ಚಿತ್ರದುರ್ಗ ನಗರದ ಬಸವಕೇಂದ್ರ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕೇವಲ ಒಬ್ಬ ಮಹಿಳೆಯಾಗಿ ಮಾತ್ರವಲ್ಲದೇ ಕೌಟುಂಬಿಕ ಅಡೆತಡೆಗಳನ್ನು ಮೀರಿ ಭಗವಂತನನ್ನು ಹೇಗೆ ಒಲಿಸಿಕೊಳ್ಳಬಹುದೆಂಬ ಜೀವಂತ ಸಾಕ್ಷಿಯಾಗಿ ಹೇಮರಡ್ಡಿ ಮಲ್ಲಮ್ಮ ನಮಗೆ ಕಾಣಿಸಿಕೊಳ್ಳುತ್ತಾರೆ ಎಂದು ಕವಿ, ಸಾಹಿತಿ ಸಿ.ಬಿ.ಶೈಲಾ ಜಯಕುಮಾರ್ ಹೇಳಿದರು.

ನಗರದ ಬಸವಕೇಂದ್ರ, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಶ್ರೀ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಏರ್ಪಡಿಸಿದ್ದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜೀವನದ ಯಶೋಗಾಥೆಯನ್ನು ಮೂರು ಸಾಲಿನಲ್ಲಿ ಸೆರೆಹಿಡಿಯಲು ಸಾಧ್ಯವಿಲ್ಲ ಕೆಲವರು ಸನ್ನಿವೇಶದ ಬಲದಿಂದ ದೊಡ್ಡವರಾದರೆ, ಕೆಲವರು ತಾವು ಕುಳಿತ ಪೀಠದಿಂದ, ಕೆಲವರು ಕೂಡಿಟ್ಟ ಹಣ ಬಲದಿಂದ, ಮತ್ತೆ ಕೆಲವರು ದೇಹದ ಆಕಾರದ ಬಲದಿಂದ ದೊಡ್ಡವರೆನಿಸಿಕೊಳ್ಳುತ್ತಾರೆ. ಆದರೆ ಹೇಮರಡ್ಡಿ ಮಲ್ಲಮ್ಮನಂತಹ ಶಿವಶರಣೆ ಜೀವನ ಚಿಂತನ-ಮಂಥನ, ಸಾಧನೆ, ಯೋಗ, ಜ್ಞಾನದ ಮೂಲಕ ಅನುಭವಿಸಿದ ಕಷ್ಟಗಳ ಮೂಲಕ ದೊಡ್ಡವರಾಗಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಇಡೀ ಮಾನವ ಕುಲಕ್ಕೆ ಆದರ್ಶಪ್ರಾಯ ವ್ಯಕ್ತಿತ್ವದವರಾಗಿದ್ದು, ಅರಿವಿಗಿಂತ ಆಚಾರ ದೊಡ್ಡದು ಎಂಬುದನ್ನು ಬಲವಾಗಿ ನಂಬಿದಂತಹ ಮಹಾಸಾದ್ವಿ. ಈ ಶರಣೆಯನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ ಇಡೀ ಮಾನವ ಸಂಕುಲಕ್ಕೆ ಸನ್ಮಾರ್ಗ ತೋರಿದ ಮಹಾದೇವಿ ಎಂದು ಭಾವಿಸಬೇಕಿದೆ ಎಂದರು.

ಸಮಾರಂಭದ ಸಮ್ಮುಖ ವಹಿಸಿದ್ದ ಶಿರಸಂಗಿಯ ಶ್ರೀ ಮಹಾಲಿಂಗೇಶ್ವರ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ ಮಲ್ಲಮ್ಮನ ಆದರ್ಶಗಳನ್ನು ಕೇವಲ ಭಾಷಣಕ್ಕೆ ಮಾತ್ರ ಬಳಸಿಕೊಳ್ಳದೆ ನಡೆಯಲ್ಲಿ ಆಚರಣೆಗೆ ತಂದಾಗ ಮಾತ್ರ ಅರ್ಥ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ಕೋಡಿಹಳ್ಳಿಯ ಶ್ರೀ ಬಸವ ಭಂಗೇಶ್ವರ ಶ್ರೀ, ಉಳವಿಯ ಶ್ರೀ ಬಸವಲಿಂಗಮೂರ್ತಿ ಶರಣರು, ತಿಪ್ಪೇರುದ್ರ ಸ್ವಾಮೀಜಿ, ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಶ್ರೀಗಳು, ಪೂರ್ಣಾನಂದ ಶ್ರೀ, ಸೇರಿದಂತೆ ಹಲವಾರು ಮಠ-ಪೀಠಗಳ ಸ್ವಾಮಿಗಳು ಉಪಸ್ಥಿತರಿದ್ದರು. ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಜಿಲ್ಲಾಧ್ಯಕ್ಷ ಡಾ.ಪಾಲಾಕ್ಷಯ್ಯ, ಗೌರವಾಧ್ಯಕ್ಷ ಚಿದಾನಂದಪ್ಪ, ಕಾರ್ಯದರ್ಶಿ ಡಿ.ಬಿ. ಶಿವಾನಂದಪ್ಪ, ಗಂಗಾಧರಪ್ಪ, ರಾಜಣ್ಣ, ಗೋವಿಂದಪ್ಪ, ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.