ಸಾರಾಂಶ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ನಾನು ಯಾವುದೇ ವಿರೋಧ ಮಾಡಿಲ್ಲ. ವಿರೋಧಿಸುವಂತಹ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ನಾನು ಯಾವುದೇ ವಿರೋಧ ಮಾಡಿಲ್ಲ. ವಿರೋಧಿಸುವಂತಹ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಮುರಗೇಶ್ ನಿರಾಣಿ ,ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಎಲ್ಲರೂ ಪ್ರಚಾರಕ್ಕೆ ಬರುತ್ತಾರೆ. ಈಗಾಗಲೇ ಗೋಕಾಕ, ಅರಭಾವಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದ್ದು ಜಾರಕಿಹೊಳಿ ಸಹೋದರರು ನನ್ನ ಜತೆಗೆ ಬಂದಿದ್ದರು. ಗೋಕಾಕ, ಅರಭಾವಿ ಜನ ಅಭೂತಪೂರ್ವ ಬೆಂಬಲ ನೀಡಿದ್ದರು. ಹೆಚ್ಚಿನ ಮತಗಳ ಲೀಡ್ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಚುನಾವಣೆ ನಡೆಯುತ್ತಿದೆ. ಜನರೇ ಸ್ವಯಂಪ್ರೇರಿತರಾಗಿ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಲಿ ಎಂದು ಹಾರೈಸುತ್ತಿದ್ದಾರೆ. ರಾಷ್ಟ್ರೀಯ ವಿಚಾರಗಳು ಚುನಾವಣೆಯಲ್ಲಿ ಚರ್ಚೆ ಆಗಬೇಕು. ಇದನ್ನು ಬಿಟ್ಟು ಸಣ್ಣಪುಟ್ಟ ವಿಷಯಗಳನ್ನು ಚರ್ಚೆ ಮಾಡಲಾಗುತ್ತಿದೆ. ಮೋದಿ ಸಾಧನೆ ಬಗ್ಗೆ ನಾವು ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದರು.ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದಾಗಿನಿಂದಲೂ ದೇಶದಲ್ಲಿ ಹೊಸ ಬದಲಾವಣೆ ನಿರ್ಮಾಣವಾಗಿದೆ. ತಾವು ಆಶೀರ್ವದಿಸಿ ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲು ಆಶೀರ್ವಾದ ಮಾಡಬೇಕು ಎಂದು ಕೋರಿದರು.