ಮೌಲ್ಯಗಳ ಶ್ರೇಷ್ಠತೆಯ ವರ್ಧನೆಯೇ ಪರಂಪರೆ: ರಾಘವೇಶ್ವರ ಶ್ರೀ

| Published : Jul 19 2024, 12:47 AM IST

ಸಾರಾಂಶ

ಮೌಲ್ಯಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ದಾಟಬೇಕು. ಶ್ರೇಷ್ಠತೆಯನ್ನು ಮುಂದುವರಿಸುವ ಸರಣಿಯೇ ನಿಜ ಅರ್ಥದಲ್ಲಿ ಪರಂಪರೆ.

ಗೋಕರ್ಣ: ಹಿಂದಿನ ಪೀಳಿಗೆಯ ಶ್ರೇಷ್ಠತೆಯನ್ನು ಮುಂದಿನ ಪೀಳಿಗೆಗೆ ಒಯ್ಯುವ ಜತೆಗೆ ಅದನ್ನು ವರ್ಧಿಸಿ ಮತ್ತಷ್ಟು ಶ್ರೇಷ್ಠವಾಗಿಸುವುದೇ ಪರಂಪರೆ. ಹಿಂದಿನ ಎಲ್ಲ ಒಳಿತುಗಳು ಮುಂದಿನ ಪೀಳಿಗೆಗೆ ತಲುಪಿದಾಗ ಅದು ಮತ್ತಷ್ಟು ಶ್ರೇಷ್ಠವಾಗುತ್ತದೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.ಗೋಕರ್ಣದ ಅಶೋಕೆಯಲ್ಲಿ ಹವ್ಯಕ ಮಹಾಮಂಡಲ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಪರಂಪರಾ ಗುರುಕುಲದ ವರ್ಧಂತಿ ಉತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮೌಲ್ಯಗಳು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ದಾಟಬೇಕು. ಶ್ರೇಷ್ಠತೆಯನ್ನು ಮುಂದುವರಿಸುವ ಸರಣಿಯೇ ನಿಜ ಅರ್ಥದಲ್ಲಿ ಪರಂಪರೆ. ಪ್ರತಿ ಜಾತಿ, ಧರ್ಮಗಳ ಪರಂಪರೆ ಮುಂದುವರಿಯಬೇಕು ಎಂದು ಸ್ವಾಮೀಜಿ ಆಶಿಸಿದರು.ಪದವೀಧರರನ್ನು ಉತ್ಪಾದಿಸುವ ಕಾರ್ಖಾನೆಗಳಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆ ಪರಂಪರೆಯನ್ನು ಬೆಳೆಸುವ ಕಾರ್ಯ ಮಾಡುತ್ತಿಲ್ಲ. ಈ ಕೊರತೆಯನ್ನು ನೀಗಿಸುವ ಪ್ರಯತ್ನವೇ ಪರಂಪರಾ ಗುರುಕುಲದ ಪರಿಕಲ್ಪನೆ. ನಮ್ಮ ಪರಂಪರೆಯನ್ನು ಕಾಪಾಡಿಕೊಳ್ಳದಿದ್ದರೆ ಮುಂದೊಂದು ದಿನ ಅತಂತ್ರಭಾವ ಕಾಡುತ್ತದೆ ಎಂದು ಎಚ್ಚರಿಸಿದರು.ಮೈಸೂರಿನ ಭಾರತೀ ಯೋಗಧಾಮದ ಮುಖ್ಯಸ್ಥ ಡಾ. ಶಂಕರನಾರಾಯಣ ಜೋಯಿಸ್ ಅವರು, ಭಾರತೀಯ ಸಂಸ್ಕೃತಿಗೂ ಗುರುಶಿಷ್ಯ ಪರಂಪರೆಗೂ ಅವಿನಾಭಾವ ಸಂಬಂಧ ಇದೆ. ನಮ್ಮ ನಾಡಿನ ಮೌಲ್ಯಗಳನ್ನು, ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿರುವುದೇ ಈ ಗುರುಶಿಷ್ಯ ಪರಂಪರೆ. ತಾಯಿ- ಮಗುವಿಗೆ ಹೇಳಿಕೊಡುವಲ್ಲಿಂದ ಹಿಡಿದು, ಮಗು ಬೇರೆಯವರಿಂದ ಕಲಿಯುವುದು ಕೂಡಾ ಈ ಪರಂಪರೆಯ ಭಾಗ. ಆದರೆ ಇದು ಲೌಕಿಕಕ್ಕೆ ಸೀಮಿತ. ಅಲೌಕಿಕ ತತ್ವಗಳನ್ನು ಬೋಧಿಸುವವನು ನಿಜವಾದ ಗುರು ಎಂದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಕೊಣಾಲೆ ಸುಬ್ರಹ್ಮಣ್ಯ ಭಾರತಿಯವರು, ಪರಂಪರೆ ಇಲ್ಲಿ ಸಾಂಸ್ಥಿಕ ರೂಪವನ್ನು ಪಡೆದಿದೆ. ಸಮಾಜದಲ್ಲಿ ಶಾಂತಿ- ಸಮೃದ್ಧಿಗೆ ಜ್ಞಾನ ಅಗತ್ಯ. ಇಂಥ ನಿಜಜ್ಞಾನವನ್ನು ಗುರುಕುಲಗಳು ನೀಡುತ್ತವೆ. ಅದ್ವೈತ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಪರಿಪೂರ್ಣವಾಗುತ್ತದ ಎಂದು ಅಭಿಪ್ರಾಯಪಟ್ಟರು.

ಪರಂಪರಾ ಗುರುಕುಲದ ಪ್ರಾಚಾರ್ಯರಾದ ವಿದ್ವಾನ್ ನರಸಿಂಹ ಭಟ್- ಚಂಪಾ ದಂಪತಿ ಸಭಾಪೂಜೆ ನೆರವೇರಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಯೆ ಅಕ್ಷತಾ ವರದಿ ವಾಚನ ಮಾಡಿದರು. ಅರ್ಪಿತಾ ಹೆಗಡೆ ಪ್ರತಿಭಾ ಪುರಸ್ಕಾರ ನಿರ್ವಹಿಸಿದರು. ಸುಧನ್ವ ಆರ್ಯ ಕಾರ್ಯಕ್ರಮ ನಿರೂಪಿಸಿ, ಮಂಜುನಾಥ ಹೆಗಡೆ ವಂದಿಸಿದರು.ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಪರಂಪರಾ ವಿಭಾಗದ ವರಿಷ್ಠಾಚಾರ್ಯ ಸತ್ಯನಾರಾಯಣ ಶರ್ಮಾ, ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಶಿಕ್ಷಣ ಸಂಯೋಜಕರಾದ ಅಶ್ವಿನಿ ಉಡುಚೆ, ಸಾರ್ವಭೌಮ ಗುರುಕುಲದ ಪಿಯು ವಿಭಾಗದ ಪ್ರಾಚಾರ್ಯೆ ಶಶಿಕಲಾ ಕೂರ್ಸೆ, ಮುಖ್ಯೋಪಾಧ್ಯಾಯಿನಿ ಸೌಭಾಗ್ಯ ಭಟ್ಟ, ಶಿವಗುರುಕುಲದ ಪ್ರಾಚಾರ್ಯ ಮಂಜುನಾಥ ಭಟ್ ಉಪಸ್ಥಿತರಿದ್ದರು.