ರಬಕವಿ-ಬನಹಟ್ಟಿ : ಒಟ್ಟು 6 ಟಿಎಂಸಿ ಸಾಮರ್ಥ್ಯ ಹೊಂದಿರುವ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ ಗುರುವಾರ ಡೆಡ್ ಸ್ಟೋರೇಜ್ (ಬಳಸಲು ಬಾರದ ಕನಿಷ್ಠ ನೀರಿನ ಮಟ್ಟ) ತಲುಪಿದೆ.

ಶಿವಾನಂದ ಪಿ. ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಒಟ್ಟು 6 ಟಿಎಂಸಿ ಸಾಮರ್ಥ್ಯ ಹೊಂದಿರುವ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್ ಗುರುವಾರ ಡೆಡ್ ಸ್ಟೋರೇಜ್ (ಬಳಸಲು ಬಾರದ ಕನಿಷ್ಠ ನೀರಿನ ಮಟ್ಟ) ತಲುಪಿದೆ. ಬ್ಯಾರೇಜ್‌ನ ೦.೮ ಟಿಎಂಸಿ ಪ್ರಮಾಣದಲ್ಲಿ ಡೆಡ್ ಸ್ಟೋರೇಜ್ ಇದ್ದು, ಹಿನ್ನೀರಲ್ಲಿ ಈಗಾಗಲೇ ಇದಕ್ಕೂ ಆಳವಾಗಿ ನೀರಿನ ಇಳಿಕೆ ಕಂಡಿದೆ. ನೀರಿನ ಅಭಾವ ಹಿಪ್ಪರಗಿ ಬ್ಯಾರೇಜ್‌ನ ಮುಂಭಾಗದಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಬರುವ ದಿನಗಳಲ್ಲಿ ಹಿನ್ನೀರು ಪ್ರದೇಶಗಳಲ್ಲೂ ನೀರಿನ ಭವಣೆ ಹೆಚ್ಚುವ ಭೀತಿ ಆವರಿಸಿದೆ.

ಹಿನ್ನೀರಿನ ಪ್ರದೇಶಗಳಾದ ರಬಕವಿ-ಬನಹಟ್ಟಿ, ತೇರದಾಳ, ಅಥಣಿ ಸೇರಿ ನೂರಾರು ಗ್ರಾಮಗಳಿಗೆ ಇನ್ನಷ್ಟು ದಿನಗಳಲ್ಲಿ ಮಳೆ ಅಥವಾ ನದಿಯೊಳಗೆ ನೀರು ಹರಿದು ಬರದಿದ್ದಲ್ಲಿ ೧೦ ದಿನಗಳೊಳಗಾಗಿ ನೀರು ಸಂಪೂರ್ಣ ಖಾಲಿಯಾಗುವುದರ ಜೊತೆಗೆ ನೀರಿನ ಹಾಹಾಕಾರ ಹೆಚ್ಚಾಗಲಿದೆಯೆಂಬುದು ತಜ್ಞರ ಅಭಿಪ್ರಾಯ.

ರೈತರಿಗಿಲ್ಲ ವಿದ್ಯುತ್ : ವಾರದ ಎರಡು ದಿನ ಗುರುವಾರ ಹಾಗೂ ಭಾನುವಾರ ಕೃಷಿ ಭೂಮಿಗಳಿಗೆ ನದಿಯೊಳಗಿನ ನೀರಿನ ಬಳಕೆ ಮಾಡದೆ ಕೇವಲ ಕುಡಿಯುವ ನೀರಿಗಾಗಿ ಮಾತ್ರ ಬಳಸಬೇಕೆಂಬ ಉದ್ದೇಶದಿಂದ ಇಡೀ ಬೇಸಿಗೆ ದಿನಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿದೆ. ಇದರಿಂದಾಗಿ ತಾವು ಬೆಳೆದ ಬೆಳೆಗಳು ನೀರಿಲ್ಲದೇ ಒಣಗಿ ಹಾಳಾಗುತ್ತಿರುವುದನ್ನು ರೈತರು ಅಸಹಾಯಕರಾಗಿ ನೋಡಬೇಕಿದೆ.

ಮುಂದಿನ ದಿನಗಳಲ್ಲಿ ಪ್ರತಿ ದಿನವೂ ಕೇವಲ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಾತ್ರ ಹಿಪ್ಪರಗಿ ಬ್ಯಾರೇಜ್ ಬಳಕೆಗೂ ನಿಲುಕದೇ ಜನ-ಜಾನುವಾರು ಕುಡಿಯಲೂ ನೀರಿಗಾಗಿ ಪರದಾಡುವ ಭಯಾನಕ ದಿನಗಳು ಬರಲಿವೆಯೆಂಬ ವಾಸ್ತವಿಕ ಭೀತಿ ಜನತೆಯನ್ನು ಕಾಡುತ್ತಿದೆ.

ಕೂಡಲೇ ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಕೃಷ್ಣಾ ಪ್ರದೇಶ ವ್ಯಾಪ್ತಿಯ ಎಲ್ಲಾ ಜನಪ್ರತಿನಿಧಿಗಳು ಸರ್ಕಾರಕ್ಕೆ ಆಗ್ರಹಿಸಿ ಪಾರದರ್ಶಕವಾದ ಬೇಡಿಕೆ ಸಲ್ಲಿಸುವ ಮೂಲಕ ಈ ಭಾಗದ ಜನತೆಗೆ ಸಹಕಾರಿಯಾಗಬೇಕಿದೆ.ಬೇಸಿಗೆ ಬವಣೆ ತಪ್ಪಿಸಲು ಹಿಂದಿನ ಸರ್ಕಾರಗಳು ನೀರು ಹರಿಸಲು ಮಹಾ ಸರ್ಕಾರಕ್ಕೆ ಟಿಎಂಸಿ ಲೆಕ್ಕದಲ್ಲಿ ಹಣ ನೀಡಿ ನದಿಗೆ ನೀರು ಹರಿಸುತ್ತಿದ್ದವು. ಸದ್ಯದ ದಿವಾಳಿ ಸರ್ಕಾರ ಹಣ ಭರಣೆ ಮಾಡದಿರುವ ಕಾರಣ ಬೇಸಿಗೆ ಕಾಲದಲ್ಲಿ ಮಹಾನೀರು ಬಾರದಂತಾಗಿದೆ. ಬೆಳಗಾವಿ, ಬಾಗಲಕೋಟೆ ಸೇರಿಅವಳಿ ನಗರಗಳಲ್ಲೂ ನೀರಿನ ಹಾಹಾಕಾರ ಹೆಚ್ಚುವುದು ಖಚಿತವಾಗಿದ್ದು, ಸರ್ಕಾರದ ಮುಂಜಾಗ್ರತೆ ಕೊರತೆಯೇ ಈ ಸಮಸ್ಯೆಗೆ ಕಾರಣವಾಗಿದೆ.

- ಶ್ರೀಶೈಲ ಬೀಳಗಿ ಅಧ್ಯಕ್ಷರು ನಗರ ಬಿಜೆಪಿ ಘಟಕ ರಬಕವಿ-ಬನಹಟ್ಟಿ.

ಹಿಪ್ಪರಗಿ ಜಲಾಶಯದ ಗೇಟ್ ಮುರಿದಾಗಲೇ ತಿಂಗಳು ಕಾಲ ಹರಿದುಹೋದ ಸಂಗ್ರಹಿತ ನೀರಿನ ಭರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಬೇಕಿತ್ತು. ಜಲಾಶಯದ ನೀರು ಡೆಡ್ ಸ್ಟೋರೇಜ್‌ಗಿಂತ ಕೆಳಗಿದ್ದರೂ ಸರ್ಕಾರ ತನ್ನ ಜವಾಬ್ದಾರಿ ಮರೆತಿರುವುದು ಜನ-ಜಾನುವಾರುಗಳಿಗೆ ನೀರಿನ ಸಂಕಷ್ಟ ತರುವುದು ಖಚಿತ ಎಂಬಂತಾಗಿದೆ. ಅವಳಿ ನಗರದ ಜನತೆಗೆ ನೀರು ತಲುಪಿಸಲು ಶ್ರಮ ಪಡುವುದು ತಪ್ಪದಂತಾಗಿದೆ.

-ಯಲ್ಲಪ್ಪ ಕಟಗಿ ಮಾಜಿ ಸದಸ್ಯರು, ನಗರಸಭೆ, ರಬಕವಿ-ಬನಹಟ್ಟಿ