ಲವ್‌ ಜಿಹಾದ್‌ ತಡೆಗೆ ರಾಜ್ಯದ ಆರು ಕಡೆ ಸಹಾಯವಾಣಿ ಕೇಂದ್ರ ಆರಂಭ

| Published : May 30 2024, 12:55 AM IST

ಸಾರಾಂಶ

ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲಬುರಗಿ ಹಾಗೂ ದಾವಣಗೆರೆ ಸೇರಿದಂತೆ 6 ಕಡೆ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಸಹಾಯವಾಣಿಗೆ ಕರೆ ಮಾಡಿದವರ ಹೆಸರು ಕೂಡ ಗೌಪ್ಯವಾಗಿ ಇರಿಸಲಾಗುವುದು.

ಹುಬ್ಬಳ್ಳಿ:

ಲವ್‌ ಜಿಹಾದ್‌ನಲ್ಲಿ ಸಿಲುಕಿರುವ, ಸಿಲುಕುತ್ತಿರುವ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಗಾಗಿ ಶ್ರೀರಾಮಸೇನೆ 9090443444 ಸಂಖ್ಯೆಯ ಸಹಾಯವಾಣಿ ಕೇಂದ್ರ ಆರಂಭಿಸಿದೆ. ಇದು ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದು, ಕಾನೂನು ಸಲಹೆ ನೀಡಲಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಸಹಾಯವಾಣಿ ಕೇಂದ್ರಕ್ಕೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಚಾಲನೆ ನೀಡಿದರು.

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುತಾಲಿಕ, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ, ಕಲಬುರಗಿ ಹಾಗೂ ದಾವಣಗೆರೆ ಸೇರಿದಂತೆ 6 ಕಡೆ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಸಹಾಯವಾಣಿಗೆ ಕರೆ ಮಾಡಿದವರ ಹೆಸರು ಕೂಡ ಗೌಪ್ಯವಾಗಿ ಇರಿಸಲಾಗುವುದು ಎಂದರು.

ಲವ್ ಜಿಹಾದ್ ಜಾಲದಿಂದ ಯುವತಿಯರನ್ನು ಹೊರತರಲು ಈ ಪ್ರಯತ್ನ ಮಾಡಲಾಗಿದೆ. ಯಾರು ಕರೆ ಮಾಡುತ್ತಾರೋ ಅಂತಹವರಿಗೆ ಆಯಾ ಜಿಲ್ಲೆಗಳಲ್ಲೇ ವಕೀಲರು, ಮಹಿಳೆಯರು, ಕೌನ್ಸಿಲಿಂಗ್ ತಜ್ಞರು ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳಿರುವ ತಂಡ ರಚಿಸಿದ್ದು ಅವರು ಕಾನೂನು ಬದ್ಧವಾಗಿ, ಸುವ್ಯವಸ್ಥಿತವಾಗಿ ಸಹಾಯ ಮಾಡಲಿದ್ದಾರೆ ಎಂದರು.

ಇದು ನೈತಿಕ ಪೊಲೀಸಗಿರಿ:

ಇದು ನೈತಿಕ ಪೊಲೀಸ್‌ ಗಿರಿ ಆಗಲಿಲ್ಲವೇ ಎಂಬ ಪ್ರಶ್ನೆಗೆ, ಹೌದು ಇದು ನೈತಿಕ ಪೊಲೀಸ್‌ಗಿರಿಯೇ. ಈಗಿರುವ ಪೊಲೀಸ್‌ ಇಲಾಖೆ, ಸರ್ಕಾರಕ್ಕೆ ಮಹಿಳೆಯರ ಮಾನ ರಕ್ಷಣೆ ಮಾಡಲು ಆಗುತ್ತಿಲ್ಲ. ಅನೇಕರ ಜತೆಗೆ ಚರ್ಚಿಸಿಯೇ ಸಹಾಯವಾಣಿ ಕೇಂದ್ರ ಉದ್ಘಾಟಿಸಲಾಗಿದೆ ಎಂದರು.

