ಸಾರಾಂಶ
- ಉಸಿರಿರೋವರೆಗೂ ಡಾ.ಶಿವಮೂರ್ತಿ ಶ್ರೀಗಳೇ ನಮ್ಮ ಗುರುಗಳು: ಖಡಕ್ ಸಂದೇಶ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳೇ ಶ್ರೀಪೀಠದಲ್ಲಿ ಮುಂದುವರಿಯುವಂತೆ ಒತ್ತಾಯಿಸಿ ತಾಲೂಕಿನ ಹೆಮ್ಮನಬೇತೂರು ಗ್ರಾಮದ ಶ್ರೀಮಠದ ಭಕ್ತರು ರಕ್ತದಲ್ಲಿ ಸಹಿ ಮಾಡುವ ಮೂಲಕ ಗುರುಗಳಿಗೆ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ.ತಾಲೂಕಿನ ಹೆಮ್ಮನಬೇತೂರು ಗ್ರಾಮದ ದೇವಸ್ಥಾನ ಮುಂಭಾಗದಲ್ಲಿ ಶ್ರೀಮಠದ ಭಕ್ತರು ಸಿರಿಗೆರೆ ಶ್ರೀಗಳ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವುದು, ವದಂತಿ ಹರಡುತ್ತಿರುವುದು, ಕೆಲ ಮುಖಂಡರ ವರ್ತನೆ ಖಂಡಿಸಿದರು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳೇ ಉಸಿರಿರುವವರೆಗೂ ಶ್ರೀಪೀಠದ ಗುರುಗಳಾಗಿ ಮುಂದುವರಿಯಬೇಕೆಂದು ಒತ್ತಾಯಿಸಿ ರಕ್ತದಲ್ಲಿ ಸಹಿ ಮಾಡಿ, ಸಿರಿಗೆರೆ ಶ್ರೀಮಠಕ್ಕೆ ಪತ್ರವನ್ನು ಕಳಿಸಿಕೊಟ್ಟಿದ್ದಾರೆ.
ಗ್ರಾಮದ ಮುಖಂಡರು ಮಾತನಾಡಿ, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳೇ ಪೀಠದಲ್ಲಿ ಮುಂದುವರಿಯಬೇಕೆಂಬ ಒಮ್ಮತದ ನಿರ್ಣಯವನ್ನು ಊರಿನ ಎಲ್ಲರೂ ಕೈಗೊಂಡಿದ್ದೇವೆ. ಅದನ್ನು ರಕ್ತದಲ್ಲಿ ಸಹಿ ಮಾಡುವ ಮೂಲಕ ಗುರುಗಳಿಗೆ ಮನವಿ ಮಾಡುತ್ತಿದ್ದೇವೆ. ಶ್ರೀ ಮಠದ ವಿರುದ್ಧ, ಗುರುಗಳ ವಿರುದ್ಧ ಕೆಲವರು ಸುಳ್ಳು ಆರೋಪ, ವದಂತಿ ಹರಡುತ್ತಿದ್ದು, ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಹೇಳಿದರು.ದಶಕಗಳಿಂದಲೂ ಇಲ್ಲದ ಗೊಂದಲಗಳು, ಸುಳ್ಳು ಆರೋಪಗಳು, ಪಿತೂರಿ ಈಗ ಹೆಚ್ಚಾಗುತ್ತಿದೆ. ನಾವೆಲ್ಲರೂ ಶ್ರೀಗಳ ಪರ ನಿಲ್ಲುವ ಮೂಲಕ ಸರಿಯಾದ ಉತ್ತರ ನೀಡೋಣ. ಗುರುಗಳ ನೇತೃತ್ವದಲ್ಲೇ ಸಮಾಜ ಮುಂದುವರಿಯಬೇಕೆಂಬ ಆಶಯದಿಂದ ರಕ್ತದಲ್ಲಿ ಸಹಿ ಮಾಡಿ, ನಿರ್ಣಯ ಕೈಗೊಂಡಿದ್ದೇವೆ. ಯಾರ ಒತ್ತಡ, ಪ್ರಭಾವಕ್ಕೂ ಮಣಿಯದೇ, ಸ್ವಯಂಪ್ರೇರಿತರಾಗಿ ನಾವು ಸಭೆ ಮಾಡಿ, ಶ್ರೀಗಳ ಪರ ನಿಂತಿದ್ದೇವೆ. ಸಮಾಜದಲ್ಲಿ ವಿನಾಕಾರಣ ಸುಳ್ಳು ಹೇಳುತ್ತಾ, ಮಠದ ಹೆಸರು ಕೆಡಿಸಲು ಯತ್ನಿಸುತ್ತಿರುವವರು ಸುಮ್ಮನಿರಬೇಕು. ಇಲ್ಲದಿದ್ದರೆ ನಾವೂ ತಿರುಗೇಟು ನೀಡುವ ಕಾಲ ದೂರ ಇಲ್ಲ ಎಂದರು.
