ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ಪಾಲಿನ 3ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳುವ ಸಲುವಾಗಿ ಎಕ್ಸಪ್ರೆಸ್ ಲಿಂಕ್ ಕೆನಾಲ್ ಮಾಡಲಾಗುತ್ತಿದೆ. ಆದರೆ ಮಾಗಡಿಗೆ ನೀರು ತೆಗೆದುಕೊಂಡು ಹೋಗುವುದು ಶ್ರೀರಂಗ ಏತ ನೀರಾವರಿಯಲ್ಲಿ ಇದೆ. ರಾಮನಗರ ಎಂಬುದು ಇಲ್ಲ. ಆದ್ದರಿಂದ ರಾಮನಗರಕ್ಕೆ ನೀರನ್ನು ತೆಗೆದುಕೊಂಡು ಹೋಗುವುದಿಲ್ಲ. ಆದ್ದರಿಂದ ಯಾರೂ ಕೂಡ ಆತಂಕ ಪಡಬಾರದು ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ತಿಳಿಸಿದರು. ತಾಲೂಕಿನ ಸಂತೆ ಮಾವತ್ತೂರು ಗ್ರಾಮದಲ್ಲಿ ಪದವಿಪೂರ್ವ ಕಾಲೇಜಿನ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ತುಮಕೂರು ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಕುಣಿಗಲ್ ಭಾಗದ ನೀರನ್ನು ನಾವು ಇದುವರೆಗೂ ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಹೋರಾಟ ರೂಪಿಸುವುದನ್ನು ಬಿಟ್ಟು ಸರ್ಕಾರದ ಅವಧಿಯಲ್ಲಿ ನೇರವಾಗಿ ಕುಣಿಗಲ್ಲಿಗೆ ನೀರು ತರುವ ಕೆಲಸ ಮಾಡುತ್ತಿದ್ದೇವೆ. ತುಮಕೂರು ಜಿಲ್ಲೆಯ ಯಾವುದೇ ಭಾಗದ ನೀರನ್ನು ನಾವು ಕಸಿಯುವ ಪ್ರಯತ್ನ ಮಾಡಿಲ್ಲ. ಕುಣಿಗಲ್ ತಾಲೂಕಿಗೆ ಬರಬೇಕಾದ ನೀರಿನ ಪ್ರಮಾಣವನ್ನು ತರುವ ಪ್ರಯತ್ನ ನಮ್ಮದಾಗಿದೆ ಎಂದರು. ಶ್ರೀರಂಗ ಏತ ನೀರಾವರಿ ಹೆಸರಿನಲ್ಲಿ ಮಾಗಡಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಪ್ರಸ್ತಾವನೆ ಹಾಗೂ ಕಾಮಗಾರಿ ನಡೆಯುತ್ತಿದೆ. ರಾಮನಗರಕ್ಕೆ ನೀರು ತೆಗೆದುಕೊಂಡು ಹೋಗುತ್ತೇವೆ ಎಂಬುದೇ ಶುದ್ಧ ಸುಳ್ಳು ಎಂದರು.
ಡಿನ್ನರ್ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿದ ಶಾಸಕರು ಬಿಜೆಪಿ ಅವರಿಗೆ ಡಿನ್ನರ್ ಪಾಲಿಟಿಕ್ಸ್ ಬಗ್ಗೆ ಆತಂಕ ಇದೆ. ಆದರೆ ಕಾಂಗ್ರೆಸ್ಸಗರಿಗೆ ಆ ರೀತಿಯ ಯಾವುದೇ ಆತಂಕ ಇಲ್ಲ ನನ್ನನ್ನು ಕರೆದಿದ್ದರೆ ನಾನು ಕೂಡ ಹೋಗುತ್ತಿದ್ದೆ. ಡಿನ್ನರ್ ಇಂದ ಯಾರಿಗೂ ಯಾವುದೇ ತಲೆನೋವು ತೊಂದರೆ ಇಲ್ಲ ಎಂದರು,ಡಿಕೆ ಶಿವಕುಮಾರ್ ಹಲವಾರು ಹೋರಾಟಗಳನ್ನು ಮಾಡಿಕೊಂಡ ಬಂದಂತ ನಾಯಕರಾಗಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮತ್ತು ಕಾಂಗ್ರೆಸ್ ನಲ್ಲಿ ಸಮಸ್ಯೆ ಇದ್ದಾಗ ಅದನ್ನು ಬಗೆಹರಿಸುವ ಕೆಲಸಗಳನ್ನು ಮಾಡುತ್ತಿದ್ದಾರೆ. ನಾನು ಅವರ ಸಂಬಂಧಿ ಆಗಿದ್ದು ನನಗೂ ಕೂಡ ಅವರು ಮುಖ್ಯಮಂತ್ರಿಯಾಗಬೇಕೆಂಬ ಆಸೆ ಆದರೆ ಸಿದ್ದರಾಮಯ್ಯ ಸೇರಿದಂತೆ ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಒಳಿತಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಮಾಗಡಯ್ಯ ಕೆಂಪನಹಳ್ಳಿ ಸುರೇಶ್, ಕದ್ರಾಪುರ ಜಗದೀಶ್, ರಾಜೇಂದ್ರ ಕೋಳಿ, ಬಸವರಾಜು ಬಾಲು, ಬೋರೆಗೌಡ ಸುರೇಶ್, ತಿಮ್ಮಪ್ಪ ಸೇರಿದಂತೆ ಇತರರು ಇದ್ದರು.