ಹೇಮಂತ ನಿಂಬಾಳ್ಕರ್ ಕಾಂಗ್ರೆಸ್ ಕೈಗೊಂಬೆ: ಕಾಗೇರಿ

| Published : May 03 2024, 01:04 AM IST

ಸಾರಾಂಶ

ಕಾಂಗ್ರೆಸ್ ಹತಾಶ ಸ್ಥಿತಿಯಲ್ಲಿದೆ. ಬೇಜವಾಬ್ದಾರಿ ಮಾತುಗಳನ್ನಾಡುತ್ತಿದೆ. ಅಧಿಕೃತ ವಿರೊಧಿ ಪಕ್ಷವೇ ಆಗದಷ್ಟು ಪರಿಸ್ಥಿತಿಗೆ ತಲುಪುತ್ತದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಾಗ್ದಾಳಿ ನಡೆಸಿದರು.

ಕಾರವಾರ: ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳಕರ ಪತ್ನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಬೇಕು ಎನ್ನುವ ಪ್ರಯತ್ನದಲ್ಲಿದ್ದರು. ಹೀಗಾಗಿ ಅವರು ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊನ್ನಾವರದ ಪರೇಶ ಮೇಸ್ತಾ ಸಾವಿನ ಪ್ರಕರಣದ ವೇಳೆ ಹೇಮಂತ ಪಶ್ಚಿಮ ವಲಯದ ಐಜಿಯಾಗಿದ್ದರು. ಅದೇ ವೇಳೆ ಪತ್ನಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಬೇಕು ಎನ್ನುವ ಪ್ರಯತ್ನದಲ್ಲಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಕಾಂಗ್ರೆಸ್ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಐಜಿ ಕಾರಿಗೆ ಬೆಂಕಿ ಹಾಕಿದ್ದರೂ ಏನು ಮಾಡಲು ಅವರಿಗೆ ಆಗಿಲ್ಲ. ಈ ಲೋಕಸಭಾ ಚುನಾವಣೆಗೂ ಪೂರ್ವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾಗಿದ್ದ ಅವರನ್ನು ವರ್ಗಾವಣೆಗೊಳಿಸುವಂತೆ ಬಿಜೆಪಿ ಆಯೋಗಕ್ಕೆ ಮನವಿ ಮಾಡಿತ್ತು. ಇದರಿಂದ ಆ ಹುದ್ದೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೂ ತಮ್ಮ ಪ್ರಭಾವ ಬಳಸಿಕೊಂಡು ಮಾಧ್ಯಮದ ಮೇಲೆ ಒತ್ತಡ ಹೇರಿ ಪತ್ನಿ ಡಾ. ಅಂಜಲಿ ನಿಂಬಾಳ್ಕರ್‌ ಪರ ಕೆಲಸ ಮಾಡಲು ಹೇಳುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಹತಾಶ ಸ್ಥಿತಿಯಲ್ಲಿದೆ. ಬೇಜವಾಬ್ದಾರಿ ಮಾತುಗಳನ್ನಾಡುತ್ತಿದೆ. ಅಧಿಕೃತ ವಿರೊಧಿ ಪಕ್ಷವೇ ಆಗದಷ್ಟು ಪರಿಸ್ಥಿತಿಗೆ ತಲುಪುತ್ತದೆ. ಮನಸ್ಸಿಗೆ ಬಂದಂತೆ ಪ್ರಣಾಳಿಕೆ ನೀಡಿದ್ದಾರೆ. ಅಭಿವೃದ್ಧಿ ದೇಶವಾಗಿಸುವ ಅಜೆಂಡಾ ಇಲ್ಲ. ಹತಾಶ ಸ್ಥಿತಿಯಿಂದ ಚೊಂಬಿನ ಪ್ರದರ್ಶನ ಮಾಡಿಕೊಂಡು ಚುನಾವಣಾ ಎದುರಿಸುತ್ತಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಚೊಂಬಿನ ವಿಷಯ ಬೇಕಾ? ಕಾಂಗ್ರೆಸ್ ನಾಯಕರು ಬಿಜೆಪಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಕರ್ನಾಟಕ ಮತದಾರರ ಒಲವು ಬಿಜೆಪಿ ಪರವಿದೆ. ನಿಮ್ಮ ಪಕ್ಷದ ಉಳಿವಿಗೆ, ಬೆಳವಣಿಗೆ ಯೋಚಿಸಿ, ಅದನ್ನು ಬಿಟ್ಟು ಬಿಜೆಪಿ ಬಗ್ಗೆ ಮಾತನಾಡಬೇಡಿ. ದೇಶ ಮೊದಲು ಎನ್ನುವ ರಾಜಕಾರಣ ನಮ್ಮದಾಗಿದೆ. ಸೋನಿಯಾ, ರಾಹುಲ್ ಮೊದಲು ಎನ್ನುವ ರಾಜಕಾರಣ ನಿಮ್ಮದಾಗಿದೆ ಎಂದು ಲೇವಡಿ ಮಾಡಿದರು.