20ಕ್ಕೂ ಹೆಚ್ಚು ಏತನೀರಾವತಿ ಯೋಜನೆಗಳ ಸಾಧನೆ:ಕೇವಲ ಹೆಮ್ಮನಬೇತೂರು ಗ್ರಾಮ ಮಾತ್ರವಲ್ಲ, ಸುತ್ತಲಿನ ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ ಆಧುನಿಕ ಭಗೀರಥರು ಗುರುಗಳು. ಎಷ್ಟೋ ಹಳ್ಳಿಗಳಲ್ಲಿ ಇಂದು ನೀರಾವರಿ ಸೌಲಭ್ಯ ಕಂಡಿದ್ದರೆ ಅದಕ್ಕೆ ಸಿರಿಗೆರೆ ಶ್ರೀಗಳ ಪರಿಶ್ರಮ ಇದೆ. ಶ್ರೀಗಳ ಬದಲಾವಣೆ ಮಾಡಬಾರದೆಂಬ ನಿರ್ಣಯ ಕೈಗೊಂಡು, ಶ್ರೀಮಠ ಮತ್ತು ಗುರುಗಳ ವಿರುದ್ಧ ಇರುವವರ ಷಡ್ಯಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಂದಾಗಿ 20ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳಡಿ ಸಾವಿರಾರು ಕೆರೆಗಳಿಗೆ ನೀರು ತುಂಬಿಸುವ ಸತ್ಕಾರ್ಯವಾಗಿದೆ. ಸಮಾಜಮುಖಿ ನಿಸ್ವಾರ್ಥ ಮುಂದಾಳತ್ವ ಎಷ್ಟು ಅವಶ್ಯಕ, ಅದರಲ್ಲೂ ಸರಕಾರ ಕೈಗೊಳ್ಳುವ ಜನಪರ ಯೋಜನೆಗಳು ಪರಿಣಾಮಕಾರಿ ಅನುಷ್ಟಾನದ ವಿಚಾರದಲ್ಲಿ ಶ್ರೀಮಠ ಹಾಗೂ ಗುರುಗಳ ಕಾರ್ಯ ವೈಖರಿ ಮಹತ್ವದ್ದಾಗಿದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.
ಸಭೆಯಲ್ಲಿ ಎಸ್.ಆರ್. ಪ್ರಕಾಶ, ನಾಗರಾಜಪ್ಪ, ಎಸ್.ಎನ್. ಕಲ್ಲೇಶಪ್ಪ, ಎನ್.ಎಂ. ಪ್ರಸನ್ನ, ಎಸ್.ಬಸವರಾಜ, ಬಿ.ಎಸ್. ಸಚಿನ್, ಪಂಪಣ್ಣ, ಸಿ.ಎಸ್. ಪ್ರಕಾಶ, ಎಚ್.ಆರ್. ಶಿವಕುಮಾರ, ಇ.ರಮೇಶ, ಕರಿಬಸಣ್ಣ, ಎಸ್.ಎಸ್. ಸೋಮಶೇಖರ, ಯು.ಆರ್.ಎಸ್. ಶ್ರೀನಿವಾಸ್, ಜಿ.ಎಸ್. ರಾಜಶೇಖರ, ತಿಪ್ಪೇಸ್ವಾಮಿ, ಪರಿಶಿಷ್ಟ ಪಂಗಡ ಸಮಾಜದ ಮುಖಂಡ ಟಿ.ಡಿ. ರಮೇಶ, ಬಕ್ಕೇಶ್ ಹಾಗೂ ಶ್ರೀ ಮಠದ ಭಕ್ತರು ಇದ್ದರು.- - - -20ಕೆಡಿವಿಜಿ6, 7, 8, 9:
ಉಸಿರು ಇರುವವರೆಗೂ ಶ್ರೀಗಳೇ ಗುರುಗಳಾಗಿ ಮುಂದುವರಿಯಬೇಕೆಂದು ಬೆಂಬಲಿಸಿ ದಾವಣಗೆರೆ ತಾಲೂಕಿನ ಹೆಮ್ಮನಬೇತೂರು ಭಕ್ತರು ಸಿರಿಗೆರೆ ಶ್ರೀಗಳ ಪರವಾಗಿ ರಕ್ತದಲ್ಲಿ ಸಹಿ ಮಾಡಿ, ಬೆಂಬಲಿಸಿದ ಪತ್ರ.;Resize=(128,128))
;Resize=(128,128))