ಹಾಡುಹಗಲೇ ನೇಹಾ ಕೊಲೆಯಾಗುತ್ತದೆ ಎಂದರೆ ಅವರಿಗೆ ಎಷ್ಟು ಟ್ರೇನಿಂಗ್ ‌ಕೊಟ್ಟಿರಬೇಕು? ಎಂದು ಪ್ರಶ್ನಿಸಿದ ಮುತಾಲಿಕ್‌, ಮುಸ್ಲಿಮರು ತಮ್ಮ ಸಮಾಜದ ಜನಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಲವ್‌ ಜಿಹಾದ್ ಮಾಡುತ್ತಾರೆ ಎಂದರು.

ಪ್ರೀತಿ-ಪ್ರೇಮದ ಹೆಸರಲ್ಲಿ ಹಿಂದೂ ಹೆಣ್ಣು ಮಕ್ಕಳ ಮತಾಂತರ, ಅತ್ಯಾಚಾರ ನಡೆಯುತ್ತಿದೆ. ಇಸ್ಲಾಂನ ಕ್ರೌರ್ಯದ ದೊಡ್ಡ ಇತಿಹಾಸವಿದೆ. ಅದು ನೇಹಾ ಹಿರೇಮಠ ವರೆಗೂ ತಲುಪಿದೆ. ಹಿಂದೂ ಹೆಣ್ಣು ಮಕ್ಕಳೆ ಸಾಯಬೇಡಿ, ನೀವು ಸಾಯಿಸುವ ಯೋಚನೆ ಮಾಡಬೇಕು. ನಾವು ನಿಮಗೆ ಟ್ರೇನಿಂಗ್‌ ಕೊಡುತ್ತೇವೆ. ಕ್ರೂರತನಕ್ಕೆ ಅಲ್ಲೇ ಉತ್ತರ ಕೊಡಬೇಕು. ಯಾವ ಹಿಂದೂ ಹೆಣ್ಣು ಮಕ್ಕಳೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದ ಅವರು, ಕಳೆದ 3 ವರ್ಷದಲ್ಲಿ 40 ಸಾವಿರ ಮಹಿಳೆಯರು ನಾಪತ್ತೆಯಾಗಿದ್ದಾರೆ. 45 ಸಾವಿರ ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿದ್ದಾರೆ. ಈ ಎಲ್ಲ ಅಂಕಿ-ಸಂಖ್ಯೆಯಿಂದ ಭಯವಾಗುತ್ತದೆ. ಕಾನೂನಿನ ಭಯವೇ ಇವರಿಗೆ ಇಲ್ಲವೇ? ರಾಜಕಾರಣಿಗಳು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಕೋರ್ಟ್‌, ಪೊಲೀಸ್‌ ರಾಜಕಾರಣಿಗಳು ಎಲ್ಲರ ಮೇಲೂ ಜವಾಬ್ದಾರಿ ಇದೆ ಎಂದರು.

ನಡವಳಿಕೆ ಗಮನಿಸಿ:

ಪಾಲಕರು ತಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಡಬೇಕು. ವಾರಕ್ಕೊಮ್ಮೆಯಾದರೂ ಕಾಲೇಜ್‌ಗಳಿಗೆ ಹೋಗಿ ಹೆಣ್ಣು ಮಕ್ಕಳ ನಡವಳಿಕೆ ಗಮನಿಸುತ್ತಿರಬೇಕು ಎಂದ ಮುತಾಲಿಕ್‌, ಹೆಣ್ಣು ಮಕ್ಕಳು ನೈಜ ಪರಿಸ್ಥಿತಿ ಅರಿತುಕೊಳ್ಳಬೇಕು. ಮುಸ್ಲಿಂ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಗೌರವವೇ ಇಲ್ಲ. ನೀವು ಆ ಧರ್ಮಕ್ಕೆ ಹೋದರೆ ಬುರ್ಖಾ ಹಾಕಿಕೊಂಡು ಓಡಾಡಬೇಕಾಗುತ್ತದೆ. ಅಲ್ಲಿ ಸ್ವತಂತ್ರತೆ ಎನ್ನುವುದೇ ಇಲ್ಲ. ಈ ಬಗ್ಗೆ ಜಾಗೃತರಾಗಬೇಕು. ಹಾಗಂತ ಪ್ರೀತಿ-ಪ್ರೇಮ ಮಾಡಬಾರದು ಎಂದು ಹೇಳುವುದಿಲ್ಲ. ಆದರೆ ಯಾರ ಜತೆಗೆ ಮಾಡುತ್ತಿದ್ದೇವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಅಲ್ಲಿ ನಿಮಗೆ ಎಷ್ಟು ಬೆಲೆ ಇದೆ ಎಂಬುದನ್ನು ಮನಗಾಣಬೇಕು ಎಂದರು.

