ವೇದಿಕೆಯಲ್ಲಿ ಕಲ್ಲೂರ ದಂಪತಿ ಸಾಧನೆಯ ಹತ್ತು ನಿಮಿಷದ ಯಶೋಗಾಥೆಯನ್ನು ಪ್ರದರ್ಶಿಸಲಾಯಿತು. ಇದೇ ವೇಳೆ ಶ್ರೀಮತಿ ಗಂಗಾಬಾಯಿ ಎಸ್ ಕಲ್ಲೂರ ಅವರಿಗೆ ಶ್ರೀ ಸಿದ್ಧೇಶ್ವರ ಸಂಸ್ಥೆಯಿಂದ ಗೌರವ ಸನ್ಮಾನ ಜರುಗಿತು. ಸಾನ್ನಿಧ್ಯ ವಹಿಸಿದ್ದ ಸುತ್ತೂರು ವೀರಸಿಂಹಾಸನ ಸಂಸ್ಥಾನಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಆಶೀರ್ವಚನ ನೀಡಿ, ಕಲ್ಲೂರ ಅವರು ಭೌತಿಕವಾಗಿ ಇಲ್ಲದಿದ್ದರೂ ಎಲ್ಲರ ಮನಸಿನಲ್ಲಿಯೂ ಶಾಶ್ವತರಾಗಿ ನೆಲೆಸಿದ್ದಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಜನಮಸ್ತೋಮವೇ ಸಾಕ್ಷಿಯಾಗಿದೆ. ಅತ್ಯಂತ ಸರಳವಾಗಿ ಜೀವಿಸಿ ಜನರಿಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಅವರು, ಶಿಕ್ಷಣ, ಸಹಕಾರಿ, ಸಾಮಾಜಿಕ ಸೇವೆಯಲ್ಲಿ ಅನನ್ಯ ಕೊಡುಗೆ ನೀಡಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗಾಗಿ ಶಾಲಾ, ಕಾಲೇಜುಗಳನ್ನು ಸ್ಥಾಪಿಸಿದರು. ರೈತರಿಗಾಗಿ ವಿದ್ಯುತ್ ಸ್ಟೇಶನ್‌ಗಳನ್ನು ಸ್ಥಾಪಿಸಿದರು ಎಂದರು.

ಸಾನ್ನಿಧ್ಯ ವಹಿಸಿದ್ದ ಇಳಕಲ್ ವಿಜಯಮಹಾಂತ ಮಠದ ಗುರುಬಸವ ಮಹಾಂತ ಸ್ವಾಮೀಜಿ ಆಶೀರ್ವಚನ‌ ನೀಡಿ, ಆರ್.ಆರ್.ಕಲ್ಲೂರ ಎಂದೇ ಖ್ಯಾತಿಯಾಗಿರುವ ರೇವಣಸಿದ್ದಪ್ಪ ಕಲ್ಲೂರ ಅವರು ಅತ್ಯಂತ ಸ್ಮರಣೀಯರು. ಮಗುವಿನಂತಹ ಮನಸಿನ ಅವರು ಇನ್ನೂ 100 ವರ್ಷಗಳಾದರೂ ಅವರು ಶಾಶ್ವತವಾಗಿ ಜನರ ಮನಸಿನಲ್ಲಿ ಇರಲಿದ್ದಾರೆ ಎಂದರು.ಸದ್ಗುಣ, ದಾಸೋಹ ಭಾವ ಹೊಂದಿದ್ದ ಕಲ್ಲೂರ ರವರಿಗೆ ಧರ್ಮಪತ್ನಿ ಮೀನಾಕ್ಷಿ ಕಲ್ಲೂರ ಅವರು ಸಾಥ್ ನೀಡಿದ್ದರು. ಆರ್.ಆರ್.