ಮಂಗಳೂರಲ್ಲಿ ಹರ್ಮನ್ ಮೋಗ್ಲಿಂಗ್ ವೃತ್ತ, ನಾಮಕರಣಕ್ಕೆ ಆಗ್ರಹ

| Published : Jul 02 2024, 01:37 AM IST

ಸಾರಾಂಶ

ಸೋಮವಾರ ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೋಗ್ಲಿಂಗ್ ಸ್ಮರಣೆಯ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರದ ಸಂಪಾದಕರಾಗಿದ್ದ ರೆವರೆಂಡ್ ಹರ್ಮನ್ ಮೋಗ್ಲಿಂಗ್ ಅವರ ಹೆಸರಿನಲ್ಲಿ ಮಂಗಳೂರಿನ ಪ್ರಮುಖ ರಸ್ತೆಗೆ ಅವರ ಹೆಸರು ಹಾಗೂ ಅವರ ಹೆಸರಿನಲ್ಲಿ ವೃತ್ತವೊಂದನ್ನು ನಿರ್ಮಿಸುವಂತೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟಾನಿ ಆಳ್ವಾರಿಸ್ ಒತ್ತಾಯಿಸಿದರು.

ಅವರು ಸೋಮವಾರ ಮಂಗಳೂರಿನ ಬಲ್ಮಠದ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಆವರಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಹರ್ಮನ್ ಮೋಗ್ಲಿಂಗ್ ಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್ ಮಾತನಾಡಿ, ಹರ್ಮನ್ ಮೋಗ್ಲಿಂಗ್ ಅವರು ಮಂಗಳೂರ ಸಮಾಚಾರ ಪತ್ರಿಕೆಯನ್ನು ಆರಂಭಿಸುವ ಮೂಲಕ ನೈಜ ಪತ್ರಿಕಾ ಧರ್ಮದ ಅಡಿಪಾಯ ಹಾಕಿದ್ದರು. ಇವತ್ತಿನ ಕಾಲ ಸಂದರ್ಭದಲ್ಲಿ ಪತ್ರಿಕಾ ಧರ್ಮವನ್ನು ಪಾಲಿಸುವ ಬಗ್ಗೆ ಬದ್ಧತೆಯಿಂದ ಮಾಧ್ಯಮ ಸಂಸ್ಥೆಗಳು ಮತ್ತು ಪತ್ರಕರ್ತರು ಕಾರ್ಯನಿರ್ವಹಿಸಬೇಕಾಗಿದೆ ಎಂದು ಹೇಳಿದರು. ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಡಾ.ಎಚ್.ಎಂ. ವಾಟ್ಸನ್ ಮಾತನಾಡಿ, ಕಿಟೆಲ್ , ಮೋಗ್ಲಿಂಗ್, ಬ್ರಿಗೆಲ್, ಗುಂಡರ್ಟ್ ಮೊದಲಾದ ಯುಗ ಪ್ರವರ್ತಕರ ನೆನಪಿನಲ್ಲಿ ಬಾಸೆಲ್ ಮಿಷನ್ ಮ್ಯೂಸಿಯಂ ಆರಂಭಿಸುವ ಉದ್ದೇಶ ಇದೆ ಎಂದು ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಗೌರವ ಅಧ್ಯಕ್ಷ ಹರೀಶ್ ಬಂಟ್ವಾಳ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೆನ್ಯೂಟ್ ಪಿಂಟೋ ನಿರೂಪಿಸಿದರು. ಕಾರ್ಯದರ್ಶಿ ಗಿರಿಧರ್ ಶೆಟ್ಟಿ ವಂದಿಸಿದರು.