ಮುಸ್ಲಿಮರಿಗೆ ಎಚ್ಚರಿಕೆ:

ಹಿಂದೂ ಹುಡುಗಿಯರನ್ನು ಕೆಣಕಿದರೆ, ಮುಟ್ಟಿದರೆ ನಾವು ಸುಮ್ಮನಿರುವುದಿಲ್ಲ. ಕೋರ್ಟ್‌ ಇಲ್ಲ. ಪೊಲೀಸ್‌ ಕೂಡ ಇಲ್ಲ. ನಾವೇ ಅಲ್ಲೇ ಉತ್ತರ ಕೊಡಬೇಕಾಗುತ್ತದೆ ಎಂದು ಮುಸ್ಲಿಂ ಸಮುದಾಯಕ್ಕೆ ಎಚ್ಚರಿಕೆ ಕೊಟ್ಟರು. ಅತ್ಯಾಚಾರ, ಕೊಲೆಗಳಂತಹ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದ ಅವರು, ಮುಸ್ಲಿಂ ಸಮಾಜ ಈ ಮನಸ್ಥಿತಿಗೆ ತಲುಪಲು ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ತರಾಟೆಗೆ ತೆಗೆದುಕೊಂಡರು. ಹಿಂದೆ ಸುಪ್ರೀಂ ಕೋರ್ಟ್‌ ಆದೇಶವನ್ನೇ ದಿಕ್ಕರಿಸಿದವರು ಮುಸ್ಲಿಂ ಸಮುದಾಯ. ಅದಕ್ಕೆ ಪ್ರೋತ್ಸಾಹ ನೀಡಿದವರು ಕಾಂಗ್ರೆಸ್‌ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಸತ್ಯ ಪ್ರಮೋದ ಸ್ವಾಮೀಜಿ, ಅಣ್ಣಪ್ಪ ದಿವಟಗಿ, ಮಂಜು ಕಾಟ್ಕರ್, ಸುರೇಶ ಅಂಗಡಿ, ನೇಹಾ ಹಿರೇಮಠ ಅವರ ಚಿಕ್ಕಪ್ಪ ಶಿವಕುಮಾರ ಹಿರೇಮಠ ಸೇರಿದಂತೆ ಅನೇಕರಿದ್ದರು.ಗಲ್ಲು ಶಿಕ್ಷೆ ನೀಡಿ:

ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಹಂತಕರನ್ನು ಗಲ್ಲಿಗೆ ಏರಿಸಬೇಕು. ಸಾಕ್ಷಿಯಿಲ್ಲ ಎಂದು ಹೊರಗಡೆ ಬಂದರೆ ನಾವು ಬಿಡುವುದಿಲ್ಲ. ಮೂರೇ ತಿಂಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು. ಇಂಥ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು ಎಂದು ಪ್ರಮೋದ ಮುತಾಲಿಕ ಆಗ್ರಹಿಸಿದರು.

ಪ್ರಜ್ವರ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ಅದೊಂದು ಭಯಾನಕ ಪ್ರಕರಣ. ಎಸ್‌ಐಟಿ ರಚನೆ ಆಗಿದೆ. ಪ್ರಜ್ವಲ್‌ ರೇವಣ್ಣ ಬರುತ್ತೇನೆ ಎಂದು ಹೇಳಿದ್ದಾರೆ. ರಾಜಕಾರಣಿಗಳ ಮಾತಿನಿಂದ ಪ್ರತಿನಿತ್ಯ ಮಹಿಳೆಯರ ಅತ್ಯಾಚಾರ ಆಗುತ್ತಿದೆ. ನಾವು ದೇಶ ಉಳಿಸಬೇಕಿದೆ ಎಂದರು.