ವಿಶೇಷಚೇತನರು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆತ್ಮವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು ಸಮಾಜ ಹಾಗೂ ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನಹರಿಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ ಹೇಳಿದರು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ವಿಶೇಷಚೇತನರು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆತ್ಮವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು ಸಮಾಜ ಹಾಗೂ ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಮನಹರಿಸಬೇಕೆಂದು ಕ್ಷೇತ್ರ ಸಮನ್ವಯಾಧಿಕಾರಿ ಸುನೀಲ ನಾಯಕ ಹೇಳಿದರು.ತಾಲೂಕಿನ ಇವಣಗಿ ಗ್ರಾಮದ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಬುಧವಾರ ನಡೆದ ವಿಶ್ವ ವಿಶೇಷಚೇತನ ಮಕ್ಕಳ ದಿನಾಚರಣೆ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷಚೇತನರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಅವರು ಎಲ್ಲರಂತೆ ಸ್ವಾವಲಂಬಿ ಜೀವನ ಸಾಗಿಸಲು ನೆರವಾಗಬೇಕು. ವಿಶೇಷಚೇತನ ಮಕ್ಕಳಿಗೆ ವಿಶೇಷವಾಗಿ ಗಮನ ಹರಿಸಿ ಅವರಿಗೆ ಶಿಕ್ಷಣ ನೀಡಿದರೆ ಖಂಡಿತ ಅವರು ಎಲ್ಲ ಮಕ್ಕಳಂತೆ ಸಾಧನೆ ಮಾಡುವುದರಲ್ಲಿ ಸಂದೇಹವಿಲ್ಲ ಎಂದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಂ.ವ್ಹಿ.ಗಬ್ಬೂರ ಮಾತನಾಡಿ, ವಿಶೇಷಚೇತನ ಮಕ್ಕಳ ಸಬಲೀಕರಣಕ್ಕಾಗಿ ಅನೇಕ ಶಾಲಾ- ಕಾಲೇಜು ಹಾಗೂ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಕಾಲದಲ್ಲಿ ವಿಶೇಷಚೇತನರಿಗೆ ವಿದ್ಯಾಭ್ಯಾಸದ ಅವಕಾಶಗಳ ಜೊತೆಗೆ ಕೌಶಲಾಭಿವೃದ್ಧಿಗಳ ಕಲಿಕೆಯು ಅವರ ಬದುಕಿನಲ್ಲಿ ಸಾಧನೆ ಮಾಡುವಂತಹ ಭರವಸೆ ಮೂಡಿಸುತ್ತಿದೆ ಎಂದರು.ಬಿಐಇಆರ್‌ಟಿ ಐ.ಎಂ.ಇಂಡಿ ಮಾತನಾಡಿ, ವಿಶೇಷಚೇತನ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹ ನೀಡುವುದರಿಂದ ಅವರ ದೌರ್ಬಲ್ಯಗಳ ಹೊರತಾಗಿಯೂ ಅದಮ್ಯ ಶಕ್ತಿ ಅವರಲ್ಲಿದೆ ಎಂಬುದನ್ನು ನಿರೂಪಿಸಲು ಸಾಧ್ಯ. ವಿಶೇಷಚೇತನರ ಏಳಿಗೆಗೆ ಕುಟುಂಬದ ಸದಸ್ಯರು ಮಾತ್ರವಲ್ಲದೇ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಕಾನೂನಡಿ ಅವರಿಗೆ ಅನೇಕ ಹಕ್ಕು ನೀಡಲಾಗಿದೆ. ಅವರ ಶ್ರೇಯಸ್ಸು ಹಾಗೂ ಮಾನವ ಹಕ್ಕುಗಳಿಗೆ ಚ್ಯುತಿ ತರದಂತೆ ಅವರ ಅಭಿವೃದ್ಧಿಯಲ್ಲಿ ಸಹಕಾರ ನೀಡಬೇಕೆಂದರು.
ಬಿಆರ್‌ಪಿ ಭಾರತಿ ಪಾಟೀಲ,ಸಿಆರ್ಸಿ ಎಸ್.ಬಿ.ದಳವಾಯಿ ಹಾಗೂ ಶಾಲೆ ಎಲ್ಲ ಶಿಕ್ಷಕರು ಇದ್ದರು. ಎಸ್.ಸಿದ್ದಪ್ಪ ಸ್ವಾಗತಿಸಿ, ಎಸ್.ಎಸ್.ಇಂಗಳೇಶ್ವರ ನಿರೂಪಿಸಿ, ಸವಿತಾ ಚಿತ್ತರಗಿ ವಂದಿಸಿದರು.