ಸ್ತ್ರೀಕುಲಕ್ಕೆ ಮಾದರಿ ಹೆಮರೆಡ್ಡಿ ಮಲ್ಲಮ್ಮ: ಸವಿತಾ ಲೆಂಕೆಣ್ಣವರ

| Published : May 11 2025, 01:26 AM IST

ಸ್ತ್ರೀಕುಲಕ್ಕೆ ಮಾದರಿ ಹೆಮರೆಡ್ಡಿ ಮಲ್ಲಮ್ಮ: ಸವಿತಾ ಲೆಂಕೆಣ್ಣವರ
Share this Article
  • FB
  • TW
  • Linkdin
  • Email

ಸಾರಾಂಶ

ಆದರ್ಶ ಗೃಹಿಣಿ, ಶ್ರೇಷ್ಠ ಶಿವಶರಣೆ ಹಾಗೂ ತಾಳ್ಮೆ ಮತ್ತು ತ್ಯಾಗದ ಗುಣ ಹೊಂದಿದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆಂದು ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆದರ್ಶ ಗೃಹಿಣಿ, ಶ್ರೇಷ್ಠ ಶಿವಶರಣೆ ಹಾಗೂ ತಾಳ್ಮೆ ಮತ್ತು ತ್ಯಾಗದ ಗುಣ ಹೊಂದಿದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀಕುಲಕ್ಕೆ ಮಾದರಿಯಾಗಿದ್ದಾರೆಂದು ನಗರಸಭೆ ಅಧ್ಯಕ್ಷೆ ಸವಿತಾ ಲೆಂಕೆಣ್ಣವರ ಹೇಳಿದರು.

ನವನಗರದ ಡಾ.ಬಿ.ಆರ್. ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯ ಆಧ್ಯಾತ್ಮಿಕತೆ ಶ್ರೀಮಂತಗೊಳಿಸಲು, ಸಮಾಜಕ್ಕೆ ಆದರ್ಶಗಳನ್ನು ನೀಡಿದ ಶಿವಶರಣೆಯರಲ್ಲಿ ಹೇಮರೆಡ್ಡಿ ಮಲ್ಲಮ್ಮರು ಪ್ರಮುಖರು ಎಂದು ಹೇಳಿದರು.

ವೇಮ ಎಂದರೆ ಬಂಗಾರ, ಜ್ಞಾನ, ರೆಡ್ಡಿ ಎಂದರೆ ಅನ್ನದಾತ ಹಾಗೂ ಮಲ್ಲಮ್ಮ ಎಂದರೆ ಸಂಸ್ಕೃತಿಯಾಗಿದೆ. ಮಲ್ಲಮ್ಮನಲ್ಲಿರುವ ಪರೋಪಕಾರ, ತ್ಯಾಗ, ಸಂಸ್ಕಾರ, ಗುರು-ಹಿರಿಯರ ಬಗ್ಗೆ ಅಪಾರವಾದ ಗೌರವ, ಭಕ್ತಿ ಹಾಗೂ ಸಮಾಜ ಸೇವೆಯಂತಹ ಆದರ್ಶ ಮೌಲ್ಯಗಳನ್ನು ಹೊಂದಿದ ದೃವತಾರೆ ಮಲ್ಲಮ್ಮ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆದೆ ಮಾತ್ರ ಅವರ ಜಯಂತಿ ಆಚರಿಸಿದ್ದಕ್ಕೂ ಸಾರ್ಥಕತೆ ಬರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಮಹಾಸಾದ್ವಿ ಮಲ್ಲಮ್ಮರ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು. ಸಹನೆ, ತ್ಯಾಗ, ಕಾರ್ಯಕ್ಷಮತೆ ಗುಣಗಳು ಎಲ್ಲ ಕಾಲದಲ್ಲಿ ಪ್ರಚಲಿತದಲ್ಲಿವೆ. ಕೆಟ್ಟವರನ್ನು ಒಳ್ಳೆಯವರನ್ನಾಗಿ ಕಂಡಾಗ ಮಾತ್ರ ಅವರನ್ನು ಸರಿದಾರಿಗೆ ತರಬಹುದಾಗಿದೆ ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಹಾದಿಯಲ್ಲಿ ನಾವೂ ಸಹ ನಡೆಯಬೇಕಿದೆ ಎಂದು ಹೇಳಿದರು.

ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಾತನಾಡಿ, ಆದರ್ಶ ವ್ಯಕ್ತಿಗಳ ಸ್ಥಾನದಲ್ಲಿ ಮಲ್ಲಮ್ಮರು ಒಬ್ಬರಾಗಿದ್ದಾರೆ. ಜೀವನದ ಕಷ್ಟ, ಸುಖಗಳನ್ನು ಅನುಭವಿಸಿ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ತಾಳ್ಮೆಗೆ ಮತ್ತೊಂದು ಹೆಸರೇ ಮಲ್ಲಮ್ಮ. ಒಬ್ಬತಾಯಿ ಅಥವಾ ಮಹಿಳೆ ಮನಸ್ಸು ಮಾಡಿದರೆ ಕೆಟ್ಟ ಕುಟುಂಬವನ್ನು ತಿದ್ದಿ ಸುಸಂಸ್ಕೃತವನ್ನಾಗಿ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಆದರ್ಶಗಳು ಸ್ತ್ರೀಕುಲಕ್ಕೆ ಮಾದರಿಯಾಗಿವೆ ಎಂದು ತಿಳಿಸಿದರು.

ಉಪನ್ಯಾಸಕರಾಗಿ ಆಗಮಿಸಿದ್ದ ಮುಧೋಳ ಆರ್.ಎಂ.ಜಿ ಪಿಯು ಕಾಲೇಜಿನ ಶಿಕ್ಷಕಿ ಅನಿತಾ ಪಾಟೀಲ ಮಾತನಾಡಿ, ಮಲ್ಲಮ್ಮ ಜೀವನವಿಡಿ ಕಷ್ಟಗಳನ್ನುಂಡರೂ ತನಗೆ ನೋವುಂಟು ಮಾಡಿದವರ ಹಿತ ಬಯಸಿದವರು. ಜೋಳ ದಾನ ಮಾಡಿ ಮಣ್ಣಿನ ಕಣಗಳಿಂದ ಬೆಳೆ ಬೆಳೆದವರು ಮಲ್ಲಮ್ಮ. ಮನೆಯ ಒಡತಿಯಾಗಿದ್ದರೂ ದಾಸಿಯಂತೆ ಸೇವೆ ಸಲ್ಲಿಸಿ ಎಂತಹ ಕಷ್ಟದಲ್ಲಿಯೂ ಶಿವನನ್ನು ಸ್ಮರಿಸುತ್ತಿದ್ದರು. ಶ್ರೀಶೈಲ ಮಲ್ಲಿಕಾರ್ಜುನನನ್ನು ತನ್ನ ಆರಾಧ್ಯ ದೈವನಾಗಿ ಆರಾಧಿಸಿ, ಅವರನ್ನು ಸಾಕ್ಷಾತ್ಕರಿಸಿಕೊಂಡ ಹೇಮರೆಡ್ಡಿ ಮಲ್ಲಮ್ಮ ಮೋಕ್ಷ ಪಡೆಯಲು ಲೌಕಿಕ ಪ್ರಪಂಚವನ್ನು ತ್ಯಾಗ ಮಾಡದೇ ಸಂಸಾರದಲ್ಲಿದ್ದುಕೊಂಡೇ ಸದ್ಗತಿ ಹೊಂದಿದವರು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪೂರ, ಸಮುದಾಯದ ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ, ಶೋಭಾ ಕಟಗೇರಿ, ಆರ್.ಎಸ್. ಪಾಟೀಲ, ವಿರೂಪಾಕ್ಷ ಹಾದಿಮನಿ ಇತರರು ಉಪಸ್ಥಿತರಿದ್ದರು.

ಭಾವಚಿತ್ರದ ಅದ್ಧೂರಿ ಮೆರವಣಿಗೆ:

ಹೇಮರೆಡ್ಡಿ ಮಲ್ಲಮ್ಮಳ ಜಯಂತಿ ನಿಮಿತ್ತ ಜಿಲ್ಲಾಡಳಿತ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ಚಾಲನೆ ನೀಡಿದರು. ಮೆರವಣಿಗೆ ವಿವಿಧ ಜಾನಪದ ಕಲಾ ತಂಡದೊಂದಿಗೆ ನಗರದ ವಿವಿಧೆಡೆ ಸಂಚರಿಸಿ ಡಾ.ಅಂಬೇಡ್ಕರ್‌ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮುದಾಯ ಮುಖಂಡರು ಪಾಲ್ಗೊಂಡಿದ್ದರು.