ಮಳೆಗಾಲದಲ್ಲಿ ಬಿರುಗಾಳಿ, ಮಳೆಗೆ ವಿದ್ಯುತ್ ತಂತಿ ಹರಿದು ಬೀಳುವುದು, ಕಂಬಗಳು ಉರುಳುವುದು, ಪರಿವರ್ತಕಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸೇರಿ ನಾನಾ ವಿದ್ಯುತ್ ಸಮಸ್ಯೆ ತಡೆಗಟ್ಟಲು ತಾಲೂಕಿನಲ್ಲಿ ಹೆಸ್ಕಾಂ ಇಲಾಖೆ ಭರದ ತಯಾರಿ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಈಗಾಗಲೇ ಇಲಾಖೆ ಕಾರ್ಯಪ್ರವೃತ್ತವಾಗಿದೆ.

ಕತ್ತಲೆ ತಪ್ಪಿಸಲು ಸಿದ್ಧತೆ; ಕಂಬ–ತಂತಿ ಪರಿಶೀಲನೆ

ವಿದ್ಯುತ್ ಅವಘಡ ತಡೆಗೆ ಹೆಸ್ಕಾಂ ಕಸರತ್ತು: ಕಂಬ, ಟಿಸಿ ಬದಲಾವಣೆ ಕಾರ್ಯ ಚುರುಕು

ತಾಲೂಕಿನಾದ್ಯಂತ ವಿದ್ಯುತ್ ಕಂಬ, ಟಿಸಿ ಬದಲಿಸಲು ಮುನ್ನೆಚ್ಚರಿಕೆ ಕ್ರಮ

ರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ಮಳೆಗಾಲದಲ್ಲಿ ಬಿರುಗಾಳಿ, ಮಳೆಗೆ ವಿದ್ಯುತ್ ತಂತಿ ಹರಿದು ಬೀಳುವುದು, ಕಂಬಗಳು ಉರುಳುವುದು, ಪರಿವರ್ತಕಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಸೇರಿ ನಾನಾ ವಿದ್ಯುತ್ ಸಮಸ್ಯೆ ತಡೆಗಟ್ಟಲು ತಾಲೂಕಿನಲ್ಲಿ ಹೆಸ್ಕಾಂ ಇಲಾಖೆ ಭರದ ತಯಾರಿ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಈಗಾಗಲೇ ಇಲಾಖೆ ಕಾರ್ಯಪ್ರವೃತ್ತವಾಗಿದೆ.

ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿ 34347 ಅಧಿಕ ಮನೆಗಳಿಗೆ ವಿದ್ಯುತ್ ಅಳವಡಿಸಿಕೊಳ್ಳಲಾಗಿದೆ. ಇದರ ಹೊರತಾಗಿ 3710 ವಾಣಿಜ್ಯ ಮಳಿಗೆ, 473 ಕೈಗಾರಿಕೋದ್ಯಮಗಳು, ಸೇರಿ ನಾನಾ ಕ್ಷೇತ್ರಗಳಲ್ಲಿ ವಿದ್ಯುತ್ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಪ್ರತಿ ವರ್ಷ ಮಳೆಗಾಲ ಸಂದರ್ಭದಲ್ಲಿ ಬಿರುಗಾಳಿ, ಮಳೆ, ಸಿಡಿಲು, ಗುಡುಗಿನಿಂದ ಅನೇಕ ವಿದ್ಯುತ್ ಅವಘಡಗಳು ಸಂಭವಿಸುವುದು ಸಾಮಾನ್ಯವಾಗಿದೆ. ಇದರಿಂದ ಸಾವು-ನೋವುಗಳು ಕೂಡ ಆಗಿವೆ. ಮಳೆಯಿಂದ ಆಗುವ ಅನಾಹುತಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಈಗಿನಿಂದಲೇ ಹೆಸ್ಕಾಂ ಇಲಾಖೆ ನಾನಾ ರೂಪುರೇಷೆ ಸಿದ್ಧಪಡಿಸಿಕೊಂಡು, ಕಾರ್ಯರೂಪಕ್ಕೆ ತರುವಲ್ಲಿ ನಿರತವಾಗಿದೆ.

ಸರ್ವಿಸ್ ವೈರ್‌ಗಳಿಂದ ಅತಿಹೆಚ್ಚು ಸಮಸ್ಯೆ:

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಬಗಳಿಗೆ ಅಳವಡಿಸಿರುವ ಸರ್ವಿಸ್ ವೈರ್‌ಗಳಿಂದ ಅತಿ ಹೆಚ್ಚು ಸಮಸ್ಯೆಗಳು ಎದುರಾಗುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ಗಾಳಿ, ಮಳೆಯಿಂದಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್, ತುಂಡಾಗಿ ಬೀಳುವುದು ಸೇರಿ ನಾನಾ ಅನಾಹುತಗಳು ಸಂಭವಿಸುತ್ತವೆ.