ಕಲ್ಲೂರ ರವರು ನಿಧನರಾದ ಬಳಿಕ ಕೆಲವೇ ದಿನದಲ್ಲಿ ಪತ್ನಿ ಮೀನಾಕ್ಷಿ ಕಲ್ಲೂರ ರವರು ನಿಧನರಾದರು. ಇದು ಅವರ ಆತ್ಮೀಯತೆಯ ಬಾಂಧವ್ಯ ತಿಳಿಸುತ್ತಿದ್ದು, ಯುವ ಪೀಳಿಗೆಗೆ ಇವರ ಪತಿ-ಪತ್ನಿ ಬಾಂಧವ್ಯದ ಬದುಕನ್ನು ಆದರ್ಶ ದಂಪತಿಗಳ ಹೆಸರಿನ ಪಠ್ಯಕ್ರಮದಲ್ಲಿ ಅಳವಡಿಸಿ ತಿಳಿಸಬೇಕಿದೆ ಎಂದು ಕರೆ ನೀಡಿದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ನಾನು ಯಾವಾಗಲೂ ಆರ್.ಆರ್.ಕಲ್ಲೂರ ಅವರಿಗೆ ಮಾಮಾ, ಮೀನಾಕ್ಷಿ ತಾಯಿಗೆ ಅಕ್ಕ ಎನ್ನುತ್ತಿದ್ದೆ. ನನಗೂ ಅವರ ಕುಟುಂಬಕ್ಕೂ ಅವಿನಾಭಾವ ಸಂಬಂಧವಿತ್ತು. ಕಲ್ಲೂರ ರವರಿಗೆ ಶಿಕ್ಷಣದ ಬಗ್ಗೆ ಹಾಗೂ ತಾಯಿ ಮೀನಾಕ್ಷಿ ಅಕ್ಕನವರಿಗೆ ಸಹಕಾರ ರಂಗದ ಬಗ್ಗೆ ಆಸಕ್ತಿಯಿತ್ತು ಎಂದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಆರ್.ಆರ್.ಕಲ್ಲೂರ ಅವರು ಮೌಲ್ಯಾಧಾರಿತ ರಾಜಕಾರಣಿಗಳು. ಅವರು ಎಲ್ಲರೊಂದಿಗೆ ಬೆರೆಯುವ ಸ್ವಭಾವದ ರಾಜಕಾರಣಿಯಾಗಿದ್ದರು. ನಾವು ಒಮ್ಮೆ ಹೋಗಿ ಕೇಳಿದಾಗ ಶ್ರೀ ಸಿದ್ಧೇಶ್ವರ ಸಂಸ್ಥೆಗೆ ಅವರಾಗಿಯೇ ₹50 ಲಕ್ಷ ದಾನ ನೀಡಿದರು. ಈ ಮೂಲಕ ಅವರ ಸಹಾಯ ಮನೋಭಾವನೆ ಎಲ್ಲರಿಗೂ ಮಾದರಿಯಾಗಿದ್ದು, ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ವನಶ್ರೀ ಮಠದ ಜಯಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲರೂ ಮರೆಯುವಂತಹ ಸಮಾಜದಲ್ಲಿ ನೆನೆಸಿಕೊಳ್ಳುವಂತಹ ಕೆಲಸವನ್ನು ಕಲ್ಲೂರ ಕುಟುಂಬಸ್ಥರು ಮಾಡಿದ್ದಾರೆ. ನಿಸ್ವಾರ್ಥದ ಜೀವನ, ಮೌಲ್ಯಾಧಾರಿತ ರಾಜಕಾರಣದಿಂದಲೇ ಇಂದಿನ ಅವರ ಕಾರ್ಯಕ್ರಮಕ್ಕೆ ಎಲ್ಲ‌ ಪಕ್ಷಗಳ ನಾಯಕರು, ಎಲ್ಲ ವರ್ಗದ ಜನರು ಆಗಮಿಸಿದ್ದಾರೆ. ಕಲ್ಲೂರ ಅವರ ಮನೆತನ ಸಿದ್ಧೇಶ್ವರ ಸ್ವಾಮೀಜಿಗಳು ಹಾಗೂ ಜಯದೇವ ಜಗದ್ಗುರುಗಳು ಸೇರಿದಂತೆ ಎಲ್ಲ ಮಠಾಧೀಶರೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ ಎಂದರು.

ಶಾಸಕ ಅಜಯಸಿಂಗ್, ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿದರು. ಸಾಹಿತಿ ಡಾ.ಮಲ್ಲಿಕಾರ್ಜುನ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಅತಿಹೆಚ್ಚು ಪಂಪಸೆಟ್ ಹೊಂದಿದ್ದ ಇಂಡಿ ಭಾಗಕ್ಕೆ ಅಂದಿನ ಸಿಎಂ ಆರ್.ಗುಂಡೂರಾವ್‌ ಅವರನ್ನು ಕರೆಸಿ ಬೆಳ್ಳಿ ಪಂಪಸೆಟ್ ಕೊಟ್ಟಿದ್ದರು. ಅವರ ಇಡಿ ಜೀವನ ಸಾರ್ಥಕ‌ ಜೀವನವಾಗಿ ಬದುಕಿದ್ದಾರೆ. ಓರ್ವ ವ್ಯಕ್ತಿ ಹೇಗೆ ಇದ್ದರು ಎಂಬುದು ಅವರ ಅಂತ್ಯಕ್ರಿಯೆ ಹಾಗೂ ಇಂತಹ ಕಾರ್ಯಕ್ರಮದಲ್ಲಿ ತಿಳಿಯುತ್ತದೆ. ಆ ಜನಮಣ್ಣನೆಯನ್ನು ಆರ್.ಆರ್.ಕಲ್ಲೂರ ರವರು ಗಳಿಸಿದ್ದಾರೆ. ಸಚ್ಚಾರಿತ್ರ್ಯ, ಅಚಲತೆ, ಮೌಲಾಧಾರಿತವಾಗಿ, ಸಮಾಜಕ್ಕಾಗಿ ಬದುಕಿ ರಾಜಕಾರಣ ಮಾಡಿದ ಮೇರು ವ್ಯಕ್ತಿತ್ವದ ಕಲ್ಲೂರ ರವರು. ಜನರ ಮನಸ್ಸಿನಲ್ಲಿ ಶಾಶ್ವತವಾಗಿರುವ ಅವರ ಬದುಕು, ಸಾಧನೆ, ಇತಿಹಾಸ ನಮ್ಮೆಲ್ಲರಿಗೂ ಆದರ್ಶಮಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಾಯೋಗಿವೇಮನ ಮಠದ ವೇಮನಾನಂದ ಸ್ವಾಮೀಜಿ, ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ ಹಾಗೂ ಮುಕ್ತಿ ಮಂದಿರದ ಮಾತೋಶ್ರೀ ಸುಗಲಾದೇವಿ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು. ಸಂಸದ ಗೋವಿಂದ ಕಾರಜೋಳ, ಶಾಸಕರಾದ ವಿಠ್ಠಲ ಕಟಕದೊಂಡ, ಸುನೀಲಗೌಡ ಪಾಟೀಲ, ಅಶೋಕ ಮನಗೂಳಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪುರ, ಜಿ.ಎಸ್.ನ್ಯಾಮಗೌಡರ, ಆನಂದ ನ್ಯಾಮಗೊಂಡ, ಮುಖಂಡರಾದ ಮಲ್ಲಿಕಾರ್ಜುನ ಲೋಣಿ, ಉಮೇಶ ಕಾರಜೋಳ, ಕಲ್ಲೂರ ಕುಟುಂಬಸ್ಥರಾದ ಡಾ.ಮಲ್ಲಿಕಾರ್ಜುನ ಕಲ್ಲೂರ, ಡಾ.