ನಗರಸಭೆ ಉಪಾಧ್ಯಕ್ಷೆಯಾಗಿ ಹೇಮಾಲತಾ ಅವಿರೋಧ ಆಯ್ಕೆ

| Published : Apr 17 2025, 12:01 AM IST

ನಗರಸಭೆ ಉಪಾಧ್ಯಕ್ಷೆಯಾಗಿ ಹೇಮಾಲತಾ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ರೇವಣ್ಣ ಅವರ ನೇತೃತ್ವದಲ್ಲಿ ನಡೆದ ಸಭೆಯ ತೀರ್ಮಾನದಂತೆ ಹೇಮಲತಾ ಕಮಲ್ ಕುಮಾರ್ ಅವರನ್ನ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಅದರಂತೆ ಎಲ್ಲ ಸದಸ್ಯರ ಸಮ್ಮುಖದಲ್ಲಿ ಹೇಮಲತಾ ಅವರು ಎರಡು ಸೆಟ್ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಮಧ್ಯಾಹ್ನ ನಡೆದ ಚುನಾವಣೆಯಲ್ಲಿ ಐದನೇ ವಾರ್ಡಿನ ಜೆಡಿಎಸ್ ಬೆಂಬಲಿತ ಸದಸ್ಯೆ ಹೇಮಲತಾ ಕಮಲ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರಸಭೆಯ ಕುವೆಂಪು ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಹೇಮಲತಾ ಕಮಲ್ ಕುಮಾರ್ ಅವರು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಮಾರುತಿ ಅವರಿಗೆ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಸರಿಯಾಗಿ 2 ಗಂಟೆಗೆ ಅವಿರೋಧ ಎಂದು ಘೋಷಣೆ ಮಾಡಿದರು. ಇದಕ್ಕೂ ಮೊದಲು ಬೆಳಗ್ಗೆ ೧೧ ಗಂಟೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಎಲ್ಲಾ ಸದಸ್ಯರು ರೇವಣ್ಣ ಅವರ ನೇತೃತ್ವದಲ್ಲಿ ನಡೆದ ಸಭೆಯ ತೀರ್ಮಾನದಂತೆ ಹೇಮಲತಾ ಕಮಲ್ ಕುಮಾರ್ ಅವರನ್ನ ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಅದರಂತೆ ಎಲ್ಲ ಸದಸ್ಯರ ಸಮ್ಮುಖದಲ್ಲಿ ಹೇಮಲತಾ ಅವರು ಎರಡು ಸೆಟ್ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿ ಮಧ್ಯಾಹ್ನ ೧:೩೦ಗೆ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ನಂತರ ನಡೆದ ಚುನಾವಣೆಯಲ್ಲಿ ನಾಮಪತ್ರ ಹಿಂಪಡೆಯಲು ಅವಕಾಶ ಮಾಡಿಕೊಡಲಾಯಿತು. ನಾಮಪತ್ರ ವಾಪಸ್ ಪಡೆಯದ ಹಿನ್ನೆಲೆಯಲ್ಲಿ ನಂತರ ಅವಿರೋಧ ಎಂದು ಘೋಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ನಗರಸಭೆ ಆವರಣದಲ್ಲಿ ಪಟಾಕಿ ಸೇರಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ ನಗರಸಭೆ ಅಧ್ಯಕ್ಷ ಚಂದ್ರೇಗೌಡ, ಮಾಜಿ ಅಧ್ಯಕ್ಷ ಆರ್. ಮೋಹನ್, ಎಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಬಿದರಿಕೆರೆ ಜಯರಾಮ್ ಹಾಗೂ ಜೆಡಿಎಸ್ ಬಿಜೆಪಿ ಸದಸ್ಯರು ಹಾಜರಿದ್ದರು. ಉಪಾಧ್ಯಕ್ಷರಾಗಿ ಆಯ್ಕೆಯಾದ ಹೇಮಲತಾ ಕಮಲ್ ಕುಮಾರ್ ಅವರನ್ನ ಅಭಿನಂದಿಸಿ ಗೌರವಿಸಿದರು. ನಗರಸಭೆ ಸದಸ್ಯರು ಕೂಡ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಇದೇ ವೇಳೆ ನಗರಸಭೆ ನೂತನ ಉಪಾಧ್ಯಕ್ಷೆ ಹೇಮಾಲತ ಮಾಧ್ಯಮದೊಂದಿಗೆ ಮಾತನಾಡಿ, ನಾನು ಮೊದಲು ಜೆಡಿಎಸ್ ಮುಖಂಡರಾದ ದೇವೇಗೌಡರಿಗೆ, ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲು ಅವಕಾಶ ಮಾಡಿಕೊಟ್ಟ ರೇವಣ್ಣ ಮತ್ತು ಭವಾನಿ ರೇವಣ್ಣರವರಿಗೆ ಹಾಗೂ ಸೂರಜ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆಯ್ಕೆ ಆಗಲು ಸಹಕರಿಸಿದ ಬಿಜೆಪಿ ಮುಖಂಡರಾದ ಪ್ರೀತಂಗೌಡರಿಗೂ ಕೃತಜ್ಞತೆ ಸಲ್ಲಿಸಲಾಗುವುದು ಎಂದರು. ನಗರಸಭೆ ಸದಸ್ಯರಾದ ಎಲ್ಲಾ ಪಕ್ಷದ ಸದಸ್ಯರಿಗೂ ವಂದನೆಯನ್ನು ಅರ್ಪಿಸುತ್ತೇನೆ. ಮುಂದೆ ನಗರದ ಪ್ರಮುಖ ಸಮಸ್ಯೆಗಳಾದ ಸ್ವಚ್ಛತೆ, ನೀರಿನ ಸಮಸ್ಯೆ, ಯುಜಿಡಿ ಎಲ್ಲಾ ಬಗ್ಗೆ ಗಮನಹರಿಸಲಾಗುವುದು. ಎಲ್ಲರ ಸಹಕಾರದಲ್ಲಿ ಅಭಿವೃದ್ಧಿ ಕೆಲಸ ಮಾಡುವುದಾಗಿ ಹೇಳಿದರು.