ಜಂಗಲ್ ಕಟಿಂಗ್:

ತಾಲೂಕಿನಲ್ಲಿ 658 ಕೀಮೀ ಜಂಗಲ್ ಕಟಿಂಗ್ ಮಾರ್ಗ ಗುರುತಿಸಲಾಗಿದ್ದು, ಜಂಗಲ ಕಟಿಂಗ್ ಸಹ ನಡೆಯುತ್ತಿದೆ.

ಟಿಸಿ ಬದಲಾವಣೆ:

ಪ್ರಸಕ್ತ ಉಂಟಾದ ಅಕಾಲಿಕ ಮಳೆ ಹಾಗೂ ಸಿಡಿಲಿಗೆ 16 ವಿದ್ಯುತ್ ಪರಿವರ್ತಕಗಳು ಸಂಪೂರ್ಣ ಹಾಳಾಗಿದ್ದವು. ಇದನ್ನು ಹೆಸ್ಕಾಂ ಸಿಬ್ಬಂದಿ ಬದಲಾಯಿಸಿದ್ದಾರೆ. ಹಾಗೆ 150 ವಿದ್ಯುತ್ ಕಂಬಗಳ ಬದಲಾವಣೆ ಆಗಿದ್ದು, ಅಗತ್ಯವಿರುವ ಕಂಬಗಳ ಬದಲಾವಣೆಯ ಕಾರ್ಯವು ಇಲಾಖೆಯಿಂದ ಕೈಗೊಂಡಿದೆ. ಹಾಗೆ ಹೆಚ್ಚಿನ ಸಾಮರ್ಥ್ಯದ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗುತ್ತಿದೆ. ಇದರೊಂದಿಗೆ ಜೋತುಬಿದ್ದ ವಿದ್ಯುತ್ ತಂತಿಗಳ ಸರಿಪಡಿಸುವಿಕೆ, ಶಾರ್ಟ್ ಸರ್ಕ್ಯೂಟ್‌ಗೆ ಅವಕಾಶವಿರುವಂತಹ ತಂತಿಗಳ ಬದಲಾವಣೆಗೆ ಮಾಡಲಾಗುತ್ತಿದೆ.

ಮಳೆಗಾಲ ಆರಂಭ ಹಿನ್ನೆಲೆ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮಳೆಗಾಲದಲ್ಲಿ ಎದುರಾಗುವ ಲೈನ್ ಪ್ರಾಬ್ಲಮ್, ಜಂಗಲ್ ಕಟಿಂಗ್ ಸೇರಿ ಅಗತ್ಯ ತುರ್ತು ಸೇವೆಗಳಿಗೆ ಕೂಡಲೇ ಸ್ಪಂದಿಸಲು ಸನ್ನದ್ಧವಾಗಿರಲಿದೆ ಎನ್ನುತ್ತಾರೆ ಹೆಸ್ಕಾಂನ ಅಂಕೋಲಾದ ಎಇಇ ಪ್ರವೀಣ ನಾಯ್ಕ.ಶೇ.60ರಷ್ಟು ಸಿಬ್ಬಂದಿ ಕೊರತೆ

ಅಂಕೋಲಾ ಉಪ ವಿಭಾಗವು 983 ಚಕಿಮೀ ಭೌಗೋಳಿಕವಾಗಿ ವಿಸ್ತೀರ್ಣ ಹೊಂದಿದ್ದು, 11 ಕೆವಿ 638 ಕಿಮೀ, 1224 ಕಿಮೀ ಎಲ್‌ಟಿ ಮಾರ್ಗ ಹೊಂದಿರುವ, ಹೆಚ್ಚಿನದಾಗಿ ಗುಡ್ಡಗಾಡು ಅರಣ್ಯ ಪ್ರದೇಶವನ್ನು ಹೊಂದಿರುವ ಪ್ರದೇಶವಾಗಿದೆ. ಹೀಗಾಗಿ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಸಮಸ್ಯೆ ಇಲ್ಲಿ ಸರ್ವೇ ಸಾಮಾನ್ಯ. ಆದರೆ ಹೆಸ್ಕಾಂಗೆ ಶೇ.60ರಷ್ಟು ಸಿಬ್ಬಂದಿ ಕೊರತೆ ಇದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಹೆಸ್ಕಾಂ ಪ್ರಧಾನ ಕಚೇರಿಯಿಂದ 20 ಗ್ಯಾಂಗ್‌ಮನ್ ನೀಡಿದೆ. ಆದರೆ ಈ ಗ್ಯಾಂಗ್‌ಮನ್‌ಗಳ ಸೇವಾ ಅವಧಿ ಜೂ.30ರಂದು ಕೊನೆಗೊಳ್ಳಲಿದೆ. ಅವರ ಸೇವಾ ಅವಧಿ ಮುಂದುವರಿಸಿ, ಗುಣಮಟ್ಟದ ವಿದ್ಯುತ್ ಸೇವೆ ನೀಡಲು ಹೆಸ್ಕಾಂ ಮುಂದಾಗಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.