ಸುನೀಲ ಕಲ್ಲೂರ, ರವಿ ಕಲ್ಲೂರ, ಸಚಿನ ಕಲ್ಲೂರ, ಬಿಜಾಪುರ ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಸೌಮ್ಯ ಕಲ್ಲೂರ ಸೇರಿದಂತೆ ಅಪಾರ ಬಂಧು ಬಳಗ ಹಾಗೂ ಸಾವಿರಾರು ಅಭಿಮಾನಿಗಳು ಇದ್ದರು.ಜಾತಿ ಧರ್ಮಗಳನ್ನು ಮೀರಿ ಎಲ್ಲರ ಜೊತೆಗೆ ಬಾಂಧವ್ಯ ಹೊಂದಿದ್ದ ಅವರು, ಆರ್.ಗುಂಡೂರಾವ್ ರವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬಿಲ್ ವಿನಾಯ್ತಿ ಮಾಡಿದ್ದರಿಂದಾಗಿ 9 ಕೆ.ಜಿ. ತೂಕದ ಬೆಳ್ಳಿ ಪಂಪ್‌ಸೆಟ್‌ನ್ನು ಕಾಣಿಕೆ ನೀಡಿ ಸತ್ಕರಿಸಿದ್ದರು. ಈ ಕಾರಣಕ್ಕಾಗಿ ಜನರು ಇಂದಿಗೂ ಇವರನ್ನು ಪಂಪ್‌ಸೆಟ್ ಕಲ್ಲೂರ ಎಂದೇ ಕರೆಯುತ್ತಾರೆ. ತಮಗೆ ಸಿಕ್ಕಂತಹ ಸಂಪತ್ತನ್ನು ಸಾರ್ವಜನಿಕರ ಸೇವೆಗೆ ಬಳಸಿದ ಮಹನಿಯರಲ್ಲೊಬ್ಬರಾದ ಕಲ್ಲೂರರ ಕುಟುಂಬಸ್ಥರು ಇಂದು ಕಲ್ಲೂರ ದಂಪತಿಗಳ 5ನೇ ವರ್ಷದ ಪುಣ್ಯಸ್ಮರಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಿದ್ದಾರೆ. ಕಲ್ಲೂರ ಅವರ ನೆನಪು ಎಲ್ಲರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ.

-ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ವೀರಸಿಂಹಾಸನ ಸಂಸ್ಥಾನಮಠ, ಸುತ್ತೂರು ದಂಪತಿಗಳಿಬ್ಬರೂ ಲಿಂಗ ಧರಿಸುತ್ತಿದ್ದು, ಅವರು ಲಿಂಗಪೂಜೆ ಮಾಡದೆ ನೀರು ಅಥವಾ ಪ್ರಸಾದ ಸೇವಿಸುತ್ತಿರಲಿಲ್ಲ. ಹಣೆಮೇಲೆ ವಿಭೂತಿ ಹಚ್ಚುವುದು ಹಾಗೂ ಲಿಂಗಪೂಜೆ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಎಲ್ಲರೂ ತಮ್ಮ ಮಕ್ಕಳಿಗೆ ಲಿಂಗ ಕಟ್ಟಿ, ಲಿಂಗದೃಷ್ಠಿಯೋಗ ಪೂಜೆ ಮಾಡಬೇಕು. ಅದರಿಂದ ಮಕ್ಕಳ ವ್ಯಕ್ತಿತ್ವ ವಿಕಸನವಾಗಿ ಅವರು ಸಂಸ್ಕಾರವಂತರಾಗುತ್ತಾರೆ ಎಂದರು. ಎಲ್ಲರೂ ತಮ್ಮ ತಮ್ಮ‌ಮಕ್ಕಳಿಗೆ ಲಿಂಗ ದೀಕ್ಷೆ ಕೊಡಿಸಬೇಕು

-ಗುರುಬಸವ ಮಹಾಂತ ಸ್ವಾಮೀಜಿ, ವಿಜಯಮಹಾಂತ ಮಠ, ಇಳಕಲ್