ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುರಕ್ತವನ್ನಾದರೂ ಕೊಟ್ಟು ಹೇಮಾವತಿ ನೀರನ್ನು ಉಳಿಸಿಕೊಳ್ಳುತ್ತೇವೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು.ಗುಬ್ಬಿ ತಾಲೂಕಿನ ರಾಂಪುರದ ಬಳಿ ಎಕ್ಸ್ ಪ್ರೆಸ್ ಪೈಪ್ ಲೈನ್ ಕೆನಾಲ್ ಕಾಮಗಾರಿ ವೀಕ್ಷಿಸಿ ಮಾತನಾಡಿದರು. ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ 24.5 ಟಿಎಂಸಿ ನೀರಿನಲ್ಲಿ ಒಂದು ತೊಟ್ಟು ಹನಿ ನೀರನ್ನು ಕೂಡ ರಾಮನಗರ ಜಿಲ್ಲೆಗೆ ನೀರು ಹರಿಸಲು ಬಿಡುವುದಿಲ್ಲ. ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಧಮ್, ತಾಕತ್ತಿದ್ದರೆ ತುಮಕೂರು ಜಿಲ್ಲೆಯ ನೀರನ್ನು ಮುಟ್ಟಿ ನೋಡಲಿ ಎಂದು ಸವಾಲ್ ಹಾಕಿದರು.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ರಾಮನಗರ ಜಿಲ್ಲೆಯ ಬಗ್ಗೆ ಹಿತಾಸಕ್ತಿ ಇದ್ದರೆ ಹೆಚ್ಚುವರಿ ನೀರನ್ನು ಹಂಚಿಕೆ ಮಾಡಿಕೊಂಡು ಪ್ರಸ್ತುತ ಇರುವ ನಾಲೆಯಲ್ಲಿ ತೆಗೆದುಕೊಂಡು ಹೋಗಲಿ ಇದಕ್ಕೆ ನಮ್ಮ ವಿರೋಧವಿಲ್ಲ. ಆದರೆ ನಮ್ಮ ಜಿಲ್ಲೆಗೆ ಹಂಚಿಕೆಯಾಗಿರುವ ನೀರಿನಲ್ಲಿ ಒಂದು ತೊಟ್ಟು ಹನಿಯನ್ನು ಕೂಡ ನೀಡಲು ನಾವು ಸಿದ್ಧವಿಲ್ಲ. ತುಮಕೂರು ಜಿಲ್ಲೆಯ ಜನತೆ ನರಸತ್ತವರಲ್ಲ, ನಮ್ಮ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ಎಚ್ಚರಿಸಿದರು.ಬೆಳಗುಂಬ ಪ್ರಭಾಕರ್ ಮಾತನಾಡಿ, ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಎಕ್ಸ್ ಪ್ರೆಸ್ ಪೈಪ್ ಲೈನ್ ಕೆನಾಲ್ ಮೂಲಕ ನೀರನ್ನು ತೆಗೆದು ಕೊಂಡು ಹೋಗಲು ಒಂದು ಅಡಿ ಜಾಗವನ್ನು ಕೂಡ ಆಗಿಯಲು ಬಿಡುವುದಿಲ್ಲ. ಈ ಯೋಜನೆ ಜಾರಿಯಾದರೆ ಗುಬ್ಬಿ, ತುರುವೇಕೆರೆ, ಸಂಪಿಗೆ, ನಿಟ್ಟೂರು, ತುಮಕೂರು ನಗರ, ತುಮಕೂರು ಗ್ರಾಮಾಂತರ, ಮಧುಗಿರಿ, ಶಿರಾ, ಕೊರಟಗೆರೆ ಭಾಗಕ್ಕೆ ಒಂದಿಂಚು ನೀರು ಕೂಡ ಹರಿಯುವುದಿಲ್ಲ ಎಂದರು.
