ತಾಲೂಕಿನ ೨೨ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಭೂಮಿ ಬಿಟ್ಟುಕೊಟ್ಟರೆ ಮುಂದಿನ ಅವಧಿಗೆ ನವಿಲೆ ಹಾಗೂ ಚಿಕ್ಕನಾಯಕನಹಳ್ಳಿ ಕೆರೆಗೆ ಹೇಮಾವತಿಯನ್ನು ಹರಿಸಲಾಗುವುದು ಎಂದರು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ತಾಲೂಕಿನ ೨೨ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಭೂಮಿ ಬಿಟ್ಟುಕೊಟ್ಟರೆ ಮುಂದಿನ ಅವಧಿಗೆ ನವಿಲೆ ಹಾಗೂ ಚಿಕ್ಕನಾಯಕನಹಳ್ಳಿ ಕೆರೆಗೆ ಹೇಮಾವತಿಯನ್ನು ಹರಿಸಲಾಗುವುದು ಎಂದರು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಶಾಸಕರ ಕಾರ್ಯಲಯದಲ್ಲಿ ನಡೆದ ಹೇಮಾವತಿ ಹೋರಾಟಗಾರರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯ ದಾಖಲೆಗಳನ್ನು ನೀಡಲು ತಹಸೀಲ್ದಾರ್ ಇದ್ದಾರೆ. ಹಣ ಕೊಡಿಸಲು ನಾನು ಇದ್ದೇನೆ. ಹಣ ನೀಡಲು ಎಸ್‌ಎಲ್‌ಒ ಇದ್ದಾರೆ. ಎಂಜಿನಿಯರ್ ಕೆಲಸ ಮಾಡಿಸಲು ಇದ್ದಾರೆ. ರೈತರು ತಮ್ಮ ದಾಖಲೆಗಳನ್ನು ಸರಿಯಾಗಿ ನೀಡಬೇಕಿದೆ ಅಷ್ಟೇ ಎಂದರು.

ರೈತರು ಸಹಕಾರ ನೀಡಿದರೆ ತಕ್ಷಣ ನೀರನ್ನು ಹರಿಸಲಾಗುವುದು ಇದರೊಂದಿಗೆ ಈಗಾಗಲೇ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಈಗಾಗಲೇ ಕಟ್ ಆಂಡ್ ಕವರ್ ಕಾಮಗಾರಿಗೆ ೧೫೦ಕೋಟಿ ರು. ಅನುದಾನ ನೀಡಿದ್ದು ಅದಕ್ಕೆ ಸಂಬಂಧಿಸಿದಂತೆ ಡಿಪಿಆರ್ ಮಾಡಲು ತಿಳಿಸಿದ್ದಾರೆ ಎಂದರು.

ತಹಸೀಲ್ದಾರ್ ಮಮತ ಎಂ ಮಾತನಾಡಿ ನಮ್ಮ ಕಂದಾಯ ಇಲಾಖೆಯಿಂದ ಈ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ಪಡೆಯಲು ಅಗತ್ಯವಿರುವಂತಹ ದಾಖಲೆಗಳನ್ನು ಪಡೆಯಲು ನೇರವಾಗಿ ನನ್ನ ಬಳಿ ಬನ್ನಿ. ನಿಮಗೆ ಸಾಧ್ಯವಾದಷ್ಟು ಬೇಗ ದಾಖಲೆಗಳನ್ನು ನೀಡುತ್ತೇವೆ. ಪರಿಹಾರದ ಹಣವನ್ನು ಪಡೆಯಲು ಸಾಧ್ಯವಿಲ್ಲವೆಂದು ನಿರಾಕರಿಸಿದರೆ, ಇಲ್ಲವೆ ಭೂಮಿಯ ವಾರಸುದಾರರ ಬಗ್ಗೆ ಗೊಂದಲಗಳಿದ್ದು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದರೆ ಅಂತಹವರ ಪರಿಹಾರದ ಹಣವನ್ನು ನ್ಯಾಯಾಲಯದಲ್ಲಿ ಠೇವಣಿ ಮಾಡುವ ಮೂಲಕ ಈ ಯೋಜನೆಯ ಕೆಲಸವನ್ನು ಮಾಡಬಹುದು ಎಂದರು.

ಕಾವೇರಿ ನೀರಾವರಿ ನಿಗಮದ ಇಇ ಚಂದ್ರಶೇಖರ್ ಮಾತನಾಡಿದರು. ಸಭೆಯಲ್ಲಿ ರೈತ ಮುಖಂಡರುಗಳು ಮಾತನಾಡಿ ಈಗಾಗಲೇ ಈ ಯೋಜನೆ ಮಂಜೂರಾಗಿ ದಶಕಗಳೇ ಕಳೆದಿವೆ ಆದರೂ ಇನ್ನು ಇದು ಸಂಪೂರ್ಣವಾಗಿಲ್ಲ. ಇನ್ನಾದರೂ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ನಮ್ಮ ಭಾಗದ ರೈತರನ್ನು ಕಾಪಾಡುವಂತೆ ಒತ್ತಾಯಿಸಿದರು. ಸಭೆಯಲ್ಲಿ ಕಾವೇರಿ ನೀರಾವರಿ ನಿಗದಮ ಎಇಇ ಪ್ರಭಾಕರ್, ಎಇ ಸೌಜನ್ಯ, ಭೂ ಸ್ವಾಧೀನ ಇಲಾಖೆಯ ಆರ್ ಐ ಕೆಂಪರಾಜು ಇತರರಿದ್ದರು.