ಪರೇಶ ಮೇಸ್ತಾ ಪ್ರಕರಣದಲ್ಲಿ ಅಂದಿನ ಶಾಸಕಿ ರೂಪಾಲಿ ನಾಯ್ಕ, ಶಾಸಕ ದಿನಕರ ಶೆಟ್ಟಿ ಮೇಲೆ ಕೂಡಾ ಪ್ರಕರಣ ದಾಖಲಾಗಿತ್ತು. ನಾವು ಶಿರಸಿ ವಿಕಾಸಾಶ್ರಮ ಮೈದಾನದಲ್ಲಿ ಪ್ರತಿಭಟನೆ ಮಾಡಿದಾಗ ಸರ್ಕಾರಿ ಬಸ್‌ನಲ್ಲಿ ತುಂಬಿಕೊಂಡು ಹೋಗಿದ್ದಾರೆ. ಈಗ ಓಡಿಹೋದರು ಎಂದರೆ ಏನು ಹೇಳಬೇಕು ಎಂದು ಪ್ರಶ್ನಿಸಿದರು.

ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಪ್ರತಿ ಹಂತದಲ್ಲಿ ಪರೇಶ ಕುಟುಂಬದ ಜತೆಗಿದ್ದೇವೆ. ಹುಳಿ ಹಿಂಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಆ ಕುಟುಂಬದ ಕಷ್ಟ ಸುಖಕ್ಕೆ ಸ್ಪಂದಿಸಿದ್ದೇವೆ ಎಂದ ಅವರು, ೬೦ ವರ್ಷ ಆಡಳಿತ ನಡೆಸಿ ಅವರು ಮಾಡದ ಸಾಧನೆಯನ್ನು ನಮ್ಮ ಪಕ್ಷ 10 ವರ್ಷದಲ್ಲಿ ಮಾಡಿದೆ. ವಿಧಾಸಭಾಧ್ಯಕ್ಷನಾಗಿದ್ದಾಗ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅತಿಕ್ರಮಣ ಮಾಡಿಕೊಂಡು ವಾಸವಾಗಿದ್ದರೆ ಮನೆ ನಂಬರ್‌ ಇದ್ದರೆ ವಸತಿ ಯೋಜನೆಯಡಿ ಮನೆ ಕಲ್ಪಿಸಿದ್ದೇವೆ. ಅದಕ್ಕೂ ಮೊದಲು ಆರ್‌ಟಿಸಿ ಇದ್ದರೆ ಮಾತ್ರ ವಸತಿ ಯೋಜನೆಯಡಿ ಆಯ್ಕೆ ಮಾಡಲಾಗುತ್ತಿತ್ತು. ನಾವು ಮಾಡಿಸಿದ್ದೇವೆಂದು ಕಾಂಗ್ರೆಸ್ ಮುಖಂಡರಿಗೆ ಅಸಮಾಧಾನವಾಗಿದೆ ಎಂದರು.

ಪ್ರಜ್ವಲ್ ರೇವಣ ಪ್ರಕರಣದ ಬಗ್ಗೆ ಕೇಳಿದಾಗ, ಆ ಪ್ರಕರಣ ತನಿಖಾ ಹಂತದಲ್ಲಿದೆ. ಆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಮಾಜಿ ವಕ್ತಾರ ನಾಗರಾಜ ನಾಯಕ, ಮನೋಜ ಭಟ್, ಕಿಶನ್‌ ಕಾಂಬ್ಳೆ, ನಾಗೇಶ ಕುರ್ಡೇಕರ, ನಾಗರಾಜ ಜೋಶಿ, ಸುಭಾಸ ಗುನಗಿ, ಮನೋಜ ಬಾಂದೇಕರ ಇದ್ದರು.