ಹೆಸರು ಬೆಲೆ ಕುಸಿತಕ್ಕೆ ಕಂಗಾಲಾದ ರೈತರು

| Published : Aug 12 2024, 01:04 AM IST

ಸಾರಾಂಶ

ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆ ಬಿತ್ತನೆ ಮಾಡಿದ್ದರೂ ಬೆಲೆ ಕುಸಿತದ ಹಿನ್ನೆಲೆ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವ ಸ್ಥಿತಿ ನಿರ್ಮಾಣ

ರಿಯಾಜಅಹ್ಮದ ಎಂ. ದೊಡ್ಡಮನಿ ಡಂಬಳ

ಹೋಬಳಿಯ ಗ್ರಾಮಗಳಾದ ಡಂಬಳ, ಹಳ್ಳಿಕೇರಿ, ಹಳ್ಳಿಗುಡಿ, ಯಕ್ಲಾಸಪುರ, ಕದಾಂಪುರ, ಹತ್ತಿಕಟ್ಟಿ, ಚಿಕ್ಕವಡ್ಡಟ್ಟಿ, ಹಿರೇವಡ್ಡಟ್ಟಿ ಸೇರಿದಂತೆ ಹಲವು ಕಡೆಗಳಲ್ಲಿ ಹೆಸರು ಉತ್ತಮ ಫಸಲು ನೀಡಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ.

ಕಳೆದ ವರ್ಷ ಹೆಸರು ಕಾಳು ಕ್ವಿಂಟಲ್‌ಗೆ ಗರಿಷ್ಠ ₹10 ಸಾವಿರ ದಾಟಿತ್ತು. ಈ ವರ್ಷ ₹6000ರಿಂದ ₹6500 ದರದಲ್ಲಿ ಬಿಕರಿಯಾಗುತ್ತಿದೆ. ಹಿಂದಿನ ವರ್ಷದಲ್ಲಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರು ನಿರಾಸೆಗೊಂಡಿದ್ದಾರೆ. ಅಲ್ಲದೇ ಇದಕ್ಕೆ ಕೇಂದ್ರ ಸರ್ಕಾರ ಖರೀದಿ ಕೇಂದ್ರ ಆರಂಭ ಮಾಡದಿರುವುದು ಪ್ರಮುಖ ಕಾರಣವಾಗಿದೆ ಎಂದು ರೈತರು ದೂರಿದ್ದಾರೆ.

ಸಾಮಾನ್ಯವಾಗಿ ಜೂನ್‌ನಲ್ಲಿ ಹೆಸರು ಬೆಳೆ ಬಿತ್ತನೆ ಮಾಡಲಾಗುತ್ತದೆ. ಆದರೆ ಮುಂಡರಗಿ ತಾಲೂಕಿನಾದ್ಯಂತ ಬರಗಾಲ ಎದುರಾಗಿದ್ದರಿಂದ ಬಿತ್ತನೆ ಪ್ರದೇಶ ಕಡಿಮೆಯಾಗಿತ್ತು. ಮುಂಗಾರು ಮಳೆ ಉತ್ತಮವಾಗಿ ಸುರಿದ ಕಾರಣ ಕಡಿಮೆ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.

ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆ ಬಿತ್ತನೆ ಮಾಡಿದ್ದರೂ ಬೆಲೆ ಕುಸಿತದ ಹಿನ್ನೆಲೆ ರೈತರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೆಸರು ಬೆಳೆಗೆ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಪ್ರಾರಂಭಿಸಲು ಮುಂದಾಗಬೇಕು ಎಂದು ರೈತರು ಹಾಗೂ ರೈತ ಸಂಘಟನೆಗಳು ಒತ್ತಾಯಿಸಿವೆ.

ಹೆಸರು ಕಾಳು ದರ ಕಡಿಮೆಯಾಗಿದೆ. ಸರ್ಕಾರ ಕ್ವಿಂಟಲ್‌ಗೆ ₹10 ಸಾವಿರ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿ ಕೇಂದ್ರ ಆರಂಭಿಸಬೇಕು. ಹೆಸರು ಕಾಳು ಬೆಳೆ ಕಳೆದ ವರ್ಷಕ್ಕಿಂತ ಶೇ. 50ರಷ್ಟು ದರ ಕಡಿಮೆಯಾಗಿದೆ. ಆದರಿಂದ ಸರ್ಕಾರಗಳು ಖರೀದಿ ಕೇಂದ್ರ ತೆರೆದು ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ರೈತರಾದ ಮಹ್ಮದರಫೀಕ್‌ ಸೋಮಾಪುರ, ಭೀಮಪ್ಪ ಸಂಶಿ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಹೆಸರು ಕಾಳು ಹೆಚ್ಚಾಗಿ ಬೆಳೆಯಲಾಗುತ್ತದೆ. ಸದ್ಯ ಹೆಸರು ಕಾಳು ಹಂಗಾಮು ಮುಕ್ತಾಯದ ಹಂತದಲ್ಲಿದೆ. ಆದರೆ ಕಳೆದ ತಿಂಗಳಿಂದ ದರ ಸುಧಾರಿಸದೇ ಇರುವುದರಿಂದ ರೈತರು ಕಂಗಾಲಾಗಿದ್ದು, ಶೀಘ್ರ ಖರೀದಿ ಕೇಂದ್ರ ಪ್ರಾರಂಭಿಸಿ ಕ್ವಿಂಟಲ್‌ಗೆ ₹10 ಸಾವಿರ ದರ ನಿಗದಿ ಮಾಡಬೇಕು ಎಂದು ರೈತ ಸೋಮಪ್ಪ ಹೇಳಿದ್ದಾರೆ.