ಚಾಮರಾಜನಗರ ದಸರಾ ಮಹೋತ್ಸವ-2026ರ ಅಂಗವಾಗಿ ನಗರದ ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳನ್ನು ಪರಿಚಯಿಸುವ ಸಲುವಾಗಿ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮ ಗಮನ ಸೆಳೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ದಸರಾ ಮಹೋತ್ಸವ-2026ರ ಅಂಗವಾಗಿ ನಗರದ ಐತಿಹಾಸಿಕ ಹಾಗೂ ಪಾರಂಪರಿಕ ಸ್ಥಳಗಳನ್ನು ಪರಿಚಯಿಸುವ ಸಲುವಾಗಿ ಆಯೋಜಿಸಿದ್ದ ಪಾರಂಪರಿಕ ನಡಿಗೆ ಕಾರ್ಯಕ್ರಮ ಗಮನ ಸೆಳೆಯಿತು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಮಕ್ಕಳು, ವಿದ್ಯಾರ್ಥಿಗಳು, ಅಧಿಕಾರಿ, ನೌಕರರು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ದಸರಾ ಪಾರಂಪರಿಕ ನಡಿಗೆಗೆ ಮೆರುಗು ತಂದರು.

ಇದೇ ವೇಳೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಚಂದ್ರಪಾಟೀಲ್ ಮಾತನಾಡಿ, ಪಾರಂಪರಿಕ ನಡಿಗೆಗೆ ತನ್ನದೇ ಆದ ಇತಿಹಾಸ ಹಾಗೂ ಮಹತ್ವವಿದೆ. ದಸರಾ ಎಲ್ಲಿಯೇ ಆಗಲಿ, ಅಲ್ಲಿ ಪಾರಂಪರಿಕ ನಡಿಗೆ ಇರಲಿದೆ. ಪಾರಂಪರಿಕ ನಡಿಗೆ ಎಂದರೆ ನಡೆದುಕೊಂಡು ಹೋಗುವ ಮೂಲಕ ಆಯಾ ಸ್ಥಳಗಳ ಮಹತ್ವ, ಅಲ್ಲಿನ ಪರಂಪರೆ ಬಗ್ಗೆ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಪರಿಚಯಿಸಿ ಅರಿವು ಮೂಡಿಸುವುದೇ ಆಗಿದೆ ಎಂದರು.

ಚಾಮರಾಜನಗರ ಜಿಲ್ಲೆಯ ಪುರಾಣ ಪ್ರಸಿದ್ಧ ಹಾಗೂ ಪಾರಂಪರಿಕ ಸ್ಥಳಗಳು ನಮ್ಮ ಹೆಮ್ಮೆಯಾಗಿವೆ. ನಾಡಹಬ್ಬ ದಸರಾ ಅಂಗವಾಗಿ ಚಾಮರಾಜನಗರ ಜಿಲ್ಲೆಯಲ್ಲಿಯೂ ದಸರಾ ನಡೆಯುತ್ತಿದ್ದು, ದಸರಾದ ಪ್ರಮುಖ ಭಾಗವಾಗಿರುವ ಪಾರಂಪರಿಕ ನಡಿಗೆಯಲ್ಲಿ ನಗರದ ಪ್ರಮುಖ ಸ್ಥಳಗಳಾದ ಚಾಮರಾಜೇಶ್ವರ ದೇವಸ್ಥಾನ, ಜನನ ಮಂಟಪ, ಜೈನ ಬಸೀದಿ, ದೊಡ್ಡರಸನ ಕೊಳ, ಕೊಳದ ಗಣಪತಿ, ಸೇರಿದಂತೆ ಇತರೆ ಐತಿಹಾಸಿಕ ಸ್ಥಳಗಳ ಮಹತ್ವವನ್ನು ನಾಗರಿಕರಿಗೆ ಪರಿಚಯಿಸುವುದು ಪಾರಂಪರಿಕ ನಡಿಗೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ಡಿವೈಎಸ್‌ಪಿ ಸ್ನೇಹರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ, ಶಿಕ್ಷಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ, ದೈಹಿಕ ಶಿಕ್ಷಣ ತಾಲೂಕು ಅಧ್ಯಕ್ಷರಾದ ಶಿವಬಸವಯ್ಯ, ಶಿವಮಲ್ಲು, ಇತರೆ ಅಧಿಕಾರಿಗಳು, ಸರ್ಕಾರಿ ನೌಕರರ ಸಂಘಧ ಪದಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯ ಗೈಡ್‌ಗಳು, ಸಂಘಸಂಸ್ಥೆಯ ಪದಾಧಿಕಾರಿಗಳು, ಇತರರು ಪಾರಂಪರಿಕ ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ದಸರಾ ಪಾರಂಪರಿಕ ನಡಿಗೆಯು ಚಾಮರಾಜೇಶ್ವರ ದೇವಸ್ಥಾನದ ಆವರಣದಿಂದ ಆರಂಭವಾಗಿ ಚಾಮರಾಜ ಒಡೆಯರ್ ಜನನ ಮಂಟಪ, ಜೈನರ ಬಸದಿ, ವೀರಭದ್ರಸ್ವಾಮಿ ದೇವಸ್ಥಾನ ಹತ್ತಿರದ ಮಾರ್ಗವಾಗಿ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಮಾರ್ಗದಿಂದ ಚಾಮರಾಜೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು.