ಮುಳಗುಂದ: ಹೇಮರಡ್ಡಿ ಮಲ್ಲಮ್ಮ ಅವರು ನಿಸ್ವಾರ್ಥ ಭಕ್ತಿ, ಸತ್ಯನಿಷ್ಠೆ ಮತ್ತು ಧೈರ್ಯದ ಪ್ರತೀಕವಾಗಿದ್ದಾರೆ. ಅವರ ಜೀವನ ಸಂದೇಶಗಳು ಸಮಾಜಕ್ಕೆ ಮಾರ್ಗದರ್ಶಕವಾಗಿದ್ದು, ಅವರ ಆದರ್ಶ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ತಿಳಿಸಿದರು.
ಪಟ್ಟಣದಲ್ಲಿ ಸೋಮವಾರ ಹೇಮರಡ್ಡಿ ಮಲ್ಲಮ್ಮ ಸೇವಾ ಸಂಘ, ಶರಣ ಸಾಹಿತ್ಯ ಪರಿಷತ್ ಹಾಗೂ ಮಹಿಳಾ ಕದಳಿ ವೇದಿಕೆ ಆಶ್ರಯದಲ್ಲಿ ನಡೆದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಹೇಮರಡ್ಡಿ ಮಲ್ಲಮ್ಮ ಅವರು ಶಿಸ್ತುಬದ್ಧ ನಡತೆಯೊಂದಿಗೆ ಭಕ್ತಿಯೇ ಆಚರಣೆಗೆ ಅಡ್ಡಿಪಡಿಸಲು ಅವರ ಗಂಡನ ಮನೆಯಲ್ಲಿ ಸಾಕಷ್ಟು ಕಿರುಕುಳ ನೀಡುತ್ತಾರೆ. ಆದರೆ ಮಲ್ಲಮ್ಮ ಅವರು ಅವುಗಳನ್ನು ಸಹಿಸಿಕೊಳ್ಳುವ ಗುಣ ಆ ತಾಯಿಯಲ್ಲಿತ್ತು. ಮಹಿಳೆಯರಿಗೆ ಆದರ್ಶವಾದ ಗುಣ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಅವರದಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಧಾರವಾಡ ಮುರುಘಾಮಠ, ಮುಳಗುಂದ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಮಾನವೀಯ ಮೌಲ್ಯಗಳು ಉಳಿಯಬೇಕಾದರೆ ಮಲ್ಲಮ್ಮ ಅವರಂಥ ಮಹನೀಯರ ಜೀವನ ಸಂದೇಶಗಳನ್ನು, ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಶ್ರೀ.ಬಾ.ಲಿ.ಮ.ಶಿ. ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಡಿ. ಬಟ್ಟೂರ ಮಾತನಾಡಿ, ಶರಣ ಸಾಹಿತ್ಯ ಪರಿಷತ್, ಮಹಿಳಾ ಕದಳಿ ವೇದಿಕೆ ಪಟ್ಟಣದಲ್ಲಿ ಮನೆ ಮನದಲ್ಲಿ ಶರಣರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ನಾಡಿನ ಹೆಸರಾಂತ ಶರಣ, ಸಂತರ ಜಯಂತಿಗಳನ್ನು ಆಚರಿಸಿ ಇಂದಿನ ಪೀಳಿಗೆಗೆ ನಾಡಿನ ಶರಣ ಸಾಹಿತ್ಯವನ್ನು ಪರಿಚಯಿಸು ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಜಿಲ್ಲಾ ಮಹಿಳಾ ಕದಳಿ ವೇದಿಕೆ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಅವರು ರಚಿಸಿದ ಸ್ತ್ರೀ ಸಂವೇದನೆಯ ಅಸ್ಮಿತೆ ಪುಸ್ತಕ ಲೋಕಾರ್ಪಣೆಗೊಳಿಸಲಾಯಿತು.
ಹಿರಿಯರಾದ ಶಂಕ್ರಪ್ಪ ಗೊರವರ, ಮಲ್ಲಮ್ಮ ಬಟ್ಟೂರ, ರಾಮಣ್ಣ ಕಮಾಜಿ, ಡಾ. ಎಸ್.ಸಿ. ಚವಡಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪುರ, ಪಪಂ ಮಾಜಿ ಸದಸ್ಯರಾದ ಕೆ.ಎಲ್. ಕರಿಗೌಡ್ರ, ವಿಜಯ ನೀಲಗುಂದ, ಜಗದೀಶ ಬಟ್ಟೂರ, ಚಂದ್ರು ಬಟ್ಟೂರ, ಮಂಜುನಾಥ ಬಟ್ಟೂರ, ಮಂಜುನಾಥ ಮಟ್ಟಿ, ರಾಜೇಶ್ವರಿ ಬಡ್ನಿ ಸೇರಿದಂತೆ ರಡ್ಡಿ ಸಮಾಜದ ಹಿರಿಯರು, ಯುವಕರು, ಮಹಿಳೆಯರು ಇದ್ದರು.