ಸ್ತ್ರೀಕುಲಕ್ಕೆ ಹೇಮರಡ್ಡಿ ಮಲ್ಲಮ್ಮ ಸದಾ ಮಾದರಿ-ಸಚಿವ ಎಚ್‌.ಕೆ. ಪಾಟೀಲ

| Published : Feb 19 2024, 01:31 AM IST

ಸಾರಾಂಶ

ಸಮಾಜದ ಒಳಿತಿಗಾಗಿ ಉತ್ತಮ ಸಂದೇಶಗಳನ್ನು ನೀಡಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಸ್ತ ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆ. ಅವರ ತತ್ವ ಸಿದ್ಧಾಂತ ಹಾಗೂ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಶಿರಹಟ್ಟಿ: ಸಮಾಜದ ಒಳಿತಿಗಾಗಿ ಉತ್ತಮ ಸಂದೇಶಗಳನ್ನು ನೀಡಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಮಸ್ತ ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆ. ಅವರ ತತ್ವ ಸಿದ್ಧಾಂತ ಹಾಗೂ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕಾನೂನು, ಸಂಸದೀಯ ವ್ಯವಹಾರ ಮತ್ತು ಪ್ರವಾಸೋದ್ಯಮ ಖಾತೆ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಭಾನುವಾರ ತಾಲೂಕಿನ ಖಾನಾಪುರ ಗ್ರಾಮದಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ನೂತನ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಿದ್ದ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಕೊನೆ ದಿನದ ಕಳಸಾರೋಹಣ ಕಾರ್ಯಕ್ರಮದಲ್ಲಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಅನ್ಯ ಕಾರ್ಯಕ್ರಮದ ನಿಮಿತ್ತ ತೆರಳುವಾಗ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೇಮರಡ್ಡಿ ಮಲ್ಲಮ್ಮ ಆಶೀರ್ವಾದ ಇರುವ ರೆಡ್ಡಿ ಸಮಾಜವು ನಂಬಿಕೆಗೆ ಅರ್ಹವಾಗಿದ್ದು, ಪ್ರತಿಯೊಂದು ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸದಾಕಾಲ ಕಾಯಕದಲ್ಲಿ ಶ್ರದ್ಧೆಯಿಟ್ಟು ಇಡೀ ಮನುಕುಲಕ್ಕೆ ಆದರ್ಶಗಳಾಗಿ ಬದುಕಿದ ಶಿವಶರಣೆ ಎನಿಸಿಕೊಂಡ ಹೇಮರಡ್ಡಿ ಮಲ್ಲಮ್ಮಳ ಬದುಕು ಸರ್ವರಿಗೂ ಸ್ಫೂರ್ತಿ ಎಂದ ಅವರು, ಸಾಕ್ಷಾತ್ ಮಲ್ಲಿಕಾರ್ಜುನನ್ನು ಒಲಿಸಿಕೊಂಡಿರುವ ಹೇಮರಡ್ಡಿ ಮಲ್ಲಮ್ಮ ಮಹಾಸಾಧ್ವಿಯಾಗಿದ್ದಾರೆ ಎಂದರು.

ರಡ್ಡಿ ಸಮಾಜಕ್ಕೆ ಬಡತನ ನೀಡಬೇಡವೆಂದು ಸಾಕ್ಷಾತ್ ಪರಮಾತ್ಮನಾದ ಮಲ್ಲಿಕಾರ್ಜುನನಲ್ಲಿ ತನ್ನ ಭಕ್ತಿಯಿಂದ ಭಜಿಸಿ ಪರಮಾತ್ಮನಿಗೆ ಅಂಬಲಿಯನ್ನು (ಪ್ರಸಾದ) ನೀಡಿದ ಶರಣೆ ಹೇಮರಡ್ಡಿ ಮಲ್ಲಮ್ಮ ನಮಗೆ ಆದರ್ಶಳಾಗಿದ್ದಾಳೆ. ಸಮಾಜದ ಒಳಿತಿಗಾಗಿ ಶ್ರಮಿಸಿದ ಇವರ ಜೀವನವು ಅವಿಸ್ಮರಣೀಯವಾಗಿದೆ ಎಂದರು.

ಪ್ರತಿಯೊಬ್ಬ ಮಹಿಳೆಗೂ ಆದರ್ಶಪ್ರಾಯವಾದ ವ್ಯಕ್ತಿತ್ವ ಹೊಂದಿದ ಹೇಮರಡ್ಡಿ ಮಲ್ಲಮ್ಮ ಚರಿತ್ರೆಯನ್ನು ಪ್ರತಿಯೊಬ್ಬ ಮಹಿಳೆಯೂ ಅರಿತುಕೊಳ್ಳಬೇಕು. ಇವರ ಆದರ್ಶ ಮೌಲ್ಯಗಳನ್ನು ಮಹಿಳೆಯರು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಅವರು ಪ್ರತಿಪಾದಿಸಿದ ಭಕ್ತಿ ಮಾರ್ಗದ ದಾರಿಯಲ್ಲಿ ಎಲ್ಲರೂ ನಡೆಯಬೇಕು ಎಂದರು. ಏನೇ ಕಷ್ಟ ಬಂದರೂ ಅದಕ್ಕೆ ಹೆದರದೇ ಪರರಿಗೆ ಒಳಿತು ಮಾಡುವ ಗುಣ ಅವರಲ್ಲಿತ್ತು. ಅಂತಹ ಸದ್ಗುಣಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜೀವನದಲ್ಲಿ ಏನೇ ಕಷ್ಟನಷ್ಟ ಅನುಭವಿಸಿದರು ಹೇಮರಡ್ಡಿ ಮಲ್ಲಮ್ಮ ಅವರು ಮಾತ್ರ ಇತರರಿಗೆ ಒಳಿತನ್ನು ಬಯಸುವ ವಿಶಾಲ ಮನೋಭಾವದ ಗುಣ ಹೊಂದಿದ್ದರು. ಅವರು ಕಾಯಕ ಮತ್ತು ದಾಸೋಹಕ್ಕೆ ವಿಶೇಷ ಒತ್ತು ನೀಡಿದ್ದರು ಎಂದು ಹೇಳಿದರು.

ಸಹನೆ ಮತ್ತು ತಾಳ್ಮೆಗೆ ಇನ್ನೊಂದು ಹೆಸರೆಂಬಂತೆ ಬದುಕಿದ್ದ ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಎಲ್ಲಾ ಸ್ತ್ರೀಯರಿಗೂ ಮಾದರಿಯಾಗಿವೆ. ಕಷ್ಟ ಕಾರ್ಪಣ್ಯವನ್ನು ಸಹಿಸುವ ಸಹನೆ ಅವರಲ್ಲಿತ್ತು. ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು, ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಮಾದರಿ ಎಂದು ತಿಳಿಸಿದರು.

ಮಾಜಿ ಶಾಸಕರಾದ ಜಿ.ಎಸ್. ಗಡ್ಡದ್ದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಮಹೇಂದ್ರ ಮುಂಡವಾಡ, ಸುಜಾತ ದೊಡ್ಡಮನಿ, ಎಂ.ಡಿ. ಬಟ್ಟೂರ, ಹೊನ್ನಪ್ಪ ಶಿರಹಟ್ಟಿ, ಎನ್.ಎನ್. ಗೋಕಾವಿ, ಲಕ್ಷ್ಮಣಗೌಡ ಪಾಟೀಲ, ಅಜ್ಜು ಪಾಟೀಲ, ಸಿದ್ದು ಪಾಟೀಲ, ಸುರೇಶ ಅಕ್ಕಿ ಹಾಗೂ ಗ್ರಾಮದ ಸಮಸ್ತ ಹಿರಿಯರು ಇದ್ದರು.