ಸಾರಾಂಶ
ಕನ್ನಡಪ್ರಭ ವಾರ್ತೆ ಕುಂದಾಪುರ
ಜನರಿಗೆ ಅನುಕೂಲವಾಗುವ ಒಳ್ಳೆಯ ಯೋಜನೆಗಳು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಅಗತ್ಯವಾಗಿ ಬೇಕು. ಯಾವುದಾದರೂ ಸಮಾಜ ಕಂಟಕ ಯೋಜನೆಗಳು ಬಂದಿದ್ದರೆ, ಅದನ್ನು ಜೀವ ಕೊಟ್ಟಾದರೂ ನಿಲ್ಲಿಸಬೇಕಾದ್ದು ಜಾಗೃತ ಸಮಾಜದ ಕರ್ತವ್ಯ ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ.ಹೇರಂಜಾಲಿನಲ್ಲಿ ಮಂಗಳವಾರ ಗುಡೆ ದೇವಸ್ಥಾನ ಏತ ನೀರಾವರಿ ಯೋಜನೆಯ ಕುರಿತು ನಡೆದ ಪಂಚ ಗ್ರಾಮದ ‘ಜೀವನದಿ ನೀರು ಉಳಿಸಿ’ ಮಾಹಿತಿ ಸಭೆಯಲ್ಲಿ ಅವರು ಮಾತನಾಡಿದರು.
ಯಾವುದೇ ಯೋಜನೆಯ ಸಾಧಕ-ಬಾಧಕಗಳ ಪೂರ್ವಾಪರ ವಿಚಾರ ವಿಮರ್ಶೆಯನ್ನು ಮಾಡಿದ ಬಳಿಕವಷ್ಟೇ ಯೋಜನೆಯ ಕುರಿತಾದ ಒಂದು ಹಂತಕ್ಕೆ ಬರಬೇಕಾಗಿದೆ. ಸ್ಥಳಿಯ ಪ್ರಮುಖರಾದ 8-10 ಮಂದಿ ಇಲಾಖೆಯ ಅಧಿಕಾರಿಗಳೊಂದಿಗೆ ಕುಳಿತುಕೊಂಡು ಸಮಾಲೋಚನೆ ನಡೆಸಿ, ಜನರಿಗೆ ಅನಾನುಕೂಲವಾಗುವ ಅಂಶಗಳಿದ್ದಲ್ಲಿ ಮಾತ್ರ, ಅದರ ಬದಲಾವಣೆಗೆ ಬೇಡಿಕೆ ಮಂಡಿಸಬೇಕು. ಅದಕ್ಕೆ ಸ್ಪಂದನೆ ದೊರಕದೆ ಇದ್ದಾಗ, ಪ್ರತಿಭಟನೆಯ ದಾರಿ ಹಿಡಿಯಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸಭೆಗೆ ಶಾಸಕರು ಬರಬೇಕು, ಇಲ್ಲದೆ ಇದ್ದರೆ ಸರಿ ಇರೋದಿಲ್ಲ ಎನ್ನುವ ವಿಚಾರಗಳನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಬರವಣಿಗೆ ಮಾಡುವುದು ಸರಿಯಾದ ಬೆಳವಣಿಗೆ ಅಲ್ಲ. ಮಾಹಿತಿ ಸಭೆ ಹಾಗೂ ಪ್ರತಿಭಟನೆ ಸಭೆಗೆ ವಿಭಿನ್ನ ವ್ಯಾಖ್ಯಾನಗಳಿರುತ್ತದೆ, ಇಷ್ಟೊಂದು ಜನರನ್ನು ಸೇರಿಸಿಕೊಂಡಲ್ಲಿ ಅದು ಮಾಹಿತಿ ವಿನಿಮಯದ ಸಭೆ ಎನಿಸಿಕೊಳ್ಳುವುದಿಲ್ಲ ಎಂದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾತಿಯಾದ ಅಂದಾಜು 70 ಕೋಟಿ ರೂ. ವೆಚ್ಚದ ಯೋಜನೆಯ ಕಾಮಗಾರಿಗಳು ಆರಂಭವಾಗಿ ಈಗಾಗಲೇ 2-3 ವರ್ಷಗಳು ಸಂದಿದೆ. ಆರಂಭದಲ್ಲಿಯೇ ಯೋಜನೆಯ ಕುರಿತು ಯಾವುದೇ ಆಕ್ಷೇಪಗಳಿದ್ದರೂ, ಅದಕ್ಕೆ ತಾಂತ್ರಿಕ ಕಾರಣಗಳನ್ನು ಮನದಟ್ಟು ಮಾಡಿ, ಗ್ರಾಮಕ್ಕೆ ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳಲು ಅವಕಾಶಗಳಿತ್ತು. ಅದಾದ ನಂತರ ಯೋಜನೆಯ ಮಂಜೂರಾತಿ ಹಂತದಲ್ಲಿಯೂ ಬದಲಾವಣೆಗೆ ಅವಕಾಶಗಳಿದ್ದವು, ಇದೀಗ ಕಾಮಗಾರಿ ಅನುಷ್ಟಾನದ ಹಂತದಲ್ಲಿ ಇದ್ದೇವೆ ಎಂದರು.ಈ ಯೋಜನೆಯಿಂದ ಪರಿಸರದ ಐದು ಗ್ರಾಮಗಳಿಗೂ ಅನುಕೂಲವಾಗುತ್ತದೆ. ಈ ಸಂದರ್ಭದಲ್ಲಿ ಒಟ್ಟಾರೆ ಯೋಜನೆಯ ಕುರಿತು ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಆದರೆ ಊರಿಗೆ ಯೋಜನೆಗಳು ಬೇಕು, ಸಣ್ಣ-ಪುಟ್ಟ ವ್ಯತ್ಯಾಸಗಳು ಇದ್ದಲ್ಲಿ ಅದಕ್ಕೆ ಪರಿಹಾರಗಳು ಬೇಕು. ಅಧಿಕಾರಿಗಳು ವಾದಕ್ಕೆ ಹೋಗದೆ, ಜನರಿಗೆ ಮನವರಿಕೆ ಮಾಡಬೇಕು. ಕೊಂಗಾಟ ಹಾಗೂ ವೈರಾಗ್ಯ ಇಲ್ಲದೆ ಮಾತುಕತೆಯೊಂದಿಗೆ ವಿಚಾರಗಳನ್ನು ಬಗೆಹರಿಸಿಕೊಳ್ಳುವಂತೆ ಶಾಸಕರು ಸಲಹೆ ನೀಡಿದರು.
ಅಭಿಪ್ರಾಯ ಮಂಡಿಸಿದ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು, ಸರ್ಕಾರದ ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಧಿಕಾರಿಗಳ ತಪ್ಪಿಗೆ ರೈತರು ಹೊಣೆಗಾರರಾಗಬಾರದು. ಡ್ಯಾಂನ ಸಾಧಕ-ಬಾಧಕಗಳ ಕುರಿತು ಸ್ಥಳೀಯರ ಅಭಿಪ್ರಾಯಗಳಿಗೂ ಮನ್ನಣೆ ನೀಡಬೇಕು. ಮೂಲ ಯೋಜನೆ ಬದಲಾಯಿಸಕೂಡದು ಎಂದರು.ಸ್ಥಳೀಯ ಪ್ರಮುಖರಾದ ಎಸ್.ಪ್ರವೀಣ್‍ಕುಮಾರ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ ಸ್ಪೂರ್ತಿ, ವೇದ ಶೆಟ್ಟಿ ಮುಂತಾದದವರು ಮಾಹಿತಿ ಹಂಚಿಕೊಂಡರು. ಯೋಜನೆಯ ಪರ ಹಾಗೂ ವಿರೋಧವಾಗಿ ಪರಸ್ಪರ ಆಕ್ಷೇಪ ಹಾಗೂ ಮಾತಿನ ಚಕಮಕಿಗಳು ನಡೆದವು. ಒಂದು ಹಂತದಲ್ಲಿ ವಾಗ್ವಾದ ವಿಕೋಪಕ್ಕೆ ಹೋಗಿ, ಕೈ ಕೈ ಮಿಲಾಯಿಸುವ ಹಂತವನ್ನು ತಲುಪಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಪೋಲಿಸರು ಪರಿಸ್ಥಿತಿ ತಿಳಿಗೊಳಿಸಿದರು. ಬೈಂದೂರು ಪಿಎಸ್‍ಐ ತಿಮ್ಮೇಶ್ ಹಾಗೂ ಕೊಲ್ಲೂರು ಠಾಣಾಧಿಕಾರಿ ವಿನಯ್ ಕೊರ್ಲಹಳ್ಳಿ ನೇತ್ರತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.
ಸಣ್ಣ ನೀರಾವರಿ ಇಲಾಖೆ ಸಹಾಯಕ ಅಭಿಯಂತರ ಪುನಿತ್, ಕಾಲ್ತೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ ಶೆಟ್ಟಿ ಬಟ್ನಾಡಿ, ಕಂಬದಕೋಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ದೇವಾಡಿಗ, ಉಪಾಧ್ಯಕ್ಷ ಗಣೇಶ ದೇವಾಡಿಗ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಿಜಯ್‌ಕುಮಾರ ಶೆಟ್ಟಿ ಕಾಲ್ತೋಡು, ಪಂಚಾಯತ್ ಪಿಡಿಒಗಳು ಹಾಗೂ ನೂರಾರು ಸಂಖ್ಯೆಯ ಗ್ರಾಮಸ್ಥರು ಸಭೆಯಲ್ಲಿ ಇದ್ದರು......................
ಯೋಜನೆಯ ವಿರೋಧವಾಗಿ ಇರುವವರು ಕೈ ಮೇಲೆ ಎತ್ತುವಂತೆ ಶಾಸಕರು ಮನವಿ ಮಾಡಿದಾಗ, ಸಭೆಯಲ್ಲಿದ್ದ ಬಹುಸಂಖ್ಯೆಯ ಜನರು ಯೋಜನೆಯನ್ನು ಬೆಂಬಲಿಸಿ ಮೌನವಾಗಿ ಕುಳಿತಿದ್ದರು. ಬೆರಳೆಣಿಕೆಯ ಜನರು ಮಾತ್ರ ಕೈ ಮೇಲಕ್ಕೆ ಎತ್ತಿದ್ದರು.