ಹೇಮಾವತಿ ಕಾವೇರಿ ಅಚ್ಚುಕಟ್ಟಿನಲ್ಲಿ ಕಳೆಗಟ್ಟಿದ ಗದ್ದೆ ಬಯಲು

| Published : Aug 22 2025, 12:00 AM IST

ಸಾರಾಂಶ

ಕಾವೇರಿ ಹಾಗೂ ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಈ ಬಾರಿ ವಾಡಿಕೆಗಿಂತಲೂ ಅಧಿಕವಾಗಿ ಮಳೆ ಸುರಿದಿದೆ. ಹೀಗಾಗಿ ವಾಡಿಕೆಗಿಂತ ಮೊದಲೇ ಹಾರಂಗಿ ಮತ್ತು ಕಟ್ಟೆಪುರ ಕೃಷ್ಣರಾಜ ಅಣೆಕಟ್ಟು ತುಂಬಿದ್ದು ಈಗಾಗಲೇ ಎಲ್ಲಾ ನಾಲೆಗಳಲ್ಲಿ ನೀರು ಹರಿಸಲಾಗಿದೆ.‌ ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರಾರಂಭವಾಗಿದ್ದು ಭತ್ತದ ಒಗ್ಗು ( ಸಸಿಮಡಿ) ಹಾಕಿರುವ ರೈತರು ಇದೀಗ ನಾಟಿ ಕಾರ್ಯ ಬಿರುಸುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಕಾವೇರಿ ಹಾಗೂ ಹೇಮಾವತಿ ನದಿ ಪಾತ್ರದ ನಾಲಾ ಅಚ್ಚುಕಟ್ಟಿನಲ್ಲಿ ರೈತರು ಭತ್ತದ ನಾಟಿ ಕಾರ್ಯ ಚುರುಕುಗೊಳಿಸಿದ್ದು ಗದ್ದೆಗಳಲ್ಲಿ ಎತ್ತ ನೋಡಿದರೂ ಭತ್ತದ ನಾಟಿ ಕಾರ್ಯ ನಡೆಯುತ್ತಿದ್ದು, ಇಡೀ ಗದ್ದೆ ಬಯಲುಗಳು ಕೃಷಿ ಚಟುವಟಿಕೆಗಳಿಂದ ಕಳೆಗಟ್ಟಿವೆ.

ಕಾವೇರಿ ಹಾಗೂ ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಈ ಬಾರಿ ವಾಡಿಕೆಗಿಂತಲೂ ಅಧಿಕವಾಗಿ ಮಳೆ ಸುರಿದಿದೆ. ಹೀಗಾಗಿ ವಾಡಿಕೆಗಿಂತ ಮೊದಲೇ ಹಾರಂಗಿ ಮತ್ತು ಕಟ್ಟೆಪುರ ಕೃಷ್ಣರಾಜ ಅಣೆಕಟ್ಟು ತುಂಬಿದ್ದು ಈಗಾಗಲೇ ಎಲ್ಲಾ ನಾಲೆಗಳಲ್ಲಿ ನೀರು ಹರಿಸಲಾಗಿದೆ.‌ ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರಾರಂಭವಾಗಿದ್ದು ಭತ್ತದ ಒಗ್ಗು ( ಸಸಿಮಡಿ) ಹಾಕಿರುವ ರೈತರು ಇದೀಗ ನಾಟಿ ಕಾರ್ಯ ಬಿರುಸುಗೊಳಿಸಿದ್ದಾರೆ.

