ಸಾರಾಂಶ
ಜಾತ್ಯತೀತವಾಗಿ ಪಕ್ಷಾತೀತವಾಗಿ ರೈತ ಮುಖಂಡರು, ಶಾಸಕರು, ಮಾಜಿ ಶಾಸಕರು, ತಾಲೂಕಿನ ಎಲ್ಲಾ ಮುಖಂಡರು, ತಾಲೂಕಿನ ಎಲ್ಲ ಸಂಘ- ಸಂಸ್ಥೆಗಳು ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಗೊಳಿಸುತ್ತೇವೆ .
ಕನ್ನಡಪ್ರಭ ವಾರ್ತೆ ಗುಬ್ಬಿ
ತಾಲೂಕಿನ ಗಂಗಸಂದ್ರ ಗ್ರಾಮದಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಡೆಸಲು ಸುಮಾರು 50 ಲಾರಿಗಳಲ್ಲಿ 12 ಅಡಿ ಎತ್ತರದ ಬೃಹತ್ ಪೈಪ್ ಗಳನ್ನು ಇಳಿಸಲು ಮುಂದಾಗಿದ್ದ ಸಂದರ್ಭದಲ್ಲಿ ಲಾರಿಗಳನ್ನು ತಡೆದು ವಾಪಸ್ ಕಳಿಸಲಾಗಿದೆ ಎಂದು ಬಿಜೆಪಿ ಮುಖಂಡ ಎಸ್. ಡಿ. ದಿಲೀಪ್ ಕುಮಾರ್ ತಿಳಿಸಿದರು.ಲಿಂಕ್ ಕೆನಾಲ್ ಮೂಲಕ ಮಾಗಡಿ, ರಾಮನಗರ ಕಡೆಗೆ ಹೇಮಾವತಿ ನೀರು ಹರಿಸಲು ಬೃಹತ್ ಗಾತ್ರದ ಪೈಪ್ ಗಳನ್ನು ಇಳಿಸಿದ ಹಿನ್ನೆಲೆ ಹೋರಾಟದ ಸ್ವರೂಪ ಕುರಿತು ಚರ್ಚಿಸಲು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ರಾಮನಗರ, ಮಾಗಡಿ ಭಾಗಗಳಿಗೆ ಯಾವುದೇ ಕಾರಣಕ್ಕೂ ಇಲ್ಲಿಂದ ನೀರು ಹರಿಸಲು ಬಿಡುವುದಿಲ್ಲ, ಕಾಂಗ್ರೆಸ್ ಸರಕಾರ ತುಮಕೂರು ಜಿಲ್ಲೆಗೆ ಮರಣ ಶಾಸನ ಬರೆಯಲು ಸಿದ್ಧವಾಗಿದ್ದರೂ ಸಹ ಕೆಲವು ಕಾಂಗ್ರೆಸ್ ಶಾಸಕರು ಕಾಮಗಾರಿ ತಡೆಯಲು ಮುಂದಾಗಿಲ್ಲ. ಈ ಬೃಹತ್ ಪೈಪ್ ಗಳ ಮೂಲಕ ನೀರು ಏನಾದರೂ ಹರಿಯಲು ಶುರುವಾದರೆ ನಿಟ್ಟೂರಿನಿಂದ ಮುಂದಿನ ಭಾಗಗಳಿಗೆ ನೀರು ಹೋಗುವುದಿಲ್ಲ. ಗುಬ್ಬಿ, ತುರುವೇಕೆರೆ, ತುಮಕೂರು ಗ್ರಾಮಾಂತರ ತುಮಕೂರು ನಗರ ಸೇರಿದಂತೆ ಇಡೀ ಜಿಲ್ಲೆಗೆ ನೀರಿನ ಸಮಸ್ಯೆ ಸೃಷ್ಟಿಯಾಗುತ್ತದೆ. ಈ ಕಾಮಗಾರಿಯನ್ನು ಮಾಡಲು ಹೊರಟಿರುವ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡುವ ಮುನ್ನ ಬರುವ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಈ ಕೂಡಲೇ ಕಾಮಗಾರಿಯನ್ನು ಮಾಡದಂತೆ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ರೈತ ಸಂಘದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಜಾತ್ಯತೀತವಾಗಿ ಪಕ್ಷಾತೀತವಾಗಿ ರೈತ ಮುಖಂಡರು, ಶಾಸಕರು, ಮಾಜಿ ಶಾಸಕರು, ತಾಲೂಕಿನ ಎಲ್ಲಾ ಮುಖಂಡರು, ತಾಲೂಕಿನ ಎಲ್ಲ ಸಂಘ- ಸಂಸ್ಥೆಗಳು ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಆಯೋಜಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಗೊಳಿಸುತ್ತೇವೆ ಎಂದು ತಿಳಿಸಿದರು.
ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಆರಂಭ ಮಾಡಲು ಕಡಬ ಹೋಬಳಿ ಗಂಗಸಂದ್ರ ಗ್ರಾಮದಲ್ಲಿ 12 ಅಡಿ ಎತ್ತರದ ಪೈಪ್ ಗಳ 50 ಲಾರಿಗಳನ್ನು ರಾತ್ರೋ ರಾತ್ರಿ ತಂದು ಇಳಿಸುತ್ತಿರುವುದು ನೋಡಿದರೆ ಕಾಮಗಾರಿ ಮಾಡಿಯೇ ತೀರುತ್ತೇವೆ ಎಂಬ ಮನೋಭಾವ ಇಟ್ಟುಕೊಂಡಂತೆ ಕಾಣುತ್ತಿದೆ. ಯಾವುದೇ ಕಾರಣಕ್ಕೂ ‘ನಮ್ಮ ನೀರು ನಮ್ಮ ಹಕ್ಕು’ ಧ್ಯೇಯದೊಂದಿಗೆ ಪ್ರತಿ ಗ್ರಾಮದಿಂದ ಸಮಿತಿ ರಚಿಸಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಪೂರ್ವಭಾವಿ ಸಭೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಜಿ ಲೋಕೇಶ್, ಬಿಜೆಪಿ ಮುಖಂಡ ಬೈರಪ್ಪ, ಪ್ರಕಾಶ್, ಮಾಜಿ ಪಪಂ ಅಧ್ಯಕ್ಷ ಸುರೇಶ್ ಗೌಡ, ತಿಮ್ಮಯ್ಯ, ಪಾರ್ಥಸಾರಥಿ, ಯೋಗೀಶ್, ಸೇರಿ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ರೈತ ಮುಖಂಡರು ಉಪಸ್ಥಿತರಿದ್ದರು.