ಪುರಾತನ ವಸ್ತು ವೀಕ್ಷಣೆಗೆ ಇಲ್ಲಿದೆ ಅವಕಾಶ!

| Published : Jan 23 2025, 12:46 AM IST

ಸಾರಾಂಶ

ಹೊಸ ತಂತ್ರಜ್ಞಾನದ ಯುಗದಲ್ಲಿ ಪುರಾತನ ಬೆಲೆಬಾಳುವ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗಿರುವ ಬಸವರಾಜ ದಲಾಲ್ ಪರಿವಾರದ ಶ್ರಮ ಶ್ಲಾಘನೀಯ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬ್ರಿಟೀಷರ ಕಾಲಘಟ್ಟದಲ್ಲಿನ ಹಾಗೂ ಇತಿಹಾಸ ಕಾಲದ ಪುರಾತನ ವಸ್ತುಗಳಾದ ಫೋಟೋ ತೆಗೆಯುವ ಮಾದರಿ, ರೇಡಿಯೋಗಳು, ಫೋನ್‌ಗಳು, ಕುಡಿಯುವ ನೀರಿನ ಪಾತ್ರೆಗಳು, ಹಳೇ ದೀಪದ ಲಾಂದ್ರ, ಮೋಟಾರ್‌ ಸೈಕಲ್‌, ಸೈಕಲ್‌ಗಳು, ಪ್ರಾಚೀನ ಟೆಲಿಸ್ಕೋಪ್, ಹಳೇ ಕಾಲದಲ್ಲಿ ಬಳಕೆಯಾಗುತ್ತಿದ್ದ ಕಾರುಗಳು, ರಾಜರು ಬಳಸುತ್ತಿರುವ ಅನೇಕ ವಸ್ತುಗಳನ್ನು ನೋಡಬೇಕೆಂದರೆ ನೀವು ಇಲ್ಲಿನ ಉದ್ಯಮಿ ಬಸವರಾಜ ದಲಾಲ್ ನಿವಾಸಕ್ಕೇ ಬರಬೇಕು.

ಇವರ ಸಂಗ್ರಹಾಲಯದಲ್ಲಿ ಹಳೆಯ ಕಾಲದ ಇತಿಹಾಸ ಹೇಳುವ ನಾಣ್ಯಗಳು, ಹಳೆಯ ಕಾಲದ ಕ್ಯಾಮೆರಾಗಳು, ನಿತ್ಯ ಬಳಕೆಯಾಗುತ್ತಿದ್ದ ಅಡುಗೆ ಮನೆಯ ಮತ್ತು ಇತರೆ ಬಳಕೆಯ ಅಂದಿನ ಕಾಲದ ಪರಿಕರಗಳು, ಸಾರ್ವಜನಿಕ ಪ್ರಾಚೀನ ಬೀದಿ ದೀಪಗಳು ಸೇರಿದಂತೆ ಅತ್ಯಂತ ದುಬಾರಿಯಾದ ಪ್ರಾಚೀನ ಕಾರುಗಳು ಮತ್ತು ಇಂದಿಗೂ ದೇಶದ ಪ್ರಮುಖ ಉದ್ಯಮಿ ಮುಖೇಶ ಅಂಬಾನಿ ಕುಟುಂಬ ಬಳಸುತ್ತಿರುವ ಜಪಾನ್ ದೇಶದ ತೋಷಿಬಾ ಕಂಪನಿ ಕುಟುಂಬದ ಬಳಕೆಗೆ ಯೋಗ್ಯವಾಗಿರುವ ವ್ಯಾಗನ್ ಮಾದರಿಯ ವಾಹನ ಸೇರಿದಂತೆ ಸಣ್ಣ ಪುಟ್ಟ ದಿನ ಬಳಕೆಯ ವಸ್ತುಗಳು ಕೂಡ ಬಸವರಾಜ ದಲಾಲ ಸಂಗ್ರಹಣೆಯಲ್ಲಿವೆ. ಕಾರುಗಳು ಈಗಲೂ ಸುವ್ಯವಸ್ಥಿತ ಸ್ಥಿತಿಯಲ್ಲಿದ್ದು ಬಳಕೆ ಯೋಗ್ಯವಾಗಿರುವುದು ಇಲ್ಲಿನ ಹೆಗ್ಗಳಿಕೆ. ಇವುಗಳ ನಿರ್ವಹಣಾ ವೆಚ್ಚ ಭರಿಸಿದರೂ ಅದರಿಂದ ನಮಗೆ ಮಾನಸಿಕ ಸಂತೃಪ್ತಿ ಇದೆ ಎಂಬುದು ದಲಾಲ್‌ ಸಹೋದರರ ಮನದಾಳದ ಮಾತು.

ರಬಕವಿ ದಲಾಲ ಪರಿವಾರದವರ ಫಾರ್ಮಹೌಸ್‌ನಲ್ಲಿ ತೀರ ಹಳೆ ಕಾಲದ ಅನೇಕವಸ್ತುಗಳನ್ನು ಮಹಾಲಿಂಗಪುರದ ಹೃದ್ರೋಗತಜ್ಞ ಡಾ.ವಿಜಯ ಹಂಚಿನಾಳ ವೀಕ್ಷಿಸಿ, ದಲಾಲ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಡಾ.ಮಹಾವೀರ ದಾನಿಗೊಂಡ, ಡಾ.ವಿಜಯ ಹಂಚಿನಾಳ, ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ, ಬಸವರಾಜ ಕೊಣ್ಣೂರ, ಪ್ರಕಾಶ ದಲಾಲ, ಶ್ರೀಶೈಲ ದಲಾಲ, ಗಣಪತರಾವ ಹಜಾರೆ, ಡಾ.ಜಿ.ಎಚ್.ಚಿತ್ತರಗಿ, ಡಾ.ಅನೂಪ ಹಂಚಿನಾಳ, ಡಾ.ಪುಷ್ಪದಂತ ದಾನಿಗೊಂಡ, ಡಾ. ವಿನೋದ ಮೇತ್ರಿ, ಅಮಿತ್ ನಾಶಿ, ವಿಜಯ ನಾಶಿ, ಬಾಬಾಗೌಡ ಪಾಟೀಲ, ರಾಮಣ್ಣ ಹುಲಕುಂದ, ಮಹಾದೇವ ಕೋಟ್ಯಾಳ, ಗಜಾನನ ವಜ್ರಮಟ್ಟಿ, ಪ್ರಶಾಂತ ಪಾಲಬಾಂವಿ, ಸಂಜಯ ತೆಗ್ಗಿ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಈ ವಸ್ತುಸಂಗ್ರಹಾಲಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಸ ವಸ್ತುಗಳ ಸಂಗ್ರಹಣೆಗಿಂತ ಪುರಾತನ ಕಾಲದ ವಸ್ತುಗಳ ಸಂಗ್ರಹ ಅತ್ಯಂತ ವೆಚ್ಚದಾಯಕವಾಗಿದೆ. ಹೊಸ ತಂತ್ರಜ್ಞಾನದ ಯುಗದಲ್ಲಿ ಪುರಾತನ ಬೆಲೆಬಾಳುವ ವಸ್ತುಗಳ ಸಂಗ್ರಹಣೆಯಲ್ಲಿ ತೊಡಗಿರುವ ಬಸವರಾಜ ದಲಾಲ್ ಪರಿವಾರದ ಶ್ರಮ ಶ್ಲಾಘನೀಯ.

ಡಾ.ವಿಜಯ ಹಂಚಿನಾಳ, ಹೃದ್ರೋಗತಜ್ಞ, ಮಹಾಲಿಂಗಪುರ

ನಮ್ಮ ಕಾಲಘಟ್ಟದಲ್ಲಿ ಮತ್ತು ನಮಗಿಂತ ಹಿಂದಿನವರು ಬಳಸಿದ ವಿವಿಧ ಮಾದರಿ ವಸ್ತುಗಳನ್ನು ನೋಡಿ ನಮಗೆ ಮತ್ತೆ ನಮ್ಮ ಬಾಲ್ಯ ನೆನಪಾಯಿತು.

ಡಾ.ಮಹಾವೀರ ದಾನಿಗೊಂಡ, ತೇರದಾಳ

ನಮಗೆ ವಸ್ತುಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಅದೇ ರೀತಿ ಇಲ್ಲಿ ಹಳೆ ಕಾಲದ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಸಣ್ಣಪುಟ್ಟ ವಸ್ತುಗಳನ್ನು ಸಂಗ್ರಹಿಸಿದ್ದೇವೆ. ನಮ್ಮಲ್ಲಿ ಇರದ ಪುರಾತನ ವಸ್ತುಗಳನ್ನು ಯಾರೇ ನೀಡಿದರೂ ಅವುಗಳನ್ನು ಪಡೆದು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಅವುಗಳ ಅರಿವಾಗಲಿ ಎಂಬ ಸದುದ್ದೇಶದಿಂದ ನಮ್ಮ ಪರಿವಾರದವರು ಈ ಕೆಲಸ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಪಾರ್ಮಹೌಸನಲ್ಲಿ ವಿಶೇಷ ವಸ್ತುಗಳ ಸಂಗ್ರಹಾಲಯ ಮಾಡುವ ಯೋಜನೆ ಕೂಡಾ ರೂಪಿಸಿದ್ದೇವೆ. ತಾಲೂಕಿನ ಸುತ್ತ ಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರಾಚೀನ ಬದುಕಿನ ಸಚಿತ್ರ ಅನುಭವ ಮೂಡಿಸಲು ಇದು ಅನುಕೂಲವಾಗಲಿದೆ.

ಬಸವರಾಜ ದಲಾಲ, ಪರಿವಾರದ ಹಿರಿಯರು