ಮಾಳ ಪೇರಡ್ಕ ಮಲೆಕುಡಿಯ ಸಮುದಾಯ ಭವನದಲ್ಲಿ ಜಿಲ್ಲಾ ಮಲೆಕುಡಿಯ ಸಂಘದ ಉಪಾಧ್ಯಕ್ಷೆ ಶಾರದಾ ಅವರ ಅಧ್ಯಕ್ಷತೆಯಲ್ಲಿ ಉದ್ಯೋಗ ಆಧರಿತ ಶಿಕ್ಷಣ ಕಾರ್ಯಾಗಾರ ಬುಧವಾರ ನಡೆಯಿತು.
ಕಾರ್ಕಳ: ಮಾಳ ಪೇರಡ್ಕ ಮಲೆಕುಡಿಯ ಸಮುದಾಯ ಭವನದಲ್ಲಿ ಜಿಲ್ಲಾ ಮಲೆಕುಡಿಯ ಸಂಘದ ಉಪಾಧ್ಯಕ್ಷೆ ಶಾರದಾ ಅವರ ಅಧ್ಯಕ್ಷತೆಯಲ್ಲಿ ಉದ್ಯೋಗ ಆಧರಿತ ಶಿಕ್ಷಣ ಕಾರ್ಯಾಗಾರ ಬುಧವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿ. ಸುನಿಲ್ ಕುಮಾರ್, ಇಂತಹ ಕಾರ್ಯಾಗಾರಗಳನ್ನು ವರ್ಷಂಪ್ರತಿ ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಜಾಗೃತಿ ಹೆಚ್ಚುವುದರೊಂದಿಗೆ ಸರ್ಕಾರಿ ಉದ್ಯೋಗ, ಖಾಸಗಿ ಕ್ಷೇತ್ರ ಹಾಗೂ ಸ್ವಉದ್ಯೋಗದತ್ತ ಮುನ್ನಡೆಯಲು ಅಗತ್ಯವಾದ ತರಬೇತಿಗಳು ಪೂರಕವಾಗುತ್ತವೆ ಎಂದು ಹೇಳಿದರು. ಪ್ರಸ್ತುತ ಕಾಲಘಟ್ಟದಲ್ಲಿ ಹಿಂದುಳಿದ ಸಮುದಾಯಗಳಿಗೆ ಇಂತಹ ಕಾರ್ಯಕ್ರಮಗಳ ಅಗತ್ಯತೆ ಹೆಚ್ಚಿದ್ದು, ಶಿಕ್ಷಣವೆಂದರೆ ಕೇವಲ ಓದು-ಬರಹ ಮಾತ್ರವಲ್ಲ, ಅದರೊಂದಿಗೆ ಸಂಸ್ಕೃತಿ ಮತ್ತು ಸಂಸ್ಕಾರವೂ ಇರಬೇಕು ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು ಮಾತನಾಡಿ, “ಶಿಕ್ಷಣ, ಸಂಘಟನೆ, ಜಾಗೃತಿ” ಎಂಬ ಧ್ಯೇಯದೊಂದಿಗೆ ಆರಂಭವಾದ ಮಲೆಕುಡಿಯ ಸಂಘಟನೆ ಸಮುದಾಯದ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಸಮಿತಿಯನ್ನು ರಚಿಸಿದೆ. ಯಾರೂ ಶಿಕ್ಷಣದಿಂದ ವಂಚಿತರಾಗದೆ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಸಮಿತಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಸಮಿತಿಯೊಂದಿಗೆ ಕೈಜೋಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್, ಕಲಾ ವೈಭವ ಸಂಯೋಜಕ ಪ್ರದೀಪ್ ಅಂಡಾರು, ತರಬೇತುದಾರರಾದ ಡಾ. ಸೋಮಶೇಖರ್ ಎಂ. ಹಾಗೂ ನೋಣಯ್ಯ ಗೌಡ ರೆಂಜಾಳ ಉಪಸ್ಥಿತರಿದ್ದರು.ಪುಷ್ಪ ಶ್ರೀಧರ್ ಗೌಡ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಪಣಪಿಲ ಪ್ರಾರ್ಥಿಸಿದರು. ನೋಣಯ್ಯ ರೆಂಜಾಳ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಕ್ಷಣಿಕ ಸಮಿತಿ ಸಂಯೋಜಕ ನವೀನ್ ತೆಳ್ಳಾರು ವಂದಿಸಿದರು.