ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ತಾಲೂಕಿನ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ಅತ್ಯಂತ ವೈಭವ ಮತ್ತು ಸಡಗರದಿಂದ ನೆರವೇರಿತು. ಹೇಮಾವತಿ ನದಿ ದಡದ ಸುಂದರ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಉತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ತಾಲೂಕಿನ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ಬ್ರಹ್ಮ ರಥೋತ್ಸವವು ಅತ್ಯಂತ ವೈಭವ ಮತ್ತು ಸಡಗರದಿಂದ ನೆರವೇರಿತು.

ಹೇಮಾವತಿ ನದಿ ದಡದ ಸುಂದರ ಕ್ಷೇತ್ರದಲ್ಲಿ ನಡೆದ ಧಾರ್ಮಿಕ ಉತ್ಸವಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಸ್ವಾಮಿ ಕೃಪೆಗೆ ಪಾತ್ರರಾದರು. ಹೇಮಗಿರಿ ಬೆಟ್ಟದ ಮೇಲಿನ ಶ್ರೀಕಲ್ಯಾಣ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ರಥಸಪ್ತಮಿ ಅಂಗವಾಗಿ ಧಾರ್ಮಿಕ ವಿಧಿ ವಿಧಾನಗಳು ಮುಂಜಾನೆಯಿಂದಲೇ ಆರಂಭಗೊಂಡವು.

ವೇದಘೋಷಗಳ ನಡುವೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಆರಂಭವಾದವು. ಸ್ವಾಮಿಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ ಹಾಗೂ ವಿಶೇಷ ಅಲಂಕಾರ ಮಾಡಲಾಗಿತ್ತು. ವೇದಘೋಷಗಳ ನಡುವೆ ಉತ್ಸವ ಮೂರ್ತಿಯನ್ನು ಬೆಟ್ಟದ ಮೇಲಿನ ದೇವಾಲಯದಿಂದ ಬೆಟ್ಟದ ಪಾದಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದ ಅನಂತರ ಅಲಂಕೃತ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಶಾಸಕ ಎಚ್.ಟಿ.ಮಂಜು, ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್, ತಹಸೀಲ್ದಾರ್ ಡಾ.ಎಸ್.ಯು. ಅಶೋಕ್ ಅವರಿಗೆ ಸಾಂಪ್ರದಾಯಿಕ ಸ್ವಾಗತ ನೀಡಿದ ವೈದಿಕರು ಶಾಲು ಹೊದಿಸಿ ರಥೋತ್ಸವಕ್ಕೆ ಚಾಲನೆ ನೀಡುವಂತೆ ಕೋರಿದರು.

ಕಲ್ಯಾಣ ವೆಂಟಕರಮಣ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಎಚ್.ಟಿ.ಮಂಜು ಮತ್ತಿತರ ಜನಪ್ರತಿನಿಧಿಗಳು ಭಕ್ತ ವೃಂದದ ಜೊತೆಗೂಡಿ ತೇರು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಕಲ್ಯಾಣ ವೆಂಕಟರಮಣಸ್ವಾಮಿಗೆ ಜಯಘೋಷ ಮಾಡುತ್ತಾ ಬೆಟ್ಟದ ಸುತ್ತ ತೇರು ಎಳೆದು ಭಕ್ತರು ಪುನೀತರಾದರು.

ರಥ ಸಾಗುವ ಹಾದಿಯಲ್ಲಿ ಭಕ್ತಾದಿಗಳು ಮತ್ತು ನವಜೋಡಿಗಳು ರಥದ ಮೇಲಿನ ಉತ್ಸವ ಮೂರ್ತಿಗೆ ಹಣ್ಣು-ಜವನ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು. ಜಾತ್ರಾ ಮಹೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮಾಂತರ ಪೊಲೀಸ್ ನಿರೀಕ್ಷಕ ಆನಂದೇಗೌಡ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಭಕ್ತರಿಗಾಗಿ ದಾಸೋಹ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ದೇವಸ್ಥಾನದ ಆಡಳಿತ ಮಂಡಳಿ ಮತ್ತು ವಿವಿಧ ಸಂಘ-ಸಂಸ್ಥೆಗಳು ಅಚ್ಚುಕಟ್ಟಾಗಿ ನಿರ್ವಹಿಸಿದ್ದವು. ಸ್ಥಳೀಯ ಜನಪ್ರತಿನಿಧಿಗಳು, ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಪ್ರಮುಖ ಗಣ್ಯರು ರಥೋತ್ಸವದಲ್ಲಿ ಭಾಗವಹಿಸಿ ಸ್ವಾಮಿ ದರ್ಶನ ಪಡೆದರು.

ರಥೋತ್ಸವದ ಅಂಗವಾಗಿ ನಡೆಯುವ ದನಗಳ ಜಾತ್ರೆಯ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಹೇಮಗಿರಿಯ ಜಾತ್ರೆ ಮಾಳದಲ್ಲಿ ಸಾವಿರಾರು ರಾಸುಗಳು ಆಗಮಿಸಿದ್ದವು. ದನಗಳ ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳಿಗೆ ಜಾತ್ರಾ ಸಮಿತಿಯಿಂದ ಪ್ರಶಸ್ತಿ ಮತ್ತು ಬಹುಮಾನ ವಿತರಣೆ ನಡೆಯಿತು.