ಪೈಪ್ ಲೈನ್ ನಡೆಯುತ್ತಿರುವ ಜಾಗವು ತಗ್ಗು ಪ್ರದೇಶದಲ್ಲಿದ್ದು, ಅದು ಅಲ್ಲದೆ ಪೈಪ್ ಲೈನ್‌ನನ್ನು 20 ಅಡಿ ಆಳದಲ್ಲಿ ಅಳವಡಿಸುವುದರಿಂದ (ಗ್ರಾವಿಟಿ) ಗುರುತ್ವಾಕಾರ್ಷಣೆ ಆ ಭಾಗಕ್ಕೆ ಹೆಚ್ಚಾಗಿರುವುದರಿಂದ ಮೇಲ್ಭಾಗದ 100 ಕಿ.ಮೀ ವ್ಯಾಪ್ತಿಗೆ ಒಂದಿಂಚು ನೀರು ಕೂಡ ಹರಿಯಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು.ಈ ಯೋಜನೆಯನ್ನು ಪಕ್ಷಾತೀತವಾಗಿ ವಿರೋಧಿಸಬೇಕು. ಜಿಲ್ಲೆಯ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ಬಿಟ್ಟರೆ ನಮ್ಮ ಗುಂಡಿಯನ್ನು ನಾವೇ ತೋಡಿಕೊಂಡಂತಾಗುತ್ತದೆ. ಜಿಲ್ಲೆಯ ಜನರ ಬದುಕು ಅಸನಾಗಬೇಕು. ಮುಂದಿನ ಪೀಳಿಗೆಗೆ ಒಂದು ಹನಿ ನೀರು ಸಿಗುವುದಿಲ್ಲ. ಆದ್ದರಿಂದ ಈ ಯೋಜನೆಯನ್ನು ಸಮರ್ಪಕವಾಗಿ ವಿರೋಧಿಸುವಂತಾಗಬೇಕು. ಮಾಜಿ ಸಚಿವ ಸೊಗಡು ಶಿವಣ್ಣ ಅವರ ನೇತೃತ್ವದಲ್ಲಿ ಮೇ 16 ರಂದು ಕರೆ ಕೊಟ್ಟಿರುವ ಪ್ರತಿಭಟನೆಗೆ ಸಹಸ್ರಾರು ಮಂದಿ ಭಾಗವಹಿಸಿ, ಈ ಯೋಜನೆಯನ್ನು ವಿರೋಧಿಸಬೇಕು ಎಂದು ಮನವಿ ಮಾಡಿದರು.
ಯೋಜನೆ ಜಾರಿಗಾಗಿ ಈಗಾಗಲೇ ಹತ್ತಾರು ಕಿಲೋಮೀಟರ್ ಕಾಮಗಾರಿ ನಡೆದಿದ್ದು, ರೈತರ ಹಿಡುವಳಿ ಜಮೀನುಗಳಲ್ಲಿರುವ ಅಡಿಕೆ, ತೆಂಗು, ಮಾವು ಇತರ ಬೆಳೆಗಳನ್ನು ನೋಡದೆ ಮಣ್ಣನ್ನು ಅಗೆದು ಹಾಕಿದ್ದು, ರೈತರಿಗೆ ಲಕ್ಷಾಂತರ ರೂಪಾಯಿಗಳ ನಷ್ಟ ಉಂಟಾಗಿದೆ. ಇದ್ಯಾವುದನ್ನು ಲೆಕ್ಕಿಸದೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೆನಾಲ್ ಕಾಮಗಾರಿ ಪ್ರಾರಂಭಿಸಿದ್ದು ಅಕ್ಷಮ್ಯ ಅಪರಾಧ ಎಂದರು.ಸಿ ಎಸ್ ಪುರ ಹಾಗೂ ಇನ್ನಿತರ ಕೆರೆಗಳಲ್ಲಿ ಪೈಪ್ ಲೈನ್ ಕಾಮಗಾರಿ ಹವ್ಯಾಹತವಾಗಿ ನಡೆದಿದ್ದು, ನಮ್ಮ ರೈತಾಪಿ ಬಂಧುಗಳು ಕೆರೆಯಲ್ಲಿ ಮಣ್ಣು ಹೊಡೆದುಕೊಂಡರೆ ಕೇಸ್ ದಾಖಲಿಸುವುದಾಗಿ ಇಲ್ಲಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳುತ್ತಾರೆ. ಆದರೆ ಯಾವುದೇ ಪೂರ್ವಾನುಮತಿ ಪಡೆಯದೆ ಕೆರೆಯಲ್ಲಿ ಪೈಪ್ ಲೈನ್ ಕಾಮಗಾರಿ ತೆಗೆದುಕೊಂಡು ಹೋಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿಲ್ಲ ಏಕೆ ಎಂದು ಪ್ರಶ್ನಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಪಂಚಾಕ್ಷರಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರುಗಳು ಹಾಗೂ ನೂರಾರು ರೈತರು ಸೇರಿದ್ದರು.