ಶತಮಾನ ವರ್ಷ ಪೂರೈಸಿದ ಕೃಷ್ಣ ರಾಜ ಅಣೆಕಟ್ಟೆ: ಮೈಸೂರು ಅರಸರ ಕಾಲದಲ್ಲಿ ಕಟ್ಟಿದ ಕಟ್ಟೆಪುರ ಕೃಷ್ಣರಾಜ ಅಣೆಕಟ್ಟೆ ಈಗಾಗಲೇ ನೂರು ವರ್ಷ ಪೂರೈಸಿದ್ದು ಅಚ್ಚುಕಟ್ಟು ಪ್ರದೇಶ ಭತ್ತದ ಬೆಳೆಗೆ ಪ್ರಸಿದ್ಧಿಯಾಗಿದೆ. ತೀವ್ರ ಬರಗಾಲ ಎದುರಿಸಿದ ಒಂದೆರಡು ಬಾರಿ ಮಾತ್ರ ನಾಲೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದು ಹೊರತುಪಡಿಸಿದರೆ, ಆ ನಂತರದಲ್ಲಿ ನಿರಂತರವಾಗಿ ನಾಲೆಗಳಲ್ಲಿ ನೀರು ಹರಿದಿದೆ. ಜೀವನದಿ ಕಾವೇರಿ ಜೊತೆಗೆ ಹೇಮಾವತಿ ಜಲಾನಯನ ಸಹ ಭರ್ತಿಯಾಗಿದ್ದು ಈ ಭಾಗದ ಅನ್ನದಾತರ ಬಾಳು ಹಸಿರಾಗಿಸಿದೆ.

12,000 ಎಕರೆ ಪ್ರದೇಶಕ್ಕೆ ನೀರು:

ಕಟ್ಟೆಪುರ ನಾಲೆ ಹಂತದ ಭತ್ತದ ಗದ್ದೆಯಲ್ಲಿ ಬೆಳೆಯುವ ರಾಜಮುಡಿ ರಾಜಭೋಗ ಬತ್ತದ ಬೆಳೆಗೆ ರಾಮನಾಥಪುರ ಹಾಗೂ ಕೃಷ್ಣರಾಜ ಅಣೆಕಟ್ಟೆಯ ನಾಲಾ ಹಂತದಲ್ಲಿ ನಾಟಿ ಕಾರ್ಯ ಸಾಗಿದೆ. ಕಟ್ಟೆಪುರ ಕೃಷ್ಣರಾಜ ಅಣೆಕಟ್ಟೆ ವ್ಯಾಪ್ತಿಯ ಎಡದಂಡೆ ಮತ್ತು ಬಲದಂಡೆ ನಾಳೆ ಅರಕಲಗೂಡು ತಾಲೂಕಿನ ಕೊಣನೂರು, ರಾಮನಾಥಪುರ, ಕೆ ಆರ್‌ ನಗರ ತಾಲೂಕಿನ ಹಾದುಹೋಗಿದ್ದು ಸುಮಾರು 12000 ಹೆಚ್ಚು ಪ್ರದೇಶಕ್ಕೆ ನೀರು ಸರಬರಾಜು ಅಗುತ್ತದೆ. ಅರಕಲಗೂಡು ತಾಲೂಕಿನಲ್ಲಿ 6,000 ಜಮೀನಿಗೆ ನೀರು ಹರಿಯುತ್ತದೆ. ಮೈಸೂರು ಅರಸರ ಕಾಲದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೊದಲ ಬಾರಿಗೆ ಕಟ್ಟಿದ ಅಣೆಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕಟ್ಟೆಪುರದ ಕೃಷ್ಣರಾಜ ಅಣೆಕಟ್ಟೆ ಭತ್ತದ ಬೆಳೆ ಬೆಳೆಯಲು ಯೋಗ್ಯ ಬಯಲಾಗಿದೆ. ನದಿ ಪಾತ್ರದಲ್ಲಿ ಹಾದು ಹೋಗಿರುವ ಎಡ ಮತ್ತು ಬಲದಂಡೆ ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುತ್ತಿದೆ. ಅರಕಲಗೋಡು ತಾಲೂಕಿನ ವ್ಯಾಪ್ತಿಯಲ್ಲಿ ಇದರ ಒಂಬತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರು ಉಪಯೋಗಿಸುತ್ತಾರೆ. ಅರಕಲಗೂಡು ತಾಲೂಕು ಮಾತ್ರವಲ್ಲದೆ ಎಡದಂಡೆ ನಾಲೆ ಕೆ ಆರ್ ನಗರ ತಾಲೂಕಿನ ಪಶುಪತಿ ಹಾಗೂ ಬಲದಂಡೆ ನಾಲೆ ಚುಂಚನಕಟ್ಟೆಯ ಕೆಸವತ್ತೂರು ಗೇಟ್‌ವರೆಗೆ ನೀರು ಹರಿಸಲಾಗಿದ್ದು, ರೈತರು ಭತ್ತದ ಸಸಿ ಮಾಡಿ ಬೆಳಸಿ ನಾಟಿ ಕಾರ್ಯ ನಡೆಸುತ್ತಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ:

ವಿಸ್ತಾರವಾದ ನೀರಾವರಿ ಪ್ರದೇಶ ಹೊಂದಿರುವ ಕಟ್ಟೆಪುರ ನಾಲಾ ಅಚ್ಚುಕಟ್ಟಿನಲ್ಲಿ ರೈತರು ಮುಂಗಾರುಪೂರ್ವ ಮಳೆಗೂ ಮುನ್ನ ಹೆಚ್ಚಿನದಾಗಿ ತಂಬಾಕು ನಾಟಿ ಕಾರ್ಯ ನಡೆಸುತ್ತಾರೆ. ಬಹುತೇಕ ಕಡೆ ತಂಬಾಕು ಕಟಾವು ಕಾರ್ಯ ಪೂರ್ಣಗೊಂಡಿದೆ. ಈ ಬಾರಿ ಮುಂಗಾರು ಮಳೆ ಬಿಡುವಿಲ್ಲದೆ ಸುರಿದ ಪರಿಣಾಮ ತಗ್ಗು ಪ್ರದೇಶದಲ್ಲಿ ಬೆಳೆದ ತಂಬಾಕು ಬೆಳೆ ನೀರಲ್ಲಿ ಮುಳುಗಡೆಯಾಯಿತು. ಕೆಲವು ಪ್ರದೇಶದ ರೈತರು ನೆಲಗಡಲೆ, ಅಲಸಂದೆ, ಹೆಸರು, ಉದ್ದು, ಎಳ್ಳು ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆದಿದ್ದರು. ಇನ್ನೇನು ಫಸಲು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ನದಿಯು ಹುಕ್ಕೇರಿ ಅನೇಕ ಕಡೆ ಪ್ರವಾಹದ ನೀರಿನಲ್ಲಿ ಸಿಲುಕಿ ಸಾಕಷ್ಟು ಬೆಳೆ ನಾಶವಾಗಿ ಅನ್ನದಾತರಿಗೆ ಉಕ್ಕೇರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಅಲ್ಪಸ್ವಲ್ಪ ಉಳಿದ ತಂಬಾಕು ಗಿಡಗಳಲ್ಲಿ ಕಟಾವು ಮಾಡಿ ರೈತರು ಭತ್ತದ ನಾಟಿಗಾಗಿ ಗದ್ದೆಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಹೇಮಾವತಿ ಬಲದಂಡೆ ನಾಲೆ 56 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ತಾಲೂಕಿನಲ್ಲಿ 12,430 ಎಕರೆ ಜಮೀನಿಗೆ ನೀರು ಹರಿಯಲಿದ್ದು ಬಹುತೇಕ ಭಾಗದಲ್ಲಿ ಭತ್ತದ ನಾಟಿ ನಡೆಸಲಾಗುತ್ತಿದೆ. ಇನ್ನುಳಿದಂತೆ ಹೊಳೆನರಸೀಪುರ ತಾಲೂಕಿನಲ್ಲಿ 28,200 ಎಕರೆ, ಕೆ ಆರ್‌ ನಗರ 10,700 ಎಕರೆ ಹಾಗೂ ಕೆ ಆರ್ ಪೇಟೆ ತಾಲೂಕಿನಲ್ಲಿ 4670 ಎಕರೆ ಪ್ರದೇಶದಲ್ಲಿ ನೀರು ಹರಿಸಲಾಗುತ್ತದೆ. ಚಳಿಗಾಲಕ್ಕೆ ಸಿಲುಕುವ ಆತಂಕ:

ರಾಮನಾಥಪುರ ಕೊಣನೂರು ಈ ಭಾಗದ ಹೊಗೆಸೊಪ್ಪು ಬೆಳೆ ಕಾಲಿಡುವ ಮುನ್ನ ಹೆಚ್ಚಿನದಾಗಿ ರೈತರು ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಭತ್ತದ ನಾಟಿ ಕಾರ್ಯ ಪೂರ್ಣಗೊಳಿಸುತ್ತಿದ್ದರು. ಈಗ ತಂಬಾಕು ಕಟಾವು ಕಾರ್ಯ ನಡೆಸುವುದು ತಡವಾಗುತ್ತಿದ್ದು ಸೆಪ್ಟೆಂಬರ್‌ ತಿಂಗಳಲ್ಲಿ ನಾಟಿ ಕಾರ್ಯ ಮುಗಿಸುವ ವಾಡಿಕೆ ಬೆಳೆಸಿಕೊಂಡಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಭತ್ತದ ಪೈರು ನಾಟಿ ಮಾಡುವುದರಿಂದ ಗರ್ಭ ಧರಿಸುವ ವೇಳೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕೊರೆಯುವ ಚಳಿಗಾಲಕ್ಕೆ ಸಿಲುಕುತ್ತದೆ. ಮುಖ್ಯವಾಗಿ ರೈತರು ಹೆಚ್ಚಿನ ಆದಾಯ ತರುವ ತಂಬಾಕು ಬೆಳೆಗೆ ಮಾರುಹೋಗಿರುವುದರಿಂದ ರಸಾಯನಿಕ ರಸಗೊಬ್ಬರಗಳ ಅತಿಯಾದ ಬಳಕೆಯಿಂದ ಬೆಳೆ ಭೂಮಿ ಮೂಲ ಫಲವತ್ತತೆ ಕಳೆದುಕೊಂಡಿದೆ.

---------------------------------------------------------------------------

*ಹೇಳಿಕೆ1

ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಭಾಗದಲ್ಲಿ ರೈತರು ಈಗಾಗಲೇ ಭತ್ತ ನಾಟಿ ಕಾರ್ಯ ಮುಗಿಸಿದ್ದಾರೆ. ಹೇಮಾವತಿ ಮತ್ತು ಕಾವೇರಿ ನದಿ ಪಾತ್ರದ ನಾಲೆಗಳಲ್ಲಿ ಭತ್ತ ನಾಟಿ ಕಾರ್ಯ ಪ್ರಗತಿಯಲ್ಲಿದೆ. ರೈತರು ಅಗತ್ಯವಾದ ಬಿತ್ತನೆ ಬೀಜ ರಸಗೊಬ್ಬರ ವಿತರಿಸಲಾಗಿದೆ.

ಕವಿತಾ, ಸಹಾಯಕ ಕೃಷಿ ನಿರ್ದೇಶಕಿ ಅರಕಲಗೂಡು*ಹೇಳಿಕೆ2

- ಕಟ್ಟೆಪುರ ನಾಲೆ ಹಂತದ ಉತ್ತಮ ಮಳೆಯಾಗಿದ್ದು ಕೃಷ್ಣರಾಜ ಅಣೆಕಟ್ಟೆಯ ಹಾಗೂ ಹಾರಂಗಿ ಹೇಮಾವತಿ ಕಾವೇರಿ ನದಿ ಪಾತ್ರದ ನಾಲೆಗಳಲ್ಲಿ ಈ ಬಾರಿ ನೀರಿನ ಕೊರತೆ ಇಲ್ಲ ಹೀಗಾಗಿ ಭತ್ತದ ನಾಟಿ ಕಾರ್ಯ ಕೈಗೊಳ್ಳಲಾಗುತ್ತಿದೆ‌.

ಕೃಷ್ಣೇಗೌಡ, ರೈತ ಮುಖಂಡ ರಾಮನಾಥಪುರ