ತಾಲೂಕಿನ ಅಗಸೂರು ಪಂಚಾಯಿತಿ ವ್ಯಾಪ್ತಿಯ ಸಂದ್ಕಣಿ ಗ್ರಾಮದಲ್ಲಿ 12ನೇ ಶತಮಾನದ ಆರಂಭದ ಅವಧಿಗೆ ಸೇರಿದ ನಾಗವರ್ಮರಸನ ಕಾಲದ ವೀರಗಲ್ಲೊಂದನ್ನು ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನ ಅಗಸೂರು ಪಂಚಾಯಿತಿ ವ್ಯಾಪ್ತಿಯ ಸಂದ್ಕಣಿ ಗ್ರಾಮದಲ್ಲಿ 12ನೇ ಶತಮಾನದ ಆರಂಭದ ಅವಧಿಗೆ ಸೇರಿದ ನಾಗವರ್ಮರಸನ ಕಾಲದ ವೀರಗಲ್ಲೊಂದನ್ನು ಪತ್ತೆಯಾಗಿದೆ.

ಜಿಲ್ಲೆಯ ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ, ಮಾರುಗದ್ದೆ ಶಾಲೆಯ ಶಿಕ್ಷಕರಾದ ದಿವಾಕರ ದೇವನ್ಮನೆ, ನೀಲಕಂಠ ಗೌಡ ಹಾಗೂ ಸ್ಥಳೀಯರಾದ ಕೇಶವ ಭಂಡಾರಿ ಕ್ಷೇತ್ರ ಕಾರ್ಯದಲ್ಲಿ ಇದು ಪತ್ತೆಯಾಗಿದೆ.

ಮೊದಲನೇ ಪಟ್ಟಿಕೆಯಲ್ಲಿ ಖಡ್ಗ ಯುದ್ಧದ ಚಿತ್ರವನ್ನು, 2ನೇ ಪಟ್ಟಿಕೆಯಲ್ಲಿ ತಾಳ, ಜಾಗಟೆ ಮೃದಂಗ ಇತ್ಯಾದಿಗಳನ್ನು ಬಾರಿಸುತ್ತಿರುವ ವಾದ್ಯವೃಂದ, 3ನೇ ಪಟ್ಟಿಕೆಯಲ್ಲಿ ಬಿಲ್ವಿದ್ದೆಯ ಚಿತ್ರ, 4ನೇ ಪಟ್ಟಿಕೆಯಲ್ಲಿ ವಾನರ ಮತ್ತು ದಾನವರ ನಡುವೆ ಯುದ್ಧ ನಡೆಯುತ್ತಿರುವಂತೆ ಚಿತ್ರಿಸಲಾಗಿದೆ. 5ನೇ ಪಟ್ಟಿಯ ಅರ್ಧಭಾಗದಲ್ಲಿ ರತಿಕ್ರೀಡಾ ನಿರತ ದಂಪತಿ ಶಿಲ್ಪವನ್ನು ಇನ್ನರ್ಧ ಭಾಗದಲ್ಲಿ ಮಂಟಪ ಒಂದರಲ್ಲಿ ವಾನರ ದಂಪತಿಗಳಿಬ್ಬರು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ವೀರಗಲ್ಲೊಂದರಲ್ಲಿ ವಾನರರು ಶಿವಲಿಂಗಕ್ಕೆ ಅಭಿಷೇಕ ಮಾಡುವ ಶಿಲ್ಪ ಈ ಹಿಂದೆ ಬೇರೆಲ್ಲಿಯೂ ದೊರೆತ ಉದಾಹರಣೆಗಳಿಲ್ಲ. ಇದೊಂದು ಅಪರೂಪದ ಶಿಲ್ಪವಾಗಿದೆ. ಅದರ ಮೇಲಿನ 6ನೇ ಪಟ್ಟಿಯಲ್ಲಿ ವೀರನೊಬ್ಬ ಕುದುರೆ ಸವಾರರು ಮತ್ತು ಕಾಲಾಳುಗಳೊಂದಿಗೆ ಏಕಕಾಲದಲ್ಲಿ ಹೋರಾಡುತ್ತಿದ್ದು ವೀರನ ಕಾಲ ಕೆಳಗೆ ಒಂದಿಷ್ಟು ಜನ ಸೈನಿಕರು ಸತ್ತು ಬಿದ್ದಂತೆ ಚಿತ್ರಿಸಲಾಗಿದೆ. ಎಲ್ಲಕ್ಕಿಂತ ಮೇಲಿನ 7ನೇ ಪಟ್ಟಿಕೆಯಲ್ಲಿ ಆನೆಗಳಿಂದ ಅಭಿಷೇಕಗೊಳ್ಳುತ್ತಿರುವ ಲಕ್ಷ್ಮಿಯ ಉಬ್ಬು ಚಿತ್ರವಿದೆ.

ಈ ಕುರಿತು ವಿವರ ನೀಡಿದ ಶ್ಯಾಮಸುಂದರ ಗೌಡ, ಸಂದ್ಕಣಿಯಲ್ಲಿ ದೊರೆತ ವೀರಗಲ್ಲು ಐದು ಅಡಿ ಎತ್ತರ, 22 ಅಂಗುಲ ಅಗಲವಿದೆ. ಒಟ್ಟು ಏಳು ಪಟ್ಟಿಕೆಗಳಲ್ಲಿ ಇದನ್ನು ಚಿತ್ರಿಸಲಾಗಿದ್ದು ಇದರಲ್ಲಿ ಯಾವುದೇ ಬರವಣಿಗೆ ಇಲ್ಲ, ಇದೊಂದು ಶಾಸನ ರಹಿತ ವೀರಗಲ್ಲಾಗಿದೆ ಎಂದು ತಿಳಿಸಿದರು.

ಈವರೆಗೆ ನಮಗೆ ಅಂಕೋಲಾ ಕುಮಟಾ, ಹೊನ್ನಾವರ ತಾಲೂಕುಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಈ ಮಾದರಿಯ ವೀರಗಲ್ಲುಗಳು ದೊರೆತಿವೆ. ಅವೆಲ್ಲ ಶಿಲ್ಪ ಶೈಲಿಯಲ್ಲಿ ಒಂದೇ ರೀತಿಯದ್ದಾಗಿವೆ, ಅದರಲ್ಲಿ 9 ಶಿಲೆಗಳಲ್ಲಿ ಶಾಸನವಿದ್ದು ಅಲ್ಲೆಲ್ಲ ನಾಗವರ್ಮರಸನನ್ನು ಹೆಸರಿಸಲಾಗಿದೆ. ನಾಗವರ್ಮರಸ ಸಾಮಾನ್ಯ ಶಕ 1070ರಿಂದ 1113ರವರೆಗೆ ಸುಮಾರು 43 ವರ್ಷಗಳ ವರೆಗೆ ಗೋಕರ್ಣಪುರಾಧೀಶ್ವರ ಎಂಬ ಬಿರುದನ್ನು ಧರಿಸಿ ಅಂಕೋಲಾ, ಕುಮಟಾ, ಹೊನ್ನಾವರ, ಸಿದ್ದಾಪುರ ತಾಲೂಕಿನ ಭಾಗಗಳನ್ನು ಅಂದರೆ ಪ್ರಾಚೀನ ಸಂಪೂರ್ಣ ಹೈವ ಐನೂರು ಮತ್ತು ಕೊಂಕಣ ಒಂಬೈನೂರರ ದಕ್ಷಿಣ ಭಾಗಗಳನ್ನು ಆಳಿದ ಒಬ್ಬ ಅರಸ. ಈ ಅರಸನಿಗೆ ಸೇರಿದ 12 ಶಾಸನಗಳು ಈವರೆಗೂ ಲಭ್ಯವಾಗಿವೆ. ಅಂಕೋಲಾ ತಾಲೂಕಿನ ಬಡಗೇರಿ-ಅಲಗೇರಿಯ ಉತ್ತರ ಭಾಗದಲ್ಲಿ ನಾಗವರ್ಮರಸನಿಗೆ ಸೇರಿದ ವೀರಗಲ್ಲೊಂದು ಪತ್ತೆಯಾಗಿರುವುದು ಇದೇ ಮೊದಲನೆಯದು ಎಂದರು.