ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಗೃಹಿಣಿಯಾಗಿಯೇ, ತನ್ನ ಕುಟುಂಬವನ್ನು ತಿದ್ದಿ, ತೀಡಿ, ಸಮಾಜದಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ರೂಪಿಸುವ ಮೂಲಕ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ, ಭಾರತೀಯ ಗೃಹಿಣಿಯರಿಗೆ ಮಾದರಿಯಾಗಿದ್ದಾರೆ ಎಂದು ತುಮಕೂರು ತಹಸೀಲ್ದಾರ್ ರಾಜೇಶ್ವರಿ ಅಭಿಪ್ರಾಯಪಟ್ಟಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ರೆಡ್ಡಿ ಜನಸಂಘ ವತಿಯಿಂದ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೇಮರೆಡ್ಡಿ ಮಲ್ಲಮ್ಮ, ವಿಜ್ಞಾನಿಯಾಗಿರಲಿಲ್ಲ, ವೈದ್ಯರಾಗಿರಲಿಲ್ಲ. ರಾಣಿಯಾಗಿರಲಿಲ್ಲ. ಶಿಕ್ಷಕರು ಅಲ್ಲ, ಆದರು ಅವರನ್ನು ನಾವು ಇಂದು ಪೂಜ್ಯನೀಯ ಭಾವನೆಯಿಂದ ನೋಡುತ್ತಿದ್ದೇವೆ ಎಂದರೆ, ಅವರು ಸಂಸಾರಿಕ ಜೀವನದಲ್ಲಿ ಇದ್ದುಕೊಂಡೇ ಸಂತರ ರೀತಿ ಬದುಕಿದವರು. ಪಾಮರನಾಗಿದ್ದ ಪತಿಯನ್ನು ಪಂಡಿತನಾಗಿಸಿದ್ದು ಈಕೆಯ ದೊಡ್ಡ ಸಾಧನೆ ಎಂದರು.ಸಾಂಸಾರಿಕ ಜೀವನದಲ್ಲಿ ಎಲ್ಲರಿಗೂ ಅತ್ತೆ, ನಾದಿನಿಯರ ಕಾಟ ಇದ್ದದ್ದೇ, ಆದರೆ ಅವೆಲ್ಲವನ್ನು ಮೀರಿ, ತನ್ನ ಸಹನೆ, ತಾಳ್ಮೆ, ಪ್ರೀತಿಯಿಂದ ಮಲ್ಲಿಕಾರ್ಜುನನ್ನೇ ಒಲಿಸಿಕೊಂಡ ಮಹಾನ್ ಸಾದ್ವಿ ಹೇಮರೆಡ್ಡಿ ಮಲ್ಲಮ್ಮ. ಜೀವನದಲ್ಲಿ ನಡೆದ ಅಹಿತಕರ ಘಟನೆಯನ್ನೇ ನೆಪಮಾಡಿಕೊಂಡು ಕೊರಗದೆ, ಅದರಿಂದ ಹೊರಬರಲು ಆಧ್ಯಾತ್ಮದ ಮೊರೆ ಹೋಗಿ,ಇಡೀ ಮಹಿಳಾ ಕುಲಕ್ಕೆ ಕಳಸ ಪ್ರಾಯರಾಗಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಮಾತನಾಡಿ,ಅವಿಭಕ್ತ ಕುಟುಂಬದ ಓರ್ವ ಸೊಸೆಯಾಗಿ,ತನಗಾದ ಎಲ್ಲ ಅವಮಾನ, ಅಪಮಾನಗಳನ್ನು ಸಹಿಸಿಕೊಂಡು, ಸಮಾಜದ ಎದುರು ಕುಟುಂಬದ ಘನತೆಯನ್ನು ಎತ್ತಿ ಹಿಡಿದ ಕೀರ್ತಿ ಹೇಮರೆಡ್ಡಿ ಮಲ್ಲಮ್ಮಅವರಿಗೆ ಸಲ್ಲುತ್ತದೆ ಎಂದರು.ಜಿಲ್ಲಾ ರೆಡ್ಡಿ ಜನಸಂಘ ಹಾಗೂ ರೆಡ್ಡಿ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಶ್ರೀನಿವಾಸರೆಡ್ಡಿ ಮಾತನಾಡಿ ರೆಡ್ಡಿ ಜನಸಮುದಾಯಕ್ಕೆ ವೇಮನ ಮತ್ತು ಹೇಮರೆಡ್ಡಿ ಮಲ್ಲಮ್ಮಇಬ್ಬರು ಸಾಂಸ್ಕೃತಿಕ ನಾಯಕರು. ಇವರ ಜಯಂತಿಯನ್ನು ಪ್ರತಿಯೊಬ್ಬ ರೆಡ್ಡಿ ಜನಾಂಗದ ಮನೆಯಲ್ಲಿಯೂ ಹಬ್ಬದ ರೀತಿ ಆಚರಿಸಬೇಕಾಗಿದೆ. ಇಡೀ ಸಮುದಾಯದ ಜನರು ತಮ್ಮ ಕುಟುಂಬ ಸಮೇತರಾಗಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಸಾನಿಧ್ಯ ವಹಿಸಿದ್ದ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ವೇಮನ, ಹೇಮರೆಡ್ಡಿ ಮಲ್ಲಮ್ಮ, ಬಸವಣ್ಣ ಇಂತಹ ದಾರ್ಶನಿಕರನ್ನು ಒಂದು ಜಾತಿಗೆ ಸೀಮತವಾಗಿಸುವುದು ಸರಿಯಲ್ಲ ಎಂದರು.ಜಿಲ್ಲಾ ರೆಡ್ಡಿ ಜನಸಂಘದಿಂದ ನಿರ್ಮಿಸುತ್ತಿರುವ ಹಾಸ್ಟಲ್ ಕಟ್ಟಡದ ನೆರವಿಗಾಗಿ ಸಂಘದ ನಿರ್ದೇಶಕ ಎನ್.ನರಸಿಂಹರೆಡ್ಡಿ ಎರಡು ಲಕ್ಷ ರೂಗಳ ಚೆಕ್ ನೀಡಿದರು. ಜಿಲ್ಲಾ ರೆಡ್ಡಿ ಜನಸಂಘದ ಜಂಟಿ ಕಾರ್ಯದರ್ಶಿ ಕೆ.ಜೆ.ರಾಜಗೋಪಾಲ ರೆಡ್ಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಅಶ್ವಥ್ ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶಕುಮಾರ್, ಜಿಲ್ಲಾ ರೆಡ್ಡಿ ಜನಸಂಘದ ಕಾರ್ಯದರ್ಶಿ ಬಿ.ಆರ್.ಮಧು,ಖಜಾಂಚಿ ಶಿವಾರೆಡ್ಡಿ, ನಿರ್ದೇಶಕರಾದ ಎಸ್,ಕೆ.ಮಲ್ಲಿಕಾರ್ಜುನರೆಡ್ಡಿ, ಎನ್.ನರಸಿಂಹರೆಡ್ಡಿ, .ಕೆ.ನಿರ